ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತಾಗಿ ಸಚಿವ ಸಂಪುಟ ಸಭೆಯ ತೀರ್ಮಾನಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ- ಸಿದ್ದರಾಮಯ್ಯ

ಸಪ್ತಸಾಗರ ವಾರ್ತೆ, ಬೆಂಗಳೂರು, ಅ. 29: ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತಾಗಿ ಸಚಿವ ಸಂಪುಟ ಸಭೆಯ ತೀರ್ಮಾನಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.
ಇಂದು ವಿಧಾನಸೌಧದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿಯ ಅನುಷ್ಠಾನದ ಕುರಿತಂತೆ ಇರುವ ಸಮಸ್ಯೆಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೋಸ್ಟರ್ ಜಾರಿ ಕುರಿತಾಗಿ ಎಲ್ಲರ ಅಹವಾಲುಗಳನ್ನು ಆಲಿಸಬೇಕು. ಯಾವುದೇ ಜಾತಿಗಳಿಗೂ ರೋಸ್ಟರ್ ನಲ್ಲಿ ಅನ್ಯಾಯವಾಗದಂತೆ ಖಾತ್ರಿಪಡಿಸಬೇಕು ಎಂದು ಅವರು ಸೂಚಿಸಿದರು.
ಜಾತಿ ಪ್ರಮಾಣ ಪತ್ರ ಯಾವ ರೀತಿಯಲ್ಲಿ ನೀಡಬೇಕು ಎಂಬ ಕುರಿತು ವಿವರವಾದ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗಿದೆ. ನೇಮಕಾತಿಗೆ ಇದ್ದ ನಿರ್ಬಂಧವನ್ನು ತೆರವುಗೊಳಿಸಿದ ಬಳಿಕ ಅಭ್ಯರ್ಥಿಗಳ ವಯೋಮಿತಿಯನ್ನು ಒಂದು ಅವಧಿಗೆ ಹೆಚ್ಚಳ ಮಾಡಲಾಗಿದೆ. ಕೆಇಎಯಲ್ಲಿ ಈಗಾಗಲೇ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ ಎಂದರು.
ಒಳ ಮೀಸಲಾತಿ ಜಾರಿ ಕುರಿತಾಗಿ ಸುಪ್ರೀಂಕೋರ್ಟ್ ನಿರ್ದೇಶನಗಳ ಪ್ರಕಾರ ಕಾಯ್ದೆ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಚಿವರಾದ ಜಿ.ಪರಮೇಶ್ವರ್, ಎಚ್.ಸಿ.ಮಹಾದೇವಪ್ಪ, ಕೆ.ಎಚ್.ಮುನಿಯಪ್ಪ, ಶಿವರಾಜ ತಂಗಡಗಿ, ಎಚ್.ಕೆ.ಪಾಟೀಲ್, ಪ್ರಿಯಾಂಕ ಖರ್ಗೆ, ಬಿ.ಆರ್.ತಿಮ್ಮಾಪುರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಉಪಸ್ಥಿತರಿದ್ದರು.

Share this