ಸಪ್ತಸಾಗರ ವಾರ್ತೆ, ವಿಜಯಪುರ, ನ. 10:
ವಿಜಯಪುರ ಸಿಐಟಿಯು ಆರನೇ ಜಿಲ್ಲಾ ಸಮ್ಮೇಳನ ನಗರದ ಜಿಲ್ಲಾ ಸಹಕಾರಿ ಯೂನಿಯನ್ ಕೇಂದ್ರ ಬಸ್ ನಿಲ್ದಾಣ ಎದುರುಗಡೆ ನಡೆಯಿತು.
ಪ್ರತಿನಿಧಿಗಳ ಸಭೆಯನ್ನು ಉದ್ಘಾಟಿಸಿದ ಸಿಐಟಿಯು ನ ರಾಜ್ಯ ಕಾರ್ಯದರ್ಶಿ ಎಚ್. ಎಸ್. ಸುನಂದ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದುಡಿಮೆಯ ಸಮಯವನ್ನು ಹೆಚ್ಚಿಗೆ ಮಾಡಿದೆ. ಆದರೆ ಅದಕ್ಕೆ ತಕ್ಕಂತೆ ಕೂಲಿಯನ್ನು ಕೊಡುವುದಿಲ್ಲ, ಕನಿಷ್ಠ ಕೂಲಿ ಅಸಂಘಟಿತ ಕಾರ್ಮಿಕರಿಗೆ 36 ಸಾವಿರ ರೂಪಾಯಿ ಕೊಡಬೇಕು, 2011 ರಿಂದ ಇಲ್ಲಿಯವರೆಗೆ ಅಂಗನವಾಡಿ ಅಕ್ಷರ ದಾಸೋಹ ನೌಕರರಿಗೆ ಕೇಂದ್ರ ಸರ್ಕಾರ ಶೇ. 50ರಷ್ಟು ಕಡಿತಗೊಳಿಸಿದೆ. ಜನರಲ್ಲಿ ಬದುಕಿನ ಪ್ರಶ್ನೆಗಳನ್ನು ಹೇಳದೆ ಜಾತಿ ಧರ್ಮದ ಹೆಸರಿನಲ್ಲಿ ಆರೋಗ್ಯಕರ ಸಮಾಜವನ್ನು ಹಾಳು ಮಾಡುತ್ತಿದೆ. ಕಾರ್ಮಿಕರ ಕಾನೂನುಗಳನ್ನು 49 ಇದ್ದ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಿ ಮಾಲೀಕರಿಗೆ ಅನುಕೂಲ ಮಾಡಿದೆ. ಈ ಕಾನೂನುಗಳು ಜಾರಿಯಾಗದಂತೆ ಸಂಘಟಿತ ಹೋರಾಟ ಮಾಡುವುದು ಅವಶ್ಯಕವಾಗಿದೆ ಎಂದರು.
ಅಂಗನವಾಡಿ ಬಿಸಿಯೂಟ ನೌಕರರಿಗೆ ಪಿಂಚಣಿ ಕೊಡಬೇಕು. ಎಷ್ಟು ಜನ ಶ್ರೀಮಂತರಾಗುತ್ತಾರೆ ಅಷ್ಟೇ ಪ್ರಮಾಣ ಬಡವರ ಸಂಖ್ಯೆ ಹೆಚ್ಚಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಎಫ್ ಆರ್ ಎಸ್ ಜಾರಿಯಿಂದ ಎರಡು ಲಕ್ಷ ಗರ್ಭಿಣಿ ಮಹಿಳೆಯರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ನವೆಂಬರ್ 1, 2025 ರವರೆಗೆ ಎಂಪಿ ಗಳಿಗೂ ಮನವಿ ಸಲ್ಲಿಸುವುದು, ನಂತರ ಕೇಂದ್ರ ಸಚಿವರ ಮನೆಯ ಮುಂದೆ ಧರಣಿ ಮಾಡಲಾಗುವುದು ಎಂದು ಹೇಳಿದರು. ಕೇಂದ್ರ ಸರಕಾರ 1,46,000 ಕೋಟಿ ಬಂಡವಾಳಗಾರರ ಸಾಲ ಮನ್ನಾ ಮಾಡಿದೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಸಂಘಟನೆಯ ಜಿಲ್ಲಾ ಅಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ಜಿಲ್ಲೆಯಲ್ಲಿರುವ ಕಾರ್ಮಿಕರ ಸ್ಥಿತಿ ಹಾಗೂ ಜಿಲ್ಲೆಯಲ್ಲಿ ಪಿಪಿಪಿ ವೈದ್ಯಕೀಯ ಕಾಲೇಜು ಹೋರಾಟದ ಕುರಿತು ವಿವರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಲಕ್ಷ್ಮಣ ಹಂದ್ರಾಳ ಅವರು ಸಿಐಟಿಯು ಸಂಘಟನೆ ಮೂರು ವರ್ಷಗಳ ಕಾಲ ಮಾಡಿದ ಅನೇಕ ಜನಪರ ಕಾರ್ಮಿಕರ ಚಳುವಳಿಯ ಕರಡು ವರದಿಯನ್ನು ಮಂಡಿಸಿದರು. ಅದನ್ನು ಎಲ್ಲ ಕಾರ್ಮಿಕ ಸಂಘಟನೆಯ ಪ್ರತಿನಿಧಿಗಳು ಅನುಮೋದನೆ ಮಾಡಿದರು. ಸಮ್ಮೇಳನಕೆ ಶುಭಕೋರಿ ನಿವೃತ್ತ ನೌಕರರ ಒಕ್ಕೂಟದ ಮುಖಂಡ ಸುರೇಶ ಜಿಬಿ ಅವರು, ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಮಾಡಬೇಕೆಂದರು. ಜನವಾದಿ ಮಹಿಳಾ ಸಂಘಟನೆಯ ಸುರೇಖಾ ರಜಪೂತ, ಗ್ರಾಮ ಪಂಚಾಯಿತಿಯ ನೌಕರರ ಸಂಘದ ಮಾಜಿ ಅಧ್ಯಕ್ಷ ಎಸ್.ಐ. ಗದಿಗಿಮಠ, ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಂದ್ರಶೇಖರ ಬುರಣಾಪುರ ಶುಭಕೋರಿ ಮಾತನಾಡಿದರು.
ಸಮ್ಮೇಳನದಲ್ಲಿ ಗ್ರಾಮ ಪಂಚಾಯಿತಿ ನೌಕರರು, ಕಟ್ಟಡ ಕಾರ್ಮಿಕ ಸಂಘಟನೆಯ ಪ್ರತಿನಿಧಿಗಳು, ಅಕ್ಷರ ದಾಸೋಹ ನೌಕರರು, ಅಂಗನವಾಡಿ ನೌಕರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ 12 ಜನರ ಸಂಚಾಲಕ ಸಮಿತಿ ರಚಿಸಲಾಯಿತು. ಸಂಚಾಲಕರಾಗಿ ಲಕ್ಷ್ಮಣ ಹಂದ್ರಾಳ, ಸಹ ಸಂಚಾಲಕರಾಗಿ ಅಣ್ಣಾರಾಯ, ಸೋಮಪ್ಪ ಆಯಟ್ಟಿ, ಸುರೇಶ ಜಿ.ಬಿ, ಸುನಂದ ನಾಯಕ, ಭಾರತಿ ವಾಲಿ, ಅಶ್ವಿನಿ ತಲ್ವಾರ್ , ಸುಮಂಗಲ ಆನಂದಿಶೆಟ್ಟಿ, ಕಾಳಮ್ಮ ಬಡಿಗೇರ, ಲಾಲ್ ಅಹ್ಮದ್ ಶೇಖ, ಚಂದ್ರಶೇಖರ ಬುರಣಾಪುರ ಇದ್ದರು.
ಲಕ್ಷ್ಮಣ ಹಂದ್ರಾಳ ಸ್ವಾಗತಿಸಿದರು. ಚಂದ್ರಶೇಖರ ವಾಲಿಕಾರ ವಂದಿಸಿದರು.
ವಿಜಯಪುರ ಸಿಐಟಿಯು ಆರನೇ ಜಿಲ್ಲಾ ಸಮ್ಮೇಳನ ಯಶಸ್ವಿ


