ಸಪ್ತಸಾಗರ ವಾರ್ತೆ ವಿಜಯಪುರ, ನ. 1:
ವಿಶಾಲವಾದ ಕನ್ನಡನಾಡು ಮತ್ತು ನುಡಿಯು ಶತ-ಶತಮಾನಗಳಿಂದ ಹಲವಾರು ಅರಸು ಮನೆತನಗಳ ಆಡಳಿತಕ್ಕೆ ಒಳಪಟ್ಟಿತ್ತು. ಮೌರ್ಯರು, ಶಾತವಾಹನರು, ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯದವರು, ಬಹಮನಿ, ಆದಿಲ್ ಶಾಹಿ, ಬರೀದ್ ಶಾಹಿ ಸಾಮ್ರಾಜ್ಯಗಳ ಸುಲ್ತಾನರು, ಮೈಸೂರಿನ ಒಡೆಯರು, ಹೈದರ್-ಟಿಪ್ಪು ಸುಲ್ತಾನರು ಮತ್ತು ಮರಾಠಾ-ಪೇಶ್ವೆಗಳಂತಹ ಮುಂತಾದ ಮನೆತನಗಳ ಸಾಮ್ರಾಟರು ಮತ್ತು ಆಡಳಿತಗಾರರೂ ಕೂಡ ಕನ್ನಡ ಭಾಷೆಯ ಸಾಹಿತ್ಯ ಮತ್ತು ಸಂಸ್ಕೃತಿ ಹಾಗೂ ಅಸ್ಮಿತತೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಬೃಹತ್ ಹಾಗೂ ಮಧ್ಯಮ, ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ಶನಿವಾರ ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ 70ನೇ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡ ಭಾಷೆಯ ಸಾರ್ವತ್ರಿಕತೆಗಾಗಿ, ಮೈಸೂರಿನ ಒಡೆಯರ್ ಅವರ ಬೆಂಬಲ ಹಾಗೂ ದಿವಾನ್ ವಿಶ್ವೇಶ್ವರಯ್ಯನವರ ಸಹಕಾರದೊಂದಿಗೆ ೧೯೧೫ ರಲ್ಲಿ ಸ್ಥಾಪನೆಗೊಂಡ ಕರ್ನಾಟಕ ಸಾಹಿತ್ಯ ಪರಿಷತ್ತು ನಿರಂತರವಾಗಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸುವ ಮೂಲಕ ಕನ್ನಡ ನಾಡು ಮತ್ತು ನುಡಿಯ ಕುರಿತಾಗಿ ಜನಾಭಿಪ್ರಾಯವನ್ನು ಗಟ್ಟಿಗೊಳಿಸುವ ಕಾರ್ಯವನ್ನು ಆರಂಭಿಸಿತು. ೧೯೨೪ ರಲ್ಲಿ ಕರ್ನಾಟಕ ಏಕೀಕರಣ ಸಮಿತಿಯ ಪ್ರಥಮ ಸಮ್ಮೇಳನವು ಬೆಳಗಾವಿಯಲ್ಲಿ ಜರುಗಿತು. ತದನಂತರ ಬಳ್ಳಾರಿ, ಧಾರವಾಡ, ಹುಕ್ಕೇರಿ, ಸೊಲ್ಲಾಪುರ ಹಾಗೂ ಮುಂಬಯಿಗಳಲ್ಲಿ ಜರುಗಿ, ನವ ಕರ್ನಾಟಕ ರಾಜ್ಯದ ಏಕೀಕರಣದ ಕನಸನ್ನು ನನಸಾಗಿಸಲು ಪಣ ತೊಟ್ಟವು.
ಗದುಗಿನ ಹುಯಿಲಗೋಳ ನಾರಾಯಣರಾಯರವರು ರಚಿಸಿದ “ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು” ಎಂಬ ಗೀತೆ ಕನ್ನಡಿಗರಲ್ಲಿ ಏಕತೆಯ ಭಾವನೆಯನ್ನು ಗಟ್ಟಿಗೊಳಿಸಲು ಪ್ರೇರಣೆಯನ್ನು ನೀಡಿ ಕನ್ನಡಿಗರ ಮೈ ಮನಗಳನ್ನು ಹುರುದುಂಬಿಸಿತು ಎಂದು ತಿಳಿಸಿದರು.
ಸಂಯುಕ್ತ ಕರ್ನಾಟಕ, ವಿಶ್ವ ಕರ್ನಾಟಕ ಮತ್ತು ಪ್ರಬುದ್ಧ ಕರ್ನಾಟಕ ಮೊದಲಾದ ಪತ್ರಿಕೆಗಳು ಕರ್ನಾಟಕ ಏಕೀಕರಣ ಚಳುವಳಿಯ ಪ್ರಭಾವದಲ್ಲಿಯೇ ಉದಯೋನ್ಮುಖವಾದವು. ಕರ್ನಾಟಕ ಏಕೀಕರಣ ಸಂಘದ ಪದಾಧಿಕಾರಿಗಳಾದ ಎಸ್.ನಿಜಲಿಂಗಪ್ಪ, ಅಂದಾನಪ್ಪ ದೊಡ್ಡಮೇಟಿ, ಮಂಗಳವೇಡೆ ಶ್ರೀನಿವಾಸರಾಯ ಮತ್ತು ಶಾಂತಪ್ಪ ಯಳಮೇಲಿ ಅವರ ಪರಿಶ್ರಮದಿಂದ ಏಕೀಕರಣ ಚಳುವಳಿಯು ತೀವ್ರವಾದ ರಾಜಕೀಯ ಸ್ವರೂಪವನ್ನು ಪಡೆದುಕೊಂಡ ಪ್ರಯುಕ್ತ, ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ ಉದಯವಾಯಿತು. ಕೆಂಗಲ್ ಹನುಮಂತಯ್ಯ, ಅದರಗುಂಚಿ ಶಂಕರಗೌಡ ಪಾಟೀಲ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಅಳವಂಡಿ ಶಿವಮೂರ್ತಿ ಸ್ವಾಮಿ, ಮುದವೀಡು ಕೃಷ್ಣರಾಯ, ಮೊಹರೆ ಹನುಮಂತರಾಯ, ರಾಜಾರಾಮ ದುಬೆ, ಚನ್ನಬಸಪ್ಪ ಅಂಬಲಿ, ಚಿಕ್ಕೋಡಿ ತಮ್ಮಣ್ಣಪ್ಪ, ವಾಲಿ ಚನ್ನಪ್ಪ, ವೀರಭದ್ರಪ್ಪ ಶಿರೂರ, ಚಿನ್ಮಯಸ್ವಾಮಿ ಓಂಕಾರಮಠ, ಪಟ್ಟಣ ಮಹಾದೇವಪ್ಪ, ಬಳ್ಳಾರಿಯ ರಂಜಾನ್ಸಾಬ್ ನದಾಫ್, ಬೆನಗಲ್ ರಾಮರಾಯರು, ಬಿ.ಶಿವಮೂರ್ತಿ ಶಾಸ್ತಿç ಮುಂತಾದವರು ಏಕೀಕರಣದ ಪರವಾಗಿ ಗಟ್ಟಿ ಧ್ವನಿಯೊಂದಿಗೆ ಜನಜಾಗೃತಿಯನ್ನುಂಟು ಮಾಡಲು ಅಹರ್ನಿಸಿ ದುಡಿದರು ಎಂದರು.
ಹಲಸಂಗಿಯ ಗೆಳೆಯರ ಬಳಗ ಹಾಗೂ ಕನ್ನಡ ಪರ ಸಂಘಟನೆಗಳು ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಕನ್ನಡದ ಹಣತೆ ನಿರಂತರವಾಗಿ ಬೆಳಗುವಂತೆ ಮಾಡಲು ಅಹರ್ನಿಸಿ ದುಡಿದರು. ಅವರ ಈ ಕೊಡುಗೆ ಅನನ್ಯ ಹಾಗೂ ಪ್ರಶಂಸನೀಯವಾಗಿದೆ. ಕನ್ನಡದ ಅಸ್ತಿತ್ವವೇ ಮಸುಕಾಗಿದ್ದ ಕ್ಲಿಷ್ಟಕರ ಸನ್ನಿವೇಶದಲ್ಲಿ ಈ ಎಲ್ಲ ಮಹನೀಯರೂ ನಿಸ್ವಾರ್ಥದಿಂದ ನಡೆಸಿದ ಹೋರಾಟದ ಫಲವೇ ಇಂದು ನಾವೆಲ್ಲರೂ ಆಸ್ವಾದಿಸುತ್ತಿರುವ ಸುಂದರ ಕರ್ನಾಟಕ. ಇಂತಹ ಪ್ರಾತಃಸ್ಮರಣೀಯರೆಲ್ಲರಿಗೂ ಇಂದಿನ ಈ ಶುಭ ಸಂದರ್ಭದಲ್ಲಿ ನಮನ ಸಲ್ಲಿಸುತ್ತೇನೆ ಎಂದು ನುಡಿದರು.
ಕನ್ನಡ ಭಾಷೆಯ ಶ್ರೇಯೋಭಿವೃದ್ಧಿಗಾಗಿ ಇಂಚಗೇರಿಯ ಶ್ರೀ ಮಾಧವಾನಂದ ಪ್ರಭೂಜಿರವರ ಶ್ರೀ ಮಠದೊಂದಿಗೆ ನಾಡಿನ ಎಲ್ಲ ಶ್ರೀ ಮಠಗಳು ಕೂಡಾ ಕನ್ನಡ ಭಾಷೆಯ ಅಸ್ಮಿತತೆಗಾಗಿ ವಿಶಿಷ್ಟ ಕಾಣಿಕೆ ನೀಡಿರುವುದನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ವಿಜಯಪುರವೆಂದರೆ ಎಲ್ಲರಿಗೂ ನೆನಪಾಗುವುದು ವಿಶ್ವವಿಖ್ಯಾತ ಗೋಳಗುಮ್ಮಟ. ಅದರಂತೆಯೇ ಸರಿಸಾಟಿಯಾಗಿ ವಚನ ಗುಮ್ಮಟವೆಂಬ ಖ್ಯಾತಿಗೆ ಭಾಜನರಾದ ಡಾ. ಫ. ಗು. ಹಳಕಟ್ಟಿಯವರು ಬಸವಾದಿ ಪ್ರಮಥರ ವಚನಸಾಹಿತ್ಯವನ್ನು ಸಂಗ್ರಹಿಸಿ, ಸಂಸ್ಕರಿಸಿ, ಮುಂಬರುವ ಪೀಳಿಗೆಗಳಿಗಾಗಿ ಸಂರಕ್ಷಿಸಿಡುವ ಮೂಲಕ ಅತ್ಯಮೂಲ್ಯ ಸಾಹಿತ್ಯ ಸೇವೆಗೈದ ಅಪ್ರತಿಮರೆನಿಸಿಕೊಂಡಿದ್ದಾರೆ ಎಂದು ಹೇಳಿದರು.
ವಿಜಯಪುರ ಜಿಲ್ಲೆಯ ಪರಮಪೂಜ್ಯ ಬಂಥನಾಳ ಶಿವಯೋಗಿಗಳು, ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ನಡೆದಾಡುವ ದೇವರೆಂದೇ ಪೂಜಿಸಲ್ಪಟ್ಟ ದಾರ್ಶನಿಕ ಸಂತ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು, ಮಧುರಚನ್ನರು, ಚಡಚಣದ ಸಿಂಪಿ ಲಿಂಗಣ್ಣನವರು, ಡಾ.ಆರ್.ಡಿ.ರಾನಡೆ, ಗಣಪತರಾವ್ ಮಹಾರಾಜ, ನಿಂಗಣ್ಣ ಸಿಂಪಿ, ಧೂಲಾಸಾಹೇಬ, ರಂ.ಶ್ರೀ.ಮುಗಳಿ, ಶ್ರೀರಂಗರು, ಲಕ್ಕಪ್ಪ ಶಿರಹಟ್ಟಿ, ಡಾ.ಗುರುಲಿಂಗ ಕಾಪಸೆ, ಡಾ.ಎಂ.ಎಂ.ಕಲಬುರ್ಗಿ, ಡಾ.ಕೃಷ್ಣ ಕೊಲ್ಹಾರಕುಲಕರ್ಣಿ, ಪ್ರೊ.ಎನ್.ಜಿ.ಕರೂರ, ಪ್ರೊ.ಸಂಗಮನಾಥ ಹಂಡಿ, ಮಹಾಂತ ಗುಲಗಂಜಿ, ಶಿಶು ಸಂಗಮೇಶ, ಸಂಗಮೇಶ ಬಾಗಲಕೋಟ, ಈಶ್ವರಚಂದ್ರ ಚಿಂತಾಮಣಿ, ಶರಣಪ್ಪ ಕಂಚ್ಯಾಣಿ, ಕಾಶೀಮಸಾಬ ಹು.ವಿಜಾಪುರ, ಪಾ.ಭೀ.ಪಾಟೀಲ, ಹ.ಮ.ಅಂಬಿಗೇರ, ಈಶ್ವರ ಕಾಪಸೆ, ಡಾ.ಬಿ.ಎಸ್.ಶೇಠೆ, ಡಾ.ಎಂ.ಎನ್.ವಾಲಿ, ಡಾ.ಬಿ.ಬಿ.ಹೆಂಡಿ, ಡಾ.ಎಸ್.ಕೆ.ಕೊಪ್ಪಾ, ಡಾ.ಎಂ.ಎಂ.ಪಡಶೆಟ್ಟಿ, ಡಾ.ಚೆನ್ನಪ್ಪ ಕಟ್ಟಿ, ಪ್ರೊ.ಬಿ.ಎಂ.ಹಿರೇಮಠ, ಡಾ.ಆರ್.ಸಿ.ಮುದ್ದೇಬಿಹಾಳ, ಡಾ.ಅರವಿಂದ ಮಾಲಗತ್ತಿ, ಡಾ.ರಾಜಶೇಖರ, ಹ.ಮ.ಪೂಜಾರ, ದಾನಪ್ಪ ಜತ್ತಿ, ಪ್ರೊ.ಬಿ.ಆರ್.ಪೋಲಿಸ್ಪಾಟೀಲ, ಅರ್ಜುನ ಗೊಳಸಂಗಿ, ಡಾ.ಅಮೀರುದ್ದೀನ ಖಾಜಿ, ಸೋಮನಾಥ ಯಾಳವಾರ, ಎ.ಕೆ.ರಾಮೇಶ್ವರ, ರಂಜಾನ್ ದರ್ಗಾ, ಡಾ.ಸಿ.ಆರ್.ಯರವಿನತೆಲಿಮಠ ಮತ್ತು ಡಾ.ಎಂ.ಎಸ್.ಮದಭಾವಿಯವರೂ ಸೇರಿದಂತೆ ಇನ್ನೂ ನೂರಾರು ಹಿರಿಯರು ಮತ್ತು ಇತ್ತೀಚಿಗಿನ ಹಲವಾರು ಯುವಸಾಹಿತಿಗಳು ತಮ್ಮ ವಿಶಿಷ್ಟ ಬರವಣಿಗೆಗಳ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿನ ನಮ್ಮ ಸರ್ಕಾರವು ಶೃದ್ಧೆ, ನಿಷ್ಠೆ ಮತ್ತು ಕಾಳಜಿ ಪೂರ್ವಕವಾದ ಜನಪರ ನಿಲುವುಗಳೊಂದಿಗೆ ಕಾರ್ಯನಿರ್ವಹಿಸುತ್ತ ಕರ್ನಾಟಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದೆ.ದೇಶದಾದ್ಯಂತ ಸಂಚಲನ ಸೃಷ್ಠಿಸಿರುವ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳ ಬದುಕಿನಲ್ಲಿ ಬೆಳಕು ಮತ್ತು ಭರವಸೆ ತುಂಬುವಲ್ಲಿ ಸಫಲವಾಗಿವೆ ಎಂದರು.
ಅನ್ನಭಾಗ್ಯ ಯೋಜನೆ”ಯಡಿಯಲ್ಲಿ ಅಂತ್ಯೋದಯ ಅನ್ನಯೋಜನೆಯ ೪೦,೦೬೫ ಚೀಟಿಗಳು, ಬಿ.ಪಿ.ಎಲ್ ೪,೫೯,೫೫೮ ಚೀಟಿಗಳು ಹಾಗೂ ಎ.ಪಿ.ಎಲ್ ೯೯,೬೯೯ ಚೀಟಿಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ ೫,೯೯,೩೨೨ ಪಡಿತರ ಚೀಟಿಗಳು ಚಾಲ್ತಿಯಲ್ಲಿದ್ದು, ಈ ಪೈಕಿ ೨೧,೧೦,೫೯೧ ಅರ್ಹ ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಫೆಬ್ರುವರಿ-೨೦೨೫ ರಿಂದ ಡಿ.ಬಿ.ಟಿ ಹಣದ ಬದಲಾಗಿ ಪ್ರತಿ ಸದಸ್ಯರಿಗೆ ೫ ಕೆ.ಜಿ ಯಂತೆ ಒಟ್ಟು ೧೫,೮೭,೨೪೯ ಫಲಾನುಭವಿಗಳಿಗೆ ಪ್ರತಿ ತಿಂಗಳು ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ೧೧-೦೬-೨೦೨೩ ರಿಂದ ಜಾರಿಯಾಗಿರುವ ಶಕ್ತಿ ಯೋಜನೆಯು ಜಾಗತಿಕ ಮಟ್ಟದಲ್ಲಿ ಗುರ್ತಿಸಿಕೊಂಡಿದೆ ಎಂದರು.
ಶಕ್ತಿ ಯೋಜನೆಯಡಿ ಜೂನ್-೨೦೨೩ ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು ೧೫ ಕೋಟಿ ೯೮ ಲಕ್ಷ ಮಹಿಳಾ ಪ್ರಯಾಣಿಕರು ಹಾಗೂ ಬಾಲಿಕೆಯರು ವಿಜಯಪುರ ವಿಭಾಗದ ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿರುತ್ತಾರೆ, ಈ ಪ್ರಯಾಣಗಳಿಗಾಗಿ ಒಟ್ಟ್ಟು ೫೦೨ ಕೋಟಿ ೬೦ ಲಕ್ಷ ರೂಪಾಯಿಗಳ ಮೌಲ್ಯದ ಉಚಿತ ಟಿಕೆಟ್ಗಳನ್ನು ವಿತರಣೆ ಮಾಡಲಾಗಿದೆ.
ಗೃಹಲಕ್ಷ್ಮಿ ಯೋಜನೆಯು ಮಹಿಳಾ ಸಬಲೀಕರಣ ಹಾಗೂ ಸ್ವಾಭಿಮಾನದ ಹೆಗ್ಗುರುತಾಗಿದೆ. ಜುಲೈ-೨೦೨೩ ರಿಂದ ಇಲ್ಲಿಯವರೆಗೆ ಒಟ್ಟು ೫,೧೮,೩೯೮ ಫಲಾನುಭವಿಗಳು ನೋಂದಣಿಯಾಗಿದ್ದು, ೧,೯೮೩ ಕೋಟಿ ರೂಪಾಯಿಗಳ ಅನುದಾನ ಖರ್ಚು ಭರಿಸಿದ್ದು ಶೇಕಡಾ ೯೯.೫೧ ರಷ್ಟು ಪ್ರಗತಿಯಾಗಿರುತ್ತದೆ.
“ಗೃಹಜ್ಯೋತಿ ಯೋಜನೆ”ಯು ಮನೆಮನೆಗೆ ಉಚಿತವಾಗಿ ಬೆಳಕು ನೀಡುವ ಮಹೋನ್ನತ ಉದ್ದೇಶವನ್ನು ಹೊಂದಿದ್ದು ಜುಲೈ-೨೦೨೩ ರಿಂದ ಇಲ್ಲಿಯವರೆಗೆ ಒಟ್ಟು ೪,೫೫,೭೮೦ ಗ್ರಾಹಕರು ಅಂದರೆ ಶೇಕಡಾ ೯೭ ರಷ್ಟು ನೋಂದಣಿ ಮಾಡಿಕೊಂಡಿರುತ್ತಾರೆ. ಇದುವರೆಗೆ ಗ್ರಾಹಕರಿಗೆ ೪೮೫ ಕೋಟಿ ೧೧ ಲಕ್ಷ ರೂಪಾಯಿಗಳ ಮೊತ್ತದ ಉಚಿತ ವಿದ್ಯುತ್ತನ್ನು ಪೂರೈಸಲಾಗಿದೆ.
“ಯುವನಿಧಿ ಯೋಜನೆ” ಯಡಿ ಇಲ್ಲಿಯವರೆಗೆ ಒಟ್ಟು ೨೦,೦೬೦ ಅಭ್ಯರ್ಥಿಗಳು ನೋಂದಣಿಯಾಗಿದ್ದು ಇದರಲ್ಲಿ ೧೪೩೩೦ ಅರ್ಹ ಫಲಾನುಭವಿಗಳಿಗೆ ಒಟ್ಟು ೩೫ ಕೋಟಿ ೭ ಲಕ್ಷ ರೂಪಾಯಿಗಳಷ್ಟು ಮೊತ್ತದ ನಿರುದ್ಯೋಗ ಭತ್ಯೆಯನ್ನು ಡಿ.ಬಿ.ಟಿ ಮೂಲಕ ಅಭ್ಯರ್ಥಿಗಳ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ವಿವರಿಸಿದರು.
೨೦೨೫-೨೬ ನೇ ಸಾಲಿನಲ್ಲಿ ವಾಡಿಕೆಗಿಂತ ಅತ್ಯಧಿಕ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ಜೀವಹಾನಿ ಹಾಗೂ ಆಸ್ತಿ-ಪಾಸ್ತಿ ನಷ್ಟ ಉಂಟಾಗಿರುವುದು ನಮ್ಮೆಲ್ಲರಿಗೂ ಅತ್ಯಂತ ಖೇದದ ಸಂಗತಿಯಾಗಿದೆ. ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಗೊಳಗಾಗಿದ್ದು ಪರಿಹಾರ ವಿತರಣಾ ಕ್ರಮ ಜಾರಿಯಲ್ಲಿದೆ.
ದಾಖಲೆರಹಿತ ಜನವಸತಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಅಸಂಘಟಿತ ಮನೆಗಳ ೧೩,೯೦೦ ನಿವಾಸಿಗಳಿಗೆ ಕಂದಾಯ ಗ್ರಾಮ ಪರಿವರ್ತಿತ ಮನೆಗಳ ಹಕ್ಕು ಪತ್ರಗಳನ್ನು ವಿತರಿಸಿ, ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಇ-ಖಾತಾ ಹಾಗೂ ಸಬ್ ರಜಿಸ್ಟಾçರ್ ಕಚೇರಿಗಳಲ್ಲಿ ಆಸ್ತಿ ನೋಂದಣಿ ಮಾಡಿಸಲು ಕ್ರಮವಹಿಸಲಾಗಿದ್ದು ಇಲ್ಲಿಯವರೆಗೆ ೧೩,೦೧೦ ಹಕ್ಕುಪತ್ರಗಳಿಗೆ ಇ-ಖಾತಾ ರಚನೆಯಾಗಿರುತ್ತದೆ.
ದೇಶದ ಬೆನ್ನೆಲುಬಾಗಿರುವ ಅನ್ನದಾತ ರೈತರಿಗೆ ಆಪ್ತವೆನಿಸುವ ಹಲವಾರು ಯೋಜನೆಗಳ ಪೈಕಿ ಮಹಾತ್ವಾಕಾಂಕ್ಷಿಯಾಗಿರುವ ‘ಭೂಸುರಕ್ಷಾ ಯೋಜನೆ’ ಅಡಿಯಲ್ಲಿ ರೈತರು ಮತ್ತು ಜನಸಾಮಾನ್ಯರ ಬೇಡಿಕೆಯ ಮೇರೆಗೆ ಜನವರಿ-೨೦೨೫ ರಿಂದ ಇಲ್ಲಿಯರೆಗೆ ಜಿಲ್ಲೆಯಲ್ಲಿ ಒಟ್ಟು ೨ ಕೋಟಿ ೩೬ ಲಕ್ಷ ಪುಟಗಳಷ್ಟು ಅಭಿಲೇಖಾಲಯದ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಈ ಪೈಕಿ ೧,೦೫,೨೩೯ ಪುಟಗಳಷ್ಟು ದಾಖಲೆಗಳನ್ನು ಪೂರೈಸಲಾಗಿದೆ.
“ಪ್ರಜಾಸೌಧ” ಜಿಲ್ಲಾ ಕಚೇರಿ ಸಂಕೀರ್ಣ ಕಟ್ಟಡ ನಿರ್ಮಾಣ ಸಂಬಂಧವಾಗಿ ಈಗಾಗಲೇ ೫೨೯ ಲಕ್ಷ ರೂಪಾಯಿಗಳ ಅನುದಾನವು ಬಿಡುಗಡೆಗೊಂಡಿದ್ದು, ಸದ್ಯದಲ್ಲೆ ಕಾಮಗಾರಿ ಪ್ರಾರಂಭಿಸಲಾಗುವುದು.
ವಿಜಯಪುರ ತಾಲೂಕಿನ ಬುರಣಾಪೂರ ಮತ್ತು ಮದಭಾವಿ ಗ್ರಾಮ ವ್ಯಾಪ್ತಿ ಪ್ರದೇಶದಲ್ಲಿ ೩೪೮ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲ್ಪಟ್ಟಿರುವ ವಿಮಾನ ನಿಲ್ದಾಣ ಕಾಮಗಾರಿಯು ಸಂಪೂರ್ಣಗೊಂಡಿದ್ದು, ಅತೀ ಅಗತ್ಯ ಅಗ್ನಿ ಶಾಮಕ ಯಂತ್ರಗಳು ವಿದೇಶದಿಂದ ಈಗಾಗಲೇ ಬಂದಿದ್ದು, ಶೀಘ್ರದಲ್ಲಿ ಆರಂಭವಾಗಲಿದೆ ಎಂದರು.
ಫೆಬ್ರುವರಿ-೨೦೨೪ ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು ೨೬೦೭ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಉದ್ಯಮ ನೋಂದಣಿ ಪ್ರಮಾಣ ಪತ್ರ ಪಡೆದಿದ್ದು ರೂಪಾಯಿ ೭,೮೨೪ ಲಕ್ಷ ಬಂಡವಾಳ ಹೂಡಿಕೆಯೊಂದಿಗೆ ೧೬,೦೦೦ ಉದ್ಯೋಗ ಅವಕಾಶಗಳು ಸೃಷ್ಠಿಯಾಗಿರುತ್ತವೆ.
ಮುಳವಾಡ ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶ ಹಂತ-೨ ರಲ್ಲಿ ರಿಲಯನ್ಸ್ ಕಂನ್ಸೂಮರ್ ಪ್ರೊಡಕ್ಟ್ಸ್ ಲಿಮಿಟೆಡ, ಬೆಂಗಳೂರು ಇವರಿಂದ ೧೬೨೨ ಕೋಟಿ ರೂಪಾಯಿಗಳ ವೆಚ್ಚದಲ್ಲಿ ೧೨೦೦ ಉದ್ಯೋಗ ಕಲ್ಪಿಸಲಿರುವ ಪ್ಯಾಕೇಜ್ಡ್ ಕಾರ್ಬೊನೇಟೆಡ್ ಸಾಫ್ಟ ಡ್ರಿಂಕ್ಸ್ & ಡ್ರಿಂಕಿಂಗ್ ವಾಟರ್ ಸ್ಥಾಪಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರೆತಿರುತ್ತದೆ.
ಅಮೃತ ೨.೦ ಯೋಜನೆಯಡಿ ಹಂಚಿಕೆಯಾಗಿರುವ ೨೫ ಕೋಟಿ ರೂಪಾಯಿಗಳ ಪೈಕಿ ೨೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬೇಗಂ ತಲಾಬ ಹಾಗೂ ಭೂತನಾಳ ಕೆರೆಗಳನ್ನು ಪುನಃಶ್ಚೇತನಗೊಳಿಸುವ ಹಾಗೂ ಸೌಂದರ್ಯೀಕರಣ ಕಾಮಗಾರಿಗಳು ಡಿ.ಪಿ.ಆರ್ ಅನುಮೋದನೆ ಹಂತದಲ್ಲಿರುತ್ತದೆ, ಹಾಗೂ ಇನ್ನೂಳಿದ ೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ೧೦ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸುವ ಸಂಬAಧ ಟೆಂಡರ್ ಆಹ್ವಾನಿಸಲಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ೨೧ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಣಗೊಳಿಸಲಾಗಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖಾ ವ್ಯಾಪ್ತಿಯ ಸಿ.ಎಸ್.ಆರ್ ಘಟಕಗಳ ಮೂಲಕ ಜಿಲ್ಲೆಯ ಆಯ್ದ ಸರ್ಕಾರಿ ಪ್ರಾಥಮಿಕ ಶಾಲೆಗಳ ಆವರಣದಲ್ಲಿ ೧ ರಿಂದ ೨ ಎಕರೆಯಷ್ಟು ಜಮೀನು ಲಭ್ಯವಿರುವ ಶಾಲೆಗಳಲ್ಲಿ ಮಕ್ಕಳ ಸ್ನೇಹಿ ಆಟದ ಪಾರ್ಕ ನಿರ್ಮಿಸಿ ಅಗತ್ಯ ಆಟೋಪಕರಣಗಳನ್ನು ಒದಗಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
೨೦೨೫-೨೬ ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಇಲಾಖೆ ನಿಗದಿಪಡಿಸಿರುವ ೨೯ ಅಂಶಗಳ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವ್ಯಕ್ತಿಗತವಾಗಿ ಮುತುವರ್ಜಿವಹಿಸಿ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಬಂಜಾರಾ ಪ್ರೌಢಶಾಲೆ ಹಾಗೂ ಶ್ರೀ ಬಸವೇಶ್ವರ ಪ್ರೌಢಶಾಲೆಗಳ ೧೦ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸೈಕ್ಲಿಂಗ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
ಬೇನಾಳ ಆರ್.ಎಸ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ಮಸೂತಿ ಗ್ರಾಮದ ಶ್ರೀ ಬಂಥನಾಳ ಶಿವಯೋಗಿ ಪ್ರೌಢ ಶಾಲೆ ಬಾಲಿಕೆಯರ ತಂಡಗಳು ಕ್ರಮವಾಗಿ ಪ್ರಾಥಮಿಕ ಮತ್ತು ಪ್ರೌಢ ವಿಭಾಗಗಳಲ್ಲಿ ರಾಜ್ಯ ಮಟ್ಟದ ಖೋ-ಖೋ ಕ್ರೀಡೆಯಲ್ಲಿ ವಿಜಯ ಸಾಧಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ದೇವರ ಹಿಪ್ಪರಗಿ ತಾಲೂಕಿನ ಪಡಗಾನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಅಥ್ಲೇಟಿಕ್ಸ್ ಚಕ್ರ ಎಸೆತದಲ್ಲಿ, ವಿಜಯಪುರದ ಎಕ್ಸಲಂಟ್ ಪ್ರೌಢಶಾಲೆಯ ವಿದ್ಯಾರ್ಥಿನಿ ಟೆಕ್ವಾಂಡೊ ಕ್ರೀಡಾ ಸ್ಪರ್ಧೆಯಲ್ಲಿ ಹಾಗೂ ಹಿಟ್ನಳ್ಳಿಯ ಜಗದಂಬಾ ಪ್ರೌಢಶಾಲೆಯ ೫ ವಿದ್ಯಾರ್ಥಿಗಳು ಫುಟಬಾಲ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದು ಹೆಮ್ಮೆ ಎಂದರು.
ಜಿಲ್ಲೆಯಲ್ಲಿ ಎಂಜನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೆಟ್ರಿಕ್ ನಂತರದ ಎರಡು ವಸತಿ ನಿಲಯಗಳು ಆರಂಭಿಸಲು ಸರ್ಕಾರದಿಂದ ಮಂಜೂರಾಗಿವೆ.
ಪ್ರಸ್ತುತ ವಿಜಯಪುರ ತಾಲೂಕಿನ ಹಡಗಲಿ ಗ್ರಾಮದಲ್ಲಿ ೮೦೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ೪೦೦ ಕೆ ವ್ಹಿ ಸಾಮರ್ಥ್ಯದ ಸ್ವೀಕರಣಾ ಕೇಂದ್ರ ಹಾಗೂ ವಿವಿಧ ೦೬ ಸ್ಥಳಗಳಲ್ಲಿ ಹೊಸದಾಗಿ ೧೧೦/೧೧ ಕೆ.ವ್ಹಿ ವಿದ್ಯುತ್ ವಿತರಣಾ ಕೇಂದ್ರಗಳ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ.
ವಿಜಯಪುರ ತಾಲೂಕಿನ ಇಟ್ಟಂಗಿಹಾಳ, ಬಬಲೇಶ್ವರ ತಾಲೂಕಿನ ಶೇಗುಣಶಿ ಹಾಗೂ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದ ಹತ್ತಿರ ೨೨೦ ಕೆ.ವ್ಹಿ ವಿದ್ಯುತ್ ಸ್ವೀಕರಣಾ ಕೇಂದ್ರ ಸ್ಥಾಪಿಸಲು ತಾಂತ್ರಿಕ ಅನುಮೋದನೆ ದೊರೆತಿರುತ್ತದೆ.
೨೦೨೫-೨೬ನೇ ಸಾಲಿನಲ್ಲಿ ಡಿ.ಸಿ.ಸಿ ಬ್ಯಾಂಕ್ ಮೂಲಕ ೨,೪೭,೯೦೩ ಸದಸ್ಯರುಗಳಿಗೆ ೧೮೨೩ ಕೋಟಿ ರೂಪಾಯಿಗಳ ಅಲ್ಪಾವಧಿ ಬೆಳೆಸಾಲ ಹಾಗೂ ೫೮೦೬ ಸದಸ್ಯರುಗಳಿಗೆ ೧೫೯ ಕೋಟಿ ರೂಪಾಯಿಗಳ ಮಧ್ಯಮಾವಧಿ ಸಾಲ ವಿತರಿಸಲಾಗಿದೆ ಎಂದು ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ಒಟ್ಟು ೩೩,೮೦೦ ಸಂಘ-ಸಂಸ್ಥೆಗಳು ನೊಂದಣಿಯಾಗಿದ್ದು ಈ ಪೈಕಿ ೫,೯೨೮ ಸಂಘ-ಸಂಸ್ಥೆಗಳು ಚಾಲ್ತಿಯಲ್ಲಿರುತ್ತವೆ ಎಂದು ತಿಳಿಸಿದರು.
೨೦೨೫-೨೬ ನೇ ಸಾಲಿನಲ್ಲಿ ೪೫೧.೩೬ ಹೆಕ್ಟೆರ್ ಪ್ರದೇಶದಲ್ಲಿ ನೆಡುತೋಪು ಬೆಳೆಸುವ ಗುರಿ ಇದ್ದು ಕಾಮಗಾರಿಗಳು ಶೀಘ್ರ ಗತಿಯಲ್ಲಿ ಪ್ರಗತಿಯಲ್ಲಿವೆ.
೨೦೨೫-೨೬ನೇ ಸಾಲಿನ ಸಾಮಾಜಿಕ ಅರಣ್ಯ ಯೋಜನೆ ಅಡಿಯಲ್ಲಿ ರಸ್ತೆ ಬದಿಯಲ್ಲಿ ೧೭,೭೧೫ ಸಸಿಗಳನ್ನು ನೆಡಲಾಗಿದೆ. ಕಳೆದ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆ ಅಡಿಯಲ್ಲಿ ಮುಂಗಾರು ಹಂಗಾಮಿಗೆ ೪೮,೬೮೨ ರೈತರಿಗೆ ೯೮ ಕೋಟಿ ರೂಪಾಯಿಗಳು ಹಾಗೂ ಹಿಂಗಾರು ಹಂಗಾಮಿನಲ್ಲಿ ೪,೮೪೩ ರೈತರಿಗೆ ೧೫ ಕೋಟಿ ರೂಪಾಯಿಗಳು ಬೆಳೆ ವಿಮೆ ಜಮೆಯಾಗಿರುತ್ತದೆ. ಇಲ್ಲಿಯವರೆಗೆ ೧,೦೩,೩೫೪ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿರುತ್ತಾರೆ. ಅದರಂತೆಯೇ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ೧,೩೦,೭೦೯ ರೈತರು ಬೆಳೆ ವಿಮೆ ನೋಂದಣಿ ಮಾಡಿಕೊಂಡಿರುತ್ತಾರೆ ಎಂದು ತಿಳಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಲಿಂಬೆಗೆ ಜಿ.ಐ ಟ್ಯಾಗ್ ಮಾನ್ಯತೆ ದೊರೆತಿರುವುದರಿಂದ ಪ್ರಸಕ್ತ ಸಾಲಿನಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಹಾಗೂ ಅಪೆಡಾ ಅವರ ಸಹಯೋಗದೊಂದಿಗೆ ೩ ಟನ್ ಲಿಂಬೆಯನ್ನು ಯು.ಎ.ಇ ಗೆ ರಫ್ತು ಮಾಡಲಾಗಿದೆ ಎಂದರು.
ತಿಕೋಟಾ ತಾಲೂಕಿನ ಅರಕೇರಿ ಗ್ರಾಮದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ತೋಟಗಾರಿಕೆ ಉತ್ಪನ್ನಗಳ ಶೇಖರಣೆ ಹಾಗೂ ಸಂರಕ್ಷಣೆಗಾಗಿ ೧೦೧೧ ಲಕ್ಷ ಅನುದಾನದಲ್ಲಿ ೨೦೦೦ ಮೆಟ್ರಿಕ್ ಟನ್ ಸಾಮರ್ಥ್ಯದ ಶಿಥಲ್ ಗೃಹ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಆಲಮಟ್ಟಿ ಜಲಾಶಯದ ಸಂಗ್ರಹಣೆಯನ್ನು ೫೨೪.೨೫ ಮೀಟರ್ಗೆ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ ರ ಮುಳಗಡೆ ಜಮೀನು ಮತ್ತು ಕಾಲುವೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಐ-ತೀರ್ಪು ದರಗಳನ್ನು ಒಣಭೂಮಿಯ ಪ್ರತಿ ಎಕರೆಗೆ ರೂಪಾಯಿ ೩೦ ಲಕ್ಷ, ತರಿ ಜಮೀನಿಗೆ ೪೦ ಲಕ್ಷ, ಒಣಭೂಮಿ ಕಾಲುವೆ ಜಮೀನಿಗೆ ೨೫ ಲಕ್ಷ ಹಾಗೂ ತರಿ ಭೂಮಿ ಕಾಲುವೆ ಜಮೀನಿಗೆ ೩೦ ಲಕ್ಷ ರೂಪಾಯಿಗಳಂತೆ ದರ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಮುಳಗಡೆಯಾಗುವ ೧೮೪ ಗ್ರಾಮಗಳ ಜಮೀನುಗಳ ಭೂಸ್ವಾಧೀನತೆ, ೨೦ ಗ್ರಾಮಗಳ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಹಾಗೂ ೫.೯೪ ಲಕ್ಷ ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಕಾಲುವೆ ಜಾಲದ ನಿರ್ಮಾಣ ಇತ್ಯಾದಿ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು. ವರ್ಷವೂ ಕೂಡ “ವೃಕ್ಷೋಥಾನ ಹೆರಿಟೇಜ್ ರನ್” ನಿಮಿತ್ತ ೦೭.೧೨.೨೦೨೫ ರಂದು ೫, ೧೦ ಮತ್ತು ೨೧ ಕಿ.ಮೀ ದೂರವನ್ನು ಕ್ರಮಿಸುವ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿದೆ.
ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಯವರ ನೆನಪಿನಲ್ಲಿ ನಡೆಯುವ ಈ ವೄಕ್ಷೋಥಾನ್ ಹೆರಿಟೇಜ್ ರನ್ ಓಟದಲ್ಲಿ ಸಾರ್ವಜನಿಕರು, ಯುವಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿ, ಭಾಗವಹಿಸಬೇಕೆಂದು ಕೋರಿದರು.
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ನಮ್ಮ ವಿಜಯಪುರ ಜಿಲ್ಲೆಯ ಹೆಸರಾಂತ ಸಾಹಿತಿ ಹ. ಮ. ಪೂಜಾರ, ರಂಗಭೂಮಿಯ ಅತ್ಯಂತ ಶ್ರೇಷ್ಠ ಕಲಾವಿದ ಎಲ್. ಬಿ. ಶೇಖಮಾಸ್ತರ ಹಾಗೂ ಖ್ಯಾತ ಜನಪದ ಕಲಾವಿದ ಸೋಮಣ್ಣ ದುಂಡಪ್ಪ ಧನಗೊಂಡರವರು ಬಸವ ನಾಡಿನ ಕೀರ್ತಿಯನ್ನು ಹೆಚ್ಚಿಸಿದ ಪ್ರಯುಕ್ತ ಅವರೆಲ್ಲರಿಗೂ ತುಂಬು ಹೃದಯದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಅರಸು ಮನೆತನ, ಆಡಳಿತಗಾರರಿಂದ ಕನ್ನಡ ಭಾಷೆಯ ಸಾಹಿತ್ಯ ಮತ್ತು ಸಂಸ್ಕೃತಿ ಹಾಗೂ ಅಸ್ಮಿತತೆಗೆ ಅಮೂಲ್ಯ ಕೊಡುಗೆ: ಸಚಿವ ಎಂ. ಬಿ. ಪಾಟೀಲ್


