ಸಪ್ತಸಾಗರ ವಾರ್ತೆ ವಿಜಯಪುರ, ನ. 2: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆಯುತ್ತಿರುವ ನಿರಂತರ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸಂಪೂರ್ಣ ಬೆಂಬಲ ಸೂಚಿಸಲಾಗಿದೆ.
ಭಾನುವಾರ ೪೬ನೇ ದಿನದಂದು ಹೋರಾಟ ಸ್ಥಳಕ್ಕೆ ಭೇಟಿ ನೀಡಿ, ಧರಣಿ ಹೋರಾಟಗಾರರನ್ನು ಪ್ರೋತ್ಸಾಹಿಸಿ, ಈ ಚಳವಳಿಯನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ್ ಕುಬಕಡ್ಡಿ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷರಾದ ಸಂಗಮೇಶ ಸಗರ ಅವರು ನೇತೃತ್ವ ನೀಡಿದ ತಂಡವು, ಹೋರಾಟ ಸ್ಥಳದಲ್ಲಿ ಭೇಟಿ ನೀಡಿ, ರಾಹುಲ್ ಕುಬಕಡ್ಡಿ ಅವರು ಮಾತನಾಡಿ ” ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಗತ್ಯತೆಯನ್ನು ಎತ್ತಿ ಹಿಡಿದು ಈ ಧರಣಿ ಹೋರಾಟವು ಜಿಲ್ಲೆಯ ಜನರ ಆರೋಗ್ಯ ಹಕ್ಕನ್ನು ರಕ್ಷಿಸುವ ಮಹತ್ವದ ಹಂತವಾಗಿದೆ. ಈ ಹೋರಾಟವು ಕೇವಲ ವೈದ್ಯಕೀಯ ಕಾಲೇಜಿನ ಸ್ಥಾಪನೆಗೆ ಮಾತ್ರವಲ್ಲ, ಉತ್ತರ ಕರ್ನಾಟಕದ ರೈತರ ಹಾಗೂ ಜನರ ಆರೋಗ್ಯ ಸುರಕ್ಷತೆಗೆ ಸಂಬಂಧಿಸಿದ್ದು. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ಕಲ್ಲು ಸೊನ್ನದ ಮಾತನಾಡಿ “ರೈತ ಸಮುದಾಯವು ಆರೋಗ್ಯ ಸೇವೆಯ ಕೊರತೆಯಿಂದ ತುಂಬಾ ಅನ್ಯಾಯಕ್ಕೆ ಒಳಗಾಗಿದೆ. ವಿಜಯಪುರದಂತಹ ಹಿಂದುಳಿದ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯು ಜನರ ಜೀವನಕ್ಕೆ ರಕ್ಷಣೆಯಾಗುತ್ತದೆ. ನಾವು ಈ ಚಳವಳಿಗೆ ಪೂರ್ಣ ಬೆಂಬಲ ನೀಡುತ್ತಿದ್ದು, ಸರ್ಕಾರದ ಯಾವುದೇ ವಿಳಂಬವನ್ನು ವಿರೋಧಿಸುತ್ತೇವೆ” ಎಂದರು.
ಹಸಿರು ಸೇನೆಯ ಪದಾಧಿಕಾರಿಗಳು ಸಹ, ಸರ್ಕಾರಿ ವೈದ್ಯಕೀಯ ಕಾಲೇಜು ಅಗತ್ಯತೆಯನ್ನು ಒತ್ತಿ ಹೇಳಿ, ಹೋರಾಟಕ್ಕೆ ತಮ್ಮ ಸಂಘಟನೆಯ ಎಲ್ಲಾ ಸದಸ್ಯರ ಬೆಂಬಲವನ್ನು ಘೋಷಿಸಿದರು.
ಹೋರಾಟ ನೇತೃತ್ವದಿಂದ, “ಕರ್ನಾಟಕ ಸರ್ಕಾರವು ತಮ್ಮ ಭರವಸೆಗಳ ಪ್ರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಬೆಂಬಲವು ನಮ್ಮ ಹೋರಾಟಕ್ಕೆ ಹೊಸ ಶಕ್ತಿಯನ್ನು ನೀಡಿದೆ” ಎಂದು ಪ್ರತಿಕ್ರಿಯಿಸಲಾಗಿದೆ. ಈ ಚಳವಳಿಯು ಇನ್ನಷ್ಟು ಸಂಘಟನೆಗಳ ಗಮನ ಸೆಳೆಯುತ್ತಿದ್ದು, ಸರ್ಕಾರದಿಂದ ಸ್ಪಷ್ಟ ಖಾತರಿಯನ್ನು ಒತ್ತಾಯಿಸುತ್ತಿದೆ.
ಹಸಿರು ಸೇನೆಯ ಪದಾಧಿಕಾರಿಗಳಾದ ರಾಮನಗೌಡ ಪಾಟೀಲ್, ಅಭಿಷೇಕ್ ಹೂಗಾರ್, ಸಂಗಪ್ಪ ಟಕ್ಕೆ, ಪ್ರಕಾಶ್ ತೇಲಿ, ಶಂಕ್ರಪ್ಪಗೌಡ ಎಸ್.ಬಿ, ಮಕ್ಬಲ್ಸಾಬ್ ಕಿಜಿ, ಸುತಪ್ಪ ಗಣಿ, ಮುದಕಣ್ಣ ಹೊರ್ತಿ, ಮಂಜುನಾಥ್ ಖಾರ, ಸಚಿನ್ ಸವನಳ್ಳಿ, ಅದ್ರ್ಯುಸಪ್ಪ ವಾಲಿ ಹಾಗೂ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಮೆಡಿಕಲ್ ಕಾಲೇಜಿಗೆ ಆಗ್ರಹಿಸಿ 46ನೇ ದಿನಕ್ಕೆ ಕಾಲಿಟ್ಟ ಧರಣಿ


