ಬಾರಾಮತಿ ಮಾದರಿಯಲ್ಲಿಯೇ ವಿಜಯಪುರದ ಸಮಗ್ರ ಅಭಿವೃದ್ಧಿಯ ಕನಸು:ಸಚಿವ ಎಂ. ಬಿ. ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ, ನ. 1 : ನೀರು, ನೀರಾವರಿ, ಹೈನುಗಾರಿಕೆ ಹಾಗೂ ಕೈಗಾರಿಕೆ ಹೀಗೆ ಸರ್ವ ವಲಯದಲ್ಲಿಯೂ ಮಾದರಿ ಕಂಡಿರುವ ಶರದ್ ಪವಾರ ಅವರ ಬಾರಾಮತಿ ಮಾದರಿಯಲ್ಲಿಯೇ ವಿಜಯಪುರವನ್ನು ಸಮಗ್ರ ಅಭಿವೃದ್ಧಿಯ ಕನಸು ಕಂಡಿರುವೆ. ಇದಕ್ಕೆ ಪೂರಕವಾಗಿ ಹೈನುಗಾರಿಕೆಯ ಕ್ರಾಂತಿಯ ಭಾಗವಾಗಿ ಅಕ್ಷಯ ಕಲ್ಪ ಎಂಬ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ನವೋದ್ಯಮಗಳಿಗೆ ಹೊಸ ಬೆಳಕು ನೀಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಆಕ್ಸೆಲ್ ಇಂಡಿಯಾ ಸಂಸ್ಥಾಪಕ ಪ್ರಶಾಂತ್ ಪ್ರಕಾಶ ಈ ಯೋಜನೆಗೆ ಚಾಲನೆ ನೀಡಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಪ್ರಕಟಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆರೆ ತುಂಬುವ ನೀರು ಯೋಜನೆಯಿಂದ ನೀರಾವರಿ ಯೋಜನೆ ಸಾಕಾರಗೊಂಡಿದೆ, ವೃಕ್ಷೋಥಾನ್ ಮೂಲಕ ಅರಣ್ಯ ಭೂಮಿ ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ. ಈಗ ಹೈನುಗಾರಿಕೆ ಮೂಲಕ ರೈತರನ್ನು ಬಲಪಡಿಸುವ ನಿಟ್ಟಿನಲ್ಲಿ ಪೈಲಟ್ ಪ್ರಾಜೆಕ್ಟ್ ಅನುಷ್ಠಾನಗೊಳಿಸಲಾಗುತ್ತಿದ್ದು, ನಾಗರಾಳ, ಕುಮಠೆ, ನಿಡೋಣಿ ಭಾಗದಲ್ಲಿ ಹೈನುಗಾರಿಕೆ ಉತ್ತೇಜಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಯೋಜನೆ ಕೈಗೊಳ್ಳಲಾಗುತ್ತಿದ್ದು, ನವೋದ್ಯಮಗಳಿಗೆ ಹೊಸ ಬೆಳಕು ನೀಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಆಕ್ಸೆಲ್ ಇಂಡಿಯಾ ಸಂಸ್ಥಾಪಕ ಪ್ರಶಾಂತ್ ಪ್ರಕಾಶ ಈ ಯೋಜನೆಗೆ ಚಾಲನೆ ನೀಡಿ ಮಾರ್ಗದರ್ಶನ ನೀಡಲಿದ್ದಾರೆ. ಇದೊಂದು ಮಹತ್ವದ ಹೆಜ್ಜೆಯಾಗಲಿದೆ ಎಂದು ವಿವರಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸಮ್ಮೇಳನದ ಉಳಿತಾಯ ಹಣ ಸೇರಿದಂತೆ ೪ ಕೋಟಿ ರೂ. ಹಣ ಲಭ್ಯವಿದೆ. ಕೂಡಲೇ ಈ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದರು.
ಗಡಿ ಭಾಗದಲ್ಲಿ ರಾಜ್ಯೋತ್ಸವ ಶುಭ ಸಂದರ್ಭದಲ್ಲಿ ಕರಾಳ ದಿನ ಆಚರಿಸುವ ಕೆಲವೊಂದು ಮಹಾರಾಷ್ಟ್ರ ಸಂಘಟನೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಡಾ.ಎಂ.ಬಿ. ಪಾಟೀಲ, ಗಡಿವಿವಾದ ಮುಗಿದು ಹೋದ ಅಧ್ಯಾಯ. ಈ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ ಎಂದರು.
ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆಯ ವಿಷಯವನ್ನು ಕೈ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಮಾಡುವ ವಿಷಯವನ್ನು ಹಾಗೂ ಹೋರಾಟಗಾರರ ಆಶಯವನ್ನು ಈಗಾಗಲೇ ವೈದ್ಯಕೀಯ ಶಿಕ್ಷಣ ಸಚಿವರ ಮುಂದೆ ಇರಿಸಿದ್ದೇನೆ. ಶೀಘ್ರದಲ್ಲಿಯೇ ಹೋರಾಟ ನಿರತ ಸಮಿತಿಯ ಪ್ರಮುಖರ ನಿಯೋಗವನ್ನು ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿಸಿ ಜನತೆಯ ಆಶಯವನ್ನು ವಿವರಿಸುವ ಪ್ರಯತ್ನವನ್ನು ಖಂಡಿತವಾಗಿಯೂ ಮಾಡುವೆ ಎಂದು ಭರವಸೆ ನೀಡಿದರು.

ಭೂಕಂಪ ಆತಂಕ ಬೇಡ:
ಭೂಕಂಪನದ ಬಗ್ಗೆ ಯಾವ ಆತಂಕ ಬೇಡ, ಇದೊಂದು ನೈಸರ್ಗಿಕ ಸಹಜ ಪ್ರಕ್ರಿಯೆ, ಇದರಿಂದ ಯಾವ ಆತಂಕವೂ ಬೇಡ. ತಜ್ಞರ ತಂಡವನ್ನು ಕರೆಸಿ ಮತ್ತೊಮ್ಮೆ ಅಮೂಲಾಗ್ರವಾಗಿ ಪರಿಶೀಲಿಸಲಾಗುವುದು ಎಂದು ಸಚಿವ ಡಾ. ಎಂ.ಬಿ. ಪಾಟೀಲ ಅಭಯ ತುಂಬಿದರು.
ಕನ್ಹೇರಿ ಶ್ರೀ ಪ್ರವೇಶ ನಿರ್ಬಂಧ ಖಂಡಿಸಿ ಬಬಲೇಶ್ವರದಲ್ಲಿ ಬಸವಾದಿ ಶರಣರ ಸಮಾವೇಶ ಆಯೋಜನೆ ಮಾಡುವ ಪ್ರಯತ್ನದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಸವಾದಿ ಶರಣ ಸಮಾವೇಶ ಮಾಡುವುದನ್ನು ಸ್ವಾಗತಿಸುತ್ತೇನೆ. ಈಗಲಾದರೂ ಬಸವಾದಿ ಶರಣರ ಹತ್ತಿರ ಬರುತ್ತಿರುವುದು ಸ್ವಾಗತಾರ್ಹ ಎಂದರು. ಕ್ಷೇತ್ರದ ಜನರ ಮೇಲೆ ವಿಶ್ವಾಸ ಇದೆ. ಜನರು ನನ್ನ ಜೊತೆ ಇದ್ದಾರೆ. ಯಾರಿಂದಲೂ ಏನೂ ಮಾಡಲಾಗದು ಎಂದರು.
ಈ ಹಿಂದೆ ಪ್ರಧಾನಿ ಮೋದಿ, ಅಮೀತ್ ಷಹಾ, ಯೋಗಿ ಆದಿತ್ಯನಾಥ ನನ್ನ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದರೂ ಏನೂ ಆಗಲಿಲ್ಲ, ಜನತೆ ನನ್ನೊಂದಿಗೆ ಇದ್ದಾರೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ನೀಡಲಾಗಿದೆ. ಶೀಘ್ರ ನಿರ್ಮಾಣ ಆಗಲಿದೆ ಎಂದರು.
೧.೫ ಕೋಟಿ ಸಸಿಗಳನ್ನು ನೆಟ್ಟು ಹಸಿರು ಕ್ರಾಂತಿ ಮಾಡಲಾಗಿದೆ. ಕೋಟಿವೃಕ್ಷ ಆಂದೋಲನವನ್ನು ಪಕ್ಷಾತೀತವಾಗಿ ಮಾಡಲಾಗಿದೆ. ನ್ಯೂಯಾರ್ಕ್ ಟೈಮ್ಸ್ನಲ್ಲಿಯೂ ಈ ಕಾರ್ಯಕ್ಕೆ ಪ್ರಶಂಸನೆ ವ್ಯಕ್ತವಾಗಿದೆ, ವೃಕ್ಷೋಥಾನ್ ಆಂದೋಲನದಲ್ಲಿರುವ ಪ್ರತಿಯೊಬ್ಬರಿಗೂ ಆ ಲೇಖನವನ್ನು ಸಮರ್ಪಿಸುವೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಸಿ.ಎಂ. ಆಗುತ್ತಾರೆ ಎಂಬ ಯತ್ನಾಳ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಾ.ಎಂ.ಬಿ. ಪಾಟೀಲ, ಯತ್ನಾಳ ನಮ್ಮ ಪಕ್ಷದಲ್ಲಿಯೇ ಇಲ್ಲ, ನಮ್ಮ ಪಕ್ಷದ ವಿಷಯ ಅವರಿಗೆ ಹೇಗೆ ಗೊತ್ತು, ಸಚಿವ ಸಂಪುಟ ವಿಸ್ತರಣೆ ಎಲ್ಲವೂ ಹೈಕಮಾಂಡ್‌ಗೆ ಬಿಟ್ಟ ವಿಷಯ. ಆ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದರು.

Share this