ಆಯುರ್ವೇದ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ: ಎರಡು ವಿನೂತನ ಯೋಜನೆಗಳಿಗೆ ಚಾಲನೆ

ಸಪ್ತಸಾಗರ ವಾರ್ತೆ ವಿಜಯಪುರ, ನ. 1: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಎ. ವಿ. ಎಸ್. ಆಯುರ್ವೇದ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಎರಡು ವಿನೂತನ ಯೋಜನೆಗಳಿಗೆ ಚಾಲನೆ ನೀಡಲಾಯಿತು.
ಶನಿವಾರ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಅವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಬಳಿಕ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಸಾಕ್ಷರತಾ ಸಬಲಾ ಮತ್ತು ಸ್ವಾವಲಂಬಿ ಸಬಲಾ ಯೋಜನೆಗಳಡಿ ಕಾಲೇಜಿನ ಡ ಗ್ರುಪ್ ಮಹಿಳೆಯರಿಗೆ ನಾನಾ ತರಬೇತಿಯನ್ನು ನೀಡಿ ಅವರನ್ನು ಸಬಲರನ್ನಾಗಿ ಮಾಡಲಾಗುವುದು. ಅಲ್ಲದೇ, ಎಲ್ಲ‌ ಮಹಿಳಾ ಸಿಬ್ಬಂದಿಗೆ ಈಗಿನ ವೃತ್ತಿಯ ಜೊತೆಗೆ ರುಡಶಡ್‌ ಸಂಸ್ಥೆ ಮೂಲಕ ಕರಕುಶಲ ತರಬೇತಿ ನೀಡಿ ಮಹಿಳಾ ನೌಕರರು ಆರ್ಥಿಕವಾಗಿ ಮತ್ತಷ್ಟು ಸಬಲರನ್ನಾಗಿ ಮಾಡಲಾಗುವುದು. ಅಲ್ಲದೇ, ಕಾಲೇಜಿನಲ್ಲಿ ರೋಗಿಗಳೊಂದಿಗೆ ಉತ್ತಮ ಸಂವಹನ ಹೊಂದಲು ಕಾಲೇಜಿನಲ್ಲಿ ಓದುತ್ತಿರುವ ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಕೂಡ ಯೋಜನೆ ರೂಪಿಸಲಾಗಿದೆ. ಮುಂಬರುವ ದಿನಗಳಲ್ಲಿ ನಮ್ಮ ನಡೆ ಆಯುರ್ವೇದದ ಕಡೆ ಕಾರ್ಯಕ್ರಮ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ, ಉಪಪ್ರಾಚಾರ್ಯ ಡಾ. ಶಶಿಧರ ನಾಯಕ, ಹಿರಿಯ ಪ್ರಧ್ಯಾಪಕ ಡಾ. ದರ್ಶನ ಧರಿ, ಡಾ. ಕೆ. ಎ. ಪಾಟೀಲ, ಡಾ.ಉಮಾ ಪಾಟೀಲ,ಡಾ. ಸತೀಶ ಪಾಟೀಲ. ಸಬಲಾ ಘಟಕದ ಪದಾಧಿಕಾರಿಗಳಾದ ಡಾ. ವಿಜಯಲಕ್ಷ್ಮಿ ಬೆನಕಟ್ಟಿ, ಡಾ. ಅಶ್ವಿನಿ ನಿಂಬಾಳ,ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸ್ನಾತಕೋತ್ತರ ವಿದ್ಯಾರ್ಥಿನಿ ಡಾ.ಭೂಮಿಕಾ ನಿರೂಪಿಸಿದರು.

Share this