ಸಪ್ತಸಾಗರ ವಾರ್ತೆ, ವಿಜಯಪುರ ನ.4: ಕಬ್ಬಿನ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರದ ನಿರ್ಣಯ. ಬೆಲೆ ನೀಡುವಲ್ಲಿ ಸಕ್ಕರೆ ಕಾರ್ಖಾನೆ ಹಾಗೂ ರೈತರು ಇಬ್ಬರ ಸಮನ್ವಯ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ರೈತರು ಸೌಹಾರ್ದಯುತವಾಗಿ ಸಮಸ್ಯೆಯನ್ನು ಪರಿಹರಿಸಿಕೊಂಡು ಕಬ್ಬು ನುರಿಸಲು ಅವಕಾಶ ನೀಡಬೇಕು ಎಂದು ಸಕ್ಕರೆ, ಕಬ್ಬು ಅಭಿವೃದ್ದಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ರೈತರಲ್ಲಿ ಮನವಿ ಮಾಡಿಕೊಂಡರು.
ನಗರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಮ್ಮ ಸರ್ಕಾರ ರೈತಪರ ಕಾಳಜಿ ಹೊಂದಿದ ಸರ್ಕಾರವಾಗಿದೆ. ರೈತರಿಗೆ ವಿದ್ಯುತ್, ನೀರು, ಶೂನ್ಯ ಬಡ್ಡಿ ದರದಲ್ಲಿ ಸಾಲ ಸೇರಿದಂತೆ ಅನೇಕ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತದೆ. ರೈತರಿಗೆ ಯಾವುದೇ ಅನ್ಯಾಯವಾಗದಂತೆ ಸರ್ಕಾರ ನಡೆಯುತ್ತಿದೆ. ರೈತರು ಸಮಸ್ಯೆಗೆ ಸೌಹಾರ್ದಯುತವಾಗಿ ಪರಿಹಾರ ಕಂಡು ಕಂಡು ಕಬ್ಬು ನುರಿಸಲು ಅವಕಾಶ ನೀಡಬೇಕು. ಸಮಯ ಮೀರಿದರೆ ಕಬ್ಬಿನ ಸಕ್ಕರೆ ಅಂಶದಲ್ಲಿ ಕಡಿಮೆಯಾಗಿ ರೈತರಿಗೆ ಹಾನಿಯಾಗಲಿದೆ. ಒಂದು ಸೂಕ್ತ ನಿರ್ಧಾರಕ್ಕೆ ಬಂದು, ಸಮನ್ವಯ ಸಾಧಿಸಿಕೊಂಡು ಕಬ್ಬು ನುರಿಸಲು ಅವಕಾಶ ಮಾಡಿಕೊಡಬೇಕು ಎಂದರು.
ಸೂರ್ಯಕಾಂತಿ, ಮೆಕ್ಕೆಜೋಳ ಮೊದಲಾದ ಬೆಳೆಗಳಿಗೆ ಬೆಲೆ ಇಲ್ಲದಂತಾಗಿದೆ. ಕಬ್ಬಿಗೆ ಒಳ್ಳೆಯ ಬೆಲೆ ಬಂದಿದೆ. ಹೀಗಾಗಿ ಈ ಅವಕಾಶದ ಸದುಪಯೋಗ ಪಡೆದುಕೊಂಡು ಪರಸ್ಪರ ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸಿಕೊಂಡು ಕಬ್ಬು ನುರಿಸಲು ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡರು.
ಸಕ್ಕರೆ ಕಾರ್ಖಾನೆಗಳ ಆರ್ಥಿಕ ವ್ಯವಹಾರದ ಸಮಗ್ರ ವಹಿವಾಟು ವರದಿ ಸರ್ಕಾರದ ಬಳಿ ಬರುತ್ತದೆ. ಸಕ್ಕರೆ ಕಾರ್ಖಾನೆಗಳಿಗೆ ಬೇರೆ ಉತ್ಪನ್ನಗಳಲ್ಲಿ ಹೆಚ್ಚಿನ ಲಾಭ ದೊರೆತಲ್ಲಿ ರೈತರಿಗೆ ಇನ್ನಷ್ಟೂ ಹೆಚ್ಚು ದರವನ್ನು ದೊರಕಿಸಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಅಡುಗೆ ಅನೀಲ ಮಾದರಿಯಲ್ಲಿಯೇ ಸಕ್ಕರೆ ದರ ಪರಿಷ್ಕರಣೆಯಾಗಬೇಕು. ವಾಣಿಜ್ಯ ಹಾಗೂ ಗೃಹ ಬಳಕೆ ಮಾದರಿಯಲ್ಲಿ ಬೆಲೆಯನ್ನು ಪ್ರತ್ಯೇಕವಾಗಿ ನಿಗದಿ ಮಾಡಬೇಕು. ಜನರ ಉಪಯೋಗಕ್ಕಾಗಿ ಈಗಿರುವ ಸಕ್ಕರೆ ದರವನ್ನೇ ಮುಂದುವರೆಸಿ ಮೊದಲಾದ ವಾಣಿಜ್ಯ ಆಧಾರಿತ ಕೈಗಾರಿಕೆಗಳಿಗೆ ನೀಡುವ ಸಕ್ಕರೆ ದರವನ್ನು ಹೆಚ್ಚಿಸಬೇಕು. ಆಗ ಕಾರ್ಖಾನೆಗಳಿಗೂ ಪ್ರಯೋಜನವಾಗಿ ರೈತರಿಗೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರ್ಧರಿಸಬೇಕು ಎಂದು ಅವರು ಹೇಳಿದರು.
ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸಿಕೊಂಡು ಕಬ್ಬು ನುರಿಸಲು ಅವಕಾಶ ಒದಗಿಸಿ-ಸಚಿವ ಶಿವಾನಂದ ಪಾಟೀಲ ರೈತರಲ್ಲಿ ಮನವಿ


