ಸಪ್ತಸಾಗರ ವಾರ್ತೆ, ವಿಜಯಪುರ, ನ. 13: ವೃಕ್ಷೋಥಾನ್ ಹೆರಿಟೇಜ್ ರನ್ ಆರನೇ ಆವೃತ್ತಿ ಬರುವ ಡಿಸೆಂಬರ್ 7 ರಂದು ಜರುಗಲಿದ್ದು, ನೋಂದಣಿ ಮಾಡಿಕೊಳ್ಳಲು ನವೆಂಬರ್ 19 ಕೊನೆಯ ದಿನವಾಗಿದೆ. ಆಸಕ್ತರು ಈ ಕೂಡಲೇ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸಂಘಟಕ, ವಿಜಯಪುರ ಸೈಕ್ಲಿಂಗ್ ಗ್ರುಪ್ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಹೇಳಿದರು.
ವಿಜಯಪುರದಲ್ಲಿ ಬುಧವಾರ ಸಂಜೆ ನಡೆದ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ 11 ಸಾವಿರಕ್ಕೂ ಹೆಚ್ಚು ಓಟಗಾರರು ನೋಂದಣಿ ಮಾಡಿಸಿಕೊಂಡಿದ್ದು, ನೋಂದಣಿಗೆ ಕೊನೆಯ 5 ದಿನಗಳು ಮಾತ್ರ ಉಳಿದಿದ್ದು, ಇನ್ನು 3-4 ಸಾವಿರ ನೋಂದಣಿಗಳು ಆಗುವ ನಿರೀಕ್ಷೆ ಇದೆ. ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಸರಕಾರಿ ಶಾಲೆಗಳ ಮಕ್ಕಳು ಈ ಓಟದಿಂದ ಹೊರಗೆ ಉಳಿಯಬಾರದು ಎಂಬ ಕಾರಣದಿಂದ ಓಟದ ಪ್ರತಿಭೆ ಹೊಂದಿರುವ ಮಕ್ಕಳನ್ನು ಗುರುತಿಸಿ, ಉಚಿತ ನೋಂದಣಿಗೆ ಅವಕಾಶ ನೀಡಿದ್ದಾರೆ. ಡಿಡಿಪಿಐ ಅವರಿಗೆ ಈಗಾಗಲೇ ಈ ಕುರಿತು ವಿನಂತಿಸಿದ್ದು, ಜಿಲ್ಲೆಯ ಎಲ್ಲ ಸರಕಾರಿ ಶಾಲೆ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಓಟದ ಕೌಶಲ್ಯ ಹೊಂದಿರುವ ಮಕ್ಕಳನ್ನು ಗುರುತಿಸಿ, ಅವರ ಪಟ್ಟಿ ನೀಡಿದರೆ ವಿವಿಧ ದಾನಿಗಳ ನೆರವಿನಿಂದ ಅವರಿಗೆ ನೋಂದಣಿ ಶುಲ್ಕ ಪಡೆಯುವುದಿಲ್ಲ ಮತ್ತು ಈ ಓಟ ಅವರಿಗೆ ಸ್ಪೂರ್ತಿ ತುಂಬಿ, ಮುಂದಿನ ದಿನಗಳಲ್ಲಿ ಅವರು ಉತ್ತಮ ಕ್ರೀಡಾ ಕೌಶಲ್ಯ ಹೊಂದಲು ಅನುಕೂಲವಾಗುತ್ತದೆ. ಮಿಲಟರಿ ಹಾಗೂ ಪ್ಯಾರಾ ಮಿಲಟರಿ, ಪೊಲೀಸ್ ಹಾಗೂ ಇತರೆ ಸೇವೆಗಳ ಅರ್ಹತಾ ಪರಿಕ್ಷೆಗೆ ಸಿದ್ಧತೆಯಲ್ಲಿರುವ ಯುವಕರಿಗೆ ಕೂಡ ದಾನಿಗಳ ನೆರವಿನಿಂದ ಉಚಿತ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಜನರು ಈಗಾಗಲೇ ನೋಂದಣಿ ಮಾಡಿಸಿದ್ದಾರೆ. ಕರ್ನಾಟಕ ಮಾತ್ರವಲ್ಲ ಬೇರೆ ರಾಜ್ಯಗಳಿಂದಲೂ ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಹಿರಿಯ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು, ಉದ್ಯಮಿಗಳು, ಸರಕಾರಿ ಉದ್ಯೋಗಿಗಳು ಹಾಗೂ ಗಣ್ಯರು ಆರನೇಯ ಆವೃತ್ತಿಯ ವೃಕ್ಷೋಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೊಳ್ಳುತ್ತಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಸಕ್ತರು ಈ ಕೂಡಲೇ https://vrukshathon.co.in/ ನೋಂದಾಯಿಸಲು ಕೋರಿದೆ.
ಈ ಸಂದರ್ಭದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ ಕೋರ್ ಕಮಿಟಿ ಪದಾಧಿಕಾರಿಗಳಾದ ಉದ್ಯಮಿ ಶಾಂತೇಶ ಕಳಸಗೊಂಡ, ಡಾ. ರಾಜು ಯಲಗೊಂಡ, ಅಪ್ಪು ಭೈರಗೊಂಡ, ಸಂತೋಷ ಔರಸಂಗ, ಶಿವನಗೌಡ ಪಾಟೀಲ, ಶಿವಾನಂದ ಯರನಾಳ, ಸಚೀನ ಪಾಟೀಲ, ಅಶ್ಪಾಕ ಮನಗೂಳಿ, ವೀರೇಂದ್ರ ಗುಚ್ಚೆಟ್ಟಿ, ಡಾ. ಪ್ರವೀಣ ಚೌರ, ಕಾಪಸೆ, ಮಲ್ಲಿಕಾರ್ಜುನ ಕುಪ್ಪಿ, ರಮೇಶ ಬಿರಾದಾರ, ಶಿವು ಕುಂಬಾರ, ಮಹೇಶ ವಿ. ಶಟಗಾರ, ಗುರುಶಾಂತ ಕಾಪಸೆ, ಸೋಮಶೇಖರ ಸ್ವಾಮಿ, ಸೋಮು ಮಠ, ವಿನಯ ಕಂಚ್ಯಾಣಿ, ಸಂದೀಪ ಮಡಗೊಂಡ, ಶ್ರೀಕಾಂತ ಹಡಲಗೇರಿ, ಉಮೇಶ ಮೆಟಗಾರ, ಸಿದ್ದು ನಾಯ್ಕೋಡಿ, ನವೀದ ನಾಗಠಾಣ, ವೀಣಾ ದೇಶಪಾಂಡೆ ಮುಂತಾದವರು ಉಪಸ್ಥಿತರಿದ್ದರು.
ವೃಕ್ಷೋಥಾನ್ ರನ್-ನೋಂದಣಿಗೆ ನವೆಂಬರ್ 19 ಕೊನೆಯ ದಿನ


