ಅಸಮಾನತೆ ಹೋಗಲಾಡಿಸಲು ಶ್ರಮಿಸಿ: ಪ್ರೊ.ಅಡವಿಸ್ವಾಮಿ

ಸಪ್ತಸಾಗರ ವಾರ್ತೆ, ವಿಜಯಪುರ, ನ. 9:
ನೊಂದವರಿಗೆ ಆತ್ಮಸ್ಥೈರ್ಯವನ್ನು ತುಂಬಿ ಶೋಷಿತ ವರ್ಗದವರ ದನಿಯಾಗಿ ಮನುಕುಲವನ್ನು ಉದ್ಧಾರ ಮಾಡಿದ ಮಹಾನ್ ಮಾನವತವಾದಿ ಕನಕದಾಸರು ಎಂದು ಸಾಹಿತಿ ಪ್ರೊ. ಅಡವಿಸ್ವಾಮಿ ಕೊಳಮಲಿ ಅಭಿಪ್ರಾಯಪಟ್ಟರು.
ವಿಜಯಪುರ ನಗರದ ರೇಲ್ವೆ ನಿಲ್ದಾಣದ ಆವರಣದಲ್ಲಿ ನೈರುತ್ಯ ರೇಲ್ವೆ ಇಲಾಖೆ ನೌಕರರ ಸಂಘ ವಿಜಯಪುರ ಇವರ ವತಿಯಿಂದ ಹಮ್ಮಿಕೊಂಡ ಮಹಾನ್ ಮಾನವತವಾದಿ ಕನಕದಾಸರ 538 ನೇ ಜಯಂತೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶೇಷ ಉಪನ್ಯಾಸವನ್ನು ನೀಡಿದ ಅವರು, ಕನಕದಾಸರು ತಮ್ಮ ವಿಶಿಷ್ಟವಾದ ಜ್ಞಾನದಿಂದ ಶಕ್ತಿಯಿಂದ ಕಣ್ಣಿದ್ದವರ ಕಣ್ಣು ತೆರೆಸಿದ ಮಹಾನ್ ಮೇದಾವಿ, ದೇವರನ್ನೇ ಒಲಿಸಿಕೊಂಡ ಸರ್ವಶ್ರೇಷ್ಠ ಸಂತ. ಕೀರ್ತನೆ, ಉಗಾಭೋಗ,ಸುಳಾದಿ,ಜೊತೆಗೆ ನಳ ಚರಿತ್ರೆ, ರಾಮಧಾನ್ಯ ಚರಿತ್ರೆ, ಮೋಹನ ತರಂಗಿಣಿ, ಹರಿಭಕ್ತಿ ಸಾರ ಶ್ರೇಷ್ಟ ಕೃತಿಗಳ ರಚನೆಯ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದ್ದಾರೆ. ಕನಕದಾಸರ ವಿಚಾರಧಾರೆಗಳು ಎಂದೆಂದಿಗೂ ಪ್ರಸ್ತುತ ಎಂದು ಅವರು ಹೇಳಿದರು.
ಸ್ಟೇಷನ್ ವ್ಯವಸ್ಥಾಪಕ ಎಂ.ವೈ. ಪಾಟೀಲ ಮಾತನಾಡಿ, ಕನಕದಾಸರ ಚಿಂತನೆಗಳು ಮನುಕುಲಕ್ಕೆ ದಾರಿದೀಪವಾಗಿವೆ ಎಂದರು.
ರೇಲ್ವೆ ಇಲಾಖೆಯ ವೈದ್ಯ ಡಾ. ಕುಮಾರೇಶ ಗೌಡರ, ರೇಲ್ವೆ ಇಲಾಖೆಯ ಇತರ ಅಧಿಕಾರಿಗಳಾದ ರಾಜಕುಮಾರ ,
ಎಂ.ಡಿ. ಅತ್ತಾರ, ಮಹಾದೇವ ಸ್ವಾಮಿ,ಎಲ್.ಎಸ್ ನಾಯಿಕ ಹಾಗೂ ರೇಲ್ವೆ ಇಲಾಖೆಯ ನೌಕರರ ಸಿಬ್ಬಂದಿ ಉಪಸ್ಥಿತರಿದ್ದರು.

Share this