ಓಬವ್ವಳು ನಿಷ್ಕಲ್ಮಷ ನಾಡಭಕ್ತಿಯ ದ್ಯೋತಕ-ಸಂತೋಷ ಬಂಡೆ

ಸಪ್ತಸಾಗರ ವಾರ್ತೆ, ವಿಜಯಪುರ, ನ. 11: ಒನಕೆ ಓಬವ್ವಳು ಸ್ವಾಮಿನಿಷ್ಠೆ, ಸಮಯ ಸ್ಫೂರ್ತಿ ಮತ್ತು ತ್ಯಾಗದ ತ್ರಿವೇಣಿ ಸಂಗಮ. ಅವಳು ನಿಷ್ಕಲ್ಮಷ ನಾಡಭಕ್ತಿಯ ದ್ಯೋತಕ. ಅವಳು ರೂಢಿಸಿಕೊಂಡ ಸಂಸ್ಕಾರಗಳು ಇಂದಿನ ಪೀಳಿಗೆಗೆ ಆದರ್ಶವಾಗಿವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಮಂಗಳವಾರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಹಮ್ಮಿಕೊಂಡ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಒನಕೆ ಓಬವ್ವ 18ನೇ ಶತಮಾನದ ಓರ್ವ ವೀರ ವನಿತೆ,
ನಿಸ್ವಾರ್ಥ ನಾಡಪ್ರೇಮಿ. ವೀರರ ನಾಡೆನಿಸಿದ ಚಿತ್ರದುರ್ಗದ ಉಕ್ಕಿನ ಕೋಟೆಯನ್ನು ಶತ್ರುಗಳ ಆಕ್ರಮಣದಿಂದ ರಕ್ಷಿಸಲು ಒನಕೆಯನ್ನು ಆಯುಧವಾಗಿ ಹಿಡಿದು ಶತ್ರುಗಳ ಸಂಹಾರ ಮಾಡಿದ್ದರಿಂದ ಚರಿತ್ರೆಯಲ್ಲಿ ಅಜರಾಮರಳಾಗಿ, ಸ್ತ್ರೀ ಶಕ್ತಿಯ ಸಂಕೇತವಾಗಿ ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದ್ದಾರೆ. ಅವರ ಧೈರ್ಯ, ಸಾಹಸ ಪ್ರತಿಯೊಬ್ಬರಿಗೂ ಸ್ಪೂರ್ತಿ ನೀಡುತ್ತದೆ ಎಂದು ಹೇಳಿದರು.
ಶಿಕ್ಷಕ ರಾಘು ಮೊಗಳ ಮಾತನಾಡಿ, ಬಾಲ್ಯದಿಂದಲೂ ಸಂಕಷ್ಟಗಳ ಅನುಭವಗಳೊಂದಿಗೆ ಅನನ್ಯವಾದ ಸಂಸ್ಕಾರಗಳನ್ನು ರೂಢಿಸಿಕೊಂಡ ಓಬವ್ವಳ ಬದುಕು ಇಂದಿನ ಪೀಳಿಗೆಗೆ ಆದರ್ಶವಾಗಿದೆ ಎಂದು ಹೇಳಿದರು.
ಅವಳಿ ಮಕ್ಕಳಾದ ಅನುಶ್ರೀ-ಶ್ರೀನಿಧಿ ಬಂಡೆ ಅವರು ಓಬವ್ವಳ ವೇಷಧರಿಸಿ ವಿಶೇಷವಾಗಿ ಕಾಣಿಸಿದರು. ರಾಜು ಕತ್ನಳ್ಳಿ, ಸುಭಾಸ ಬಂಡೆ, ಸೋಮನಿಂಗ ಕತ್ನಳ್ಳಿ, ಶಿವಯೋಗಿ ಡೋಮನಾಳ, ಸುರೇಶ ಕತ್ನಳ್ಳಿ, ಪ್ರವೀಣ ಅರಕೇರಿ, ಭುವನೇಶ್ವರಿ ಬಂಡೆ, ರಾಜಶೇಖರ ಶಿರಶ್ಯಾಡ, ಸುರೇಖಾ ಬಂಡೆ ಸೇರಿದಂತೆ ಅನೇಕ ಮಕ್ಕಳು ಭಾಗವಹಿಸಿದ್ದರು.

Share this