ಸಪ್ತಸಾಗರ ವಾರ್ತೆ ವಿಜಯಪುರ, ನ. 4 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಬ್ಬುಬೆಳೆಗಾರರು ಮತ್ತು ಎಲ್ಲಾ ಪ್ರಗತಿಪರ ಸಂಘಟನೆಗಳು ಹಾಗೂ ರೈತಸಂಘಟನೆಗಳ ಸಹಯೋಗದೊಂದಿಗೆ ಪ್ರತಿ ಟನ್ ಕಬ್ಬಿಗೆ ೩೫೦೦ ರೂ ಬೆಲೆ ಘೋಷಣೆಗಾಗಿ ಹಾಗೂ ರೈತರ ವಿವಿಧ ಸಮಸ್ಯೆಗಳ ಕುರಿತು ಸೂಕ್ತ ನ್ಯಾಯ ನೀಡುವಂತೆ ಆಗ್ರಹಿಸಿ ಅನಿರ್ದಿಷ್ಟ ಹಾಗೂ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಮಂಗಳವಾರದಿಂದ ಕೈಗೊಂಡಿದ್ದಾರೆ. ನಗರದ ಗಾಂಧಿ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಗಗನ್ಮಹಲ್ ಮುಂದುಗಡೆ ಧರಣಿ ಪ್ರಾರಂಭಿಸಲಾಯಿತು.
ನಗರದ ಗಾಂಧಿ ವೃತ್ತದಲ್ಲಿ ಜಮಾವಣೆ ಆದ ನೂರಾರು ರೈತರು ಗಗನಮಹಲ್ವರೆಗೆ ಬೃಹತ್ ಮೆರವಣಿಗೆ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೊಷಣೆ ಕೂಗುತ್ತಾ ಪ್ರತಿಭಟನೆಕಾರರು ಆಗಮಿಸಿ, ಸಭೆ ಸೇರಿದರು.
ಈ ವೇಳೆ ವಿವಿಧ ರೈತ ಮುಖಂಡರು, ವಿವಿಧ ಸಂಘಟನೆಯ ಮುಖಂಡರು, ಮಹಿಳಾ ಮುಖಂಡರು ಕಬ್ಬು ಬೆಳೆಗಾರರ ಕುರಿತು ವಿಸ್ತಾರವಾಗಿ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ ಬಗ್ಗೆ ಕೆಂಡಾ ಮಂಡಲವಾಗಿ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಇವರಿಗೆ ರೈತರ ಕಷ್ಟ ಗೊತ್ತಾಗುತ್ತದೆ. ಈ ರೀತಿ ಪ್ರಕೃತಿ ವಿಕೋಪದ ನಡುವೆಯೂ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಸಾಕಷ್ಟು ನಷ್ಟ ಅನುಭವಿಸಿ ಪ್ರತಿ ಅರ್ಧ ಘಂಟೆಗೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಯಾವ ಜನಪ್ರತಿನಿಧಿಗಳು ಈ ಕುರಿತು ಧ್ವನಿ ಎತ್ತುತ್ತಿಲ್ಲ. ರೈತರಿಗೆ ಬೀಜ, ರಸಗೊಬ್ಬರ, ಕ್ರಿಮಿನಾಶಕ, ಕಾರ್ಮಿಕರ ವೇತನ ದಿನೇದಿನೇ ಹೆಚ್ಚಾಗಿ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಳವಾಗುತ್ತಿರುವುದರಿಂದ, ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಪ್ರತಿ ಟನ್ ಕಬ್ಬಿಗೆ ೩೫೦೦ ಘೋಷಣೆಮಾಡಿ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಮಾಡಬೇಕೆಂದು ಆಗ್ರಹಿಸಲಾಯಿತು.
ಸಕ್ಕರೆ ಜೊತೆಗೆ ಉಪ ಉತ್ಪನ್ನಗಳಿಂದ ಹೆಚ್ಚಿನ ಲಾಭ ಪಡೆಯುತ್ತಿರುವ ಕಾರ್ಖಾನೆಗಳು ರೈತರಿಗೆ ಅದರಲ್ಲಿಯೂ ಯೋಗ್ಯ ಲಾಭ ನೀಡಬೇಕು. ಬಾಕಿ ಉಳಿಸಿಕೊಂಡಿರುವ ರೈತರ ಬಿಲ್ನ್ನು ಬೇಗನೆ ಪಾವತಿ ಮಾಡಬೇಕು. ಅಲ್ಲಿಯವರೆಗೆ ಹೋರಾಟ ಮುಂದುವರೆಯಲ್ಲಿದೆ ಎಂದರು. ಜಿಲ್ಲೆಯಲ್ಲಿ ಅಂದಾಜು ೪ ಲಕ್ಷ ಎಕರೆ ಕಬ್ಬು ಬೆಳೆಯುತ್ತಿದ್ದು ಇದನ್ನೆ ನಂಬಿದ ನೂರಾರು ರೈತ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಜಿಲ್ಲೆಯ ಕಬ್ಬು ಬೆಳೆಗಾರರನ್ನೆ ಅವಲಂಬಿಸಿರುವ ೧೦ ಸಕ್ಕರೆ ಕಾರ್ಖಾನೆ ಮಾಲಿಕರು ಕೂಡಲೇ ರೈತಪರ ಕಾಳಜಿ ವಹಿಸಿ ದುಡಿದ ದುಡಿತಕ್ಕಾದರೂ ಪ್ರತಿಟನ್ ಕಬ್ಬಿಗೆ ೩೫೦೦ ದರ ನೀಡಬೇಕು ಎಂದರು.
ಈ ವೇಳೆ ಮನಗೂಳಿ ಶ್ರೀ ಸಂಗನ ಬಸವ ಸ್ವಾಮೀಜಿಗಳು, ರೈತ ಮುಖಂಡರಾದ ರಾಹುಲ್ ಕುಬಕಡ್ಡಿ, ಕಲ್ಲು ಸೊನ್ನದ, ಸಂಗಮೇಶ ಸಗರ, ರಾಮನಗೌಡ ಪಾಟೀಲ, ಅಭಿಷೇಕ ಹೂಗಾರ, ಪ್ರಕಾಶ ತೇಲಿ, ಜಕರಾಯ ಪೂಜಾರಿ, ವೀರಣ್ಣ, ಸಜ್ಜನ ಠಕ್ಕೆ, ಅನಾಮೇಶ ಜಮಖಂಡಿ, ಸೋಮು ಬಿರಾದಾರ, ಸಾತಲಿಂಗಯ್ಯ ಸಾಲಿಮಠ, ಈರಪ್ಪ ಕುಳೆಕುಮಟಗಿ, ಮಾಳು ಪೂಜಾರಿ, ಮಾಂತಗೌಡ ಬಿರಾದಾರ, ಸಿದ್ರಾಮಪ್ಪ ಹೊರ್ತಿ, ಸೀತಪ್ಪ ಗಣಿ, ಕರ್ನಾಟಕ ರಕ್ಷಣಾ ವೇದಿಕೆಯ ಬಸವರಾಜ ತಾಳಿಕೋಟೆ, ಶ್ರೀಶೈಲ ಮುಳಜಿ, ಶ್ರೀಕಾಂತ ರಾಠೋಡ, ರವಿ ಗೊಳಸಂಗಿ, ಭಾರತ ಕಿಸಾನ್ ಸಂಘದ ಮಲ್ಲನಗೌಡ ಬಿರಾದಾರ, ಭೀಮಸೇನ ಕೊಕರೆ, ಗುರುನಾಥ ಬಗಲಿ, ಅರುಣಗೌಡ ತೇರದಾಳ, ಉತ್ತರ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಅಧ್ಯಕ್ಷ ಶಂಕರಗೌಡ ಹಿರೇಗೌಡರ, ಜಿಲ್ಲಾ ಗೌರವಾಧ್ಯಕ್ಷರು ಬಾಪೂಗೌಡ ಬಿರಾದಾರ, ರಾಜ್ಯ ಕಾರ್ಯದರ್ಶಿ ಪಿರು ಕೆರೂರ, ಅಧ್ಯಕ್ಷ ದಡಾಪಿರ ಮುಜಾವರ, ರಾಮು ದೇಸಾಯಿ. ಡಿ ಎಸ್ ಎಸ್ ಮುಖಂಡರಾದ ಮಾಂತೇಶ ಸಾಸಾಬಾಳ, ಅರವಿಂದ ಕೊಪ್ಪ, ಜಗದೀಶ ಸುನಗದ, ಸುಜಾತಾ ಅವಟಿ, ಸಂಗೀತಾ ರಾಠೋಡ, ಲಕ್ಷ್ಮಿ ಬಿರಾದಾರ, ಬೋರಮ್ಮ ಕುಂಬಾರ, ಚನ್ನಮ್ಮ ಮೈತ್ರಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
ಪ್ರತಿ ಟನ್ ಕಬ್ಬಿಗೆ ೩೫೦೦ ಬೆಲೆ ಘೋಷಣೆಗೆ ಆಗ್ರಹಿಸಿ ಬೀದಿಗಿಳಿದ ರೈತರು


