ವಚನ ಸಾಹಿತ್ಯ ಅನುವಾದಕ್ಕೆ 5 ಕೋಟಿ ನೆರವು: ಸಚಿವ ಎಂ.ಬಿ. ಪಾಟೀಲ ಭರವಸೆ

ಸಪ್ತಸಾಗರ ವಾರ್ತೆ, ವಿಜಯಪುರ, ನ. 15: ಬಸವಾದಿ ಶರಣರು ಮತ್ತು ಅವರ ವಚನ ಸಾಹಿತ್ಯವನ್ನು ವಿಶ್ವದ ನಾನಾ ಭಾಷೆಗಳಿಗೆ ಅನುವಾದಿಸಿ ಪ್ರಸಾರ ಮಾಡುವ ಯೋಜನೆ ಪೂರ್ಣಗೊಳಿಸಲು ರೂ. 5 ಕೋ. ಅನುದಾನ ನೀಡುವುದಾಗಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಶನಿವಾರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಗ್ರಂಥಾಲಯ ಸಭಾಂಗಣದಲ್ಲಿ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಡಾ. ಎಂ. ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ 40 ಸಂಪುಟಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರು ಬಸವಾದಿ ಶರಣರನ್ನು ಬೆಳಕಿಗೆ ತಂದಿದರೆ, ಕಲಬುರ್ಗಿಯವರು ಹಳಕಟ್ಟಿಯವರ ಸಮಗ್ರ ಸಾಹಿತ್ಯವನ್ನು ಸಂಪಾದಿಸುವ ಮೂಲಕ ಅವರ ಸಂಶೋಧನೆ ಮತ್ತು ಸಾಹಿತ್ಯವನ್ನು ಬೆಳಕಿಗೆ ತಂದಿದ್ದಾರೆ. ಅಲ್ಲದೇ, ಸಂಶೋಧನ ಕೇಂದ್ರದಿಂದ ಆದಿಲ್ ಶಾಹಿ ಅರಸರ ದಖನಿ, ಪಾರ್ಸಿ ಸಾಹಿತ್ಯವನ್ಮು ಕನ್ಮಡಕ್ಕೆ ಅನುವಾದ ಮಾಡಿಸಲು ನೆರವಾಗಿದ್ದಾರೆ. ಸಂಶೋಧನ ಕೇಂದ್ರದಿಂದ ಬಸವಾದಿ ಶರಣರು ಮತ್ತು ಅವರ ಸಾಹಿತ್ಯವನ್ನು ವಿಶ್ವದ ನಾನಾ ಭಾಷೆಗಳಿಗೆ ಅನುವಾದಿಸುವ ಕೆಲಸ ಈ ಹಿಂದೆ ಪ್ರಾರಂಭಿಸಲಾಗಿತ್ತು. ಅದನ್ನು ಮುಂದುವರೆಸಿ ಪೂರ್ಣಗೊಳಿಸಲು ಒಟ್ಟು ರೂ. 5 ಕೋ. ಅನುದಾನ ನೀಡುತ್ತೇನೆ. ಈ ಸಾಹಿತ್ಯ ಜಗತ್ತಿನ ವಿಶ್ವವಿದ್ಯಾಲಯಗಳು, ಗಣ್ಯರಿಗೆ ತಲುಪವಂತೆ ಮಾಡುತ್ತೇವೆ. ಬಸವ ಧರ್ಮ ಜಾಗತಿಕ ಧರ್ಮ ಮತ್ತು ಬಸವ ಜಾಗತಿಕ ಸಂಸ್ಕೃತಿಯಾಗುವರೆಗೂ ಅವರು ಬದುಕಿರಬೇಕಿತ್ತು. ಭಾಲ್ಕಿ ಸ್ವಾಮೀಜಿಗಳ ಆಶಯದಂತೆ ಸರಕಾರ ಬೀದರಿನಲ್ಲಿ ವಚನ ವಿಶ್ವವಿದ್ಯಾಲಯ ಸ್ಫಾಪಿಸಲಿದೆ ಎಂದು ಸಚಿವರು ತಿಳಿಸಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದೇವರು ಮಾತನಾಡಿ, ಹಳಕಟ್ಟಿ ಸಂಶೋಧನ ಕೇಂದ್ರ ಮತ್ತು ಸಚಿವ ಎಂ. ಬಿ. ಪಾಟೀಲರ ಕಾರ್ಯ ಸದಾ ಸ್ಮರಣೀಯವಾಗಿರಲಿದೆ. ನಾನು ಐದು ವರ್ಷದಲ್ಲಿ ಅತ್ಯುತ್ತಮ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಆನಂದ ಕ್ಷಣ ಇದಾಗಿದೆ. ಕಲಬುರ್ಗಿಯವರ ಬಗ್ಗೆ ಮೂರು ತಿಂಗಳು ಓದಿದರೂ ತಿಳಿಯಲು ಸಾಧ್ಯವಾಗದ ವಿಷಯಗಳನ್ನು ಇಂದು ವಿಚಾರ ಸಂಕಿರಣದಲ್ಲಿ ತಿಳಿದುಕೊಂಡಿದ್ದೇನೆ. ಇಲ್ಲಿ ನಿಜವಾದ ಕಲಬುರ್ಗಿಯವರ ನಿಜದರ್ಶನವಾಗಿದೆ. ರಾಜಕೀಯ ನಾಯಕರು ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಆಸಕ್ತಿ ಹೊಂದುವುದು ಅಪರೂಪ. ಆದರೆ, ಎಂ. ಬಿ. ಪಾಟೀಲರ ಕಾರ್ಯ ಆದರ್ಶ ಮಾತ್ರವಲ್ಲ, ಅನುಕರಣೀಯವಾಗಿದೆ. ಕಲಬುರ್ಗಿಯವರೊಂದಗಿನ ಒಡನಾಟದಿಂದ ಎಂ. ಬಿ. ಪಾಟೀಲರು ಸತ್ಯ ಮತ್ತು ಸುಳ್ಳನ್ನು ದಿಟ್ಟವಾಗಿ ಹೇಳುವ ಗಟ್ಟಿತನ ಬೆಳೆಸಿಕೊಂಡಿದ್ದಾರೆ. ಎಲ್ಲ ವಿದ್ವಾಂಸರು ಒಗ್ಗೂಡಿ ಬಸವಣ್ಣನವರ ಜನ್ಮದಿನಾಂಕ ಮತ್ತು ವರ್ಷದ ಬಗ್ಗೆ ಸಂಶೋಧನೆ ಮಾಡಬೇಕು. ವಚನ ಸಾಹಿತ್ಯದ ಕೆಲಸ ಇನ್ನೂ ಬಹಳವಿದೆ. ಬಸವಣ್ಣನ ರಥ ಜಾಗತಿಕ ಮಟ್ಟಕ್ಕೆ ತಲುಪಿಸುವ ಕೆಲಸ ಮಾಡೋಣ ಎಂದು ಹೇಳಿದರು.
ಮೈಸೂರು ಕುಂದೂರು ಮಠದ ಡಾ. ಶರತಚಂದ್ರ ಸ್ವಾಮಿಗಳು ಮಾತನಾಡಿ, ನಾನು ಬಾಲ್ಯದಿಂದಲೂ ಕಲಬುರ್ಗಿಯವರ ಜೊತೆ ಬಾಂಧವ್ಯ ಹೊಂದಿದ್ದೆ. ಅವರ ಜೊತೆಗಿನ ನೆನಪುಗಳು ಹಾಸುಹೊಕ್ಕಾಗಿವೆ. ಇತಿಹಾಸವನ್ನು ಮುಂದೆ ಮಾಡಿ ವರ್ತಮಾನವನ್ನು ದುರುಪಯೋಗ ಪಡಿಸಿಕೊಳ್ಳುವವರ ಬಗ್ಗೆ ನಡೆಸುವ ಸಂಶೋಧನೆಯಿಂದ ಹೊರಬರುವ ಕಟುಸತ್ಯವನ್ನು ಅರಗಿಸಿಕೊಳ್ಳುವ ಶಕ್ತಿ ಸಮಾಜಕ್ಕೆ ಇನ್ನೂ ಬಂದಿಲ್ಲ. ಇದರಿಂದಾಗಿ ವಿಧ್ವಾಂಸರು ಪ್ರಚಾರದ ಮಾತುಗಳನ್ನಾಡುತ್ತಾರೆ. ಇಂದು ಚಲನಶೀಲ ಸಂಶೋಧಕರ ಅಗತ್ಯವಿದೆ. ಗತಕಾಲದ ಸತ್ಯವನ್ನು ವರ್ತಮಾನದಲ್ಲಿ ಜನತೆಗೆ ಮನವರಿಕೆ ಮಾಡಿಕೊಡುವುದು ಸಂಶೋಧಕನ ಕೆಲಸವಾಗಿದೆ. ಜನರಲ್ಲಿ ಸಂವಾದ ಮನಸ್ಥಿತಿ ಇಲ್ಲ. ಸಂಹಾರದ ಮನಸ್ಥಿತಿ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಸದುಪಯೋಗದ ಜೊತೆ ದುರುಪಯೋಗವಾಗುತ್ತಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವಿದ್ದೇವೆ. ವಿದ್ಯಾವಂತರು ಸಂಕುಚಿತರಾಗುತ್ತಿರುವುದು ವಿಪರ್ಯಾಸ. ಅದನ್ನು ತೊಲಗಿಸಲು ಕಲಬುರ್ಗಿಯವರ ಗ್ರಂಥಗಳನ್ನು ಓದಿ ಅವರ ನಡವಳಿಕೆಯನ್ನು ಅಳವಡಿಸಿಕೊಳ್ಳಬೇಕು. ಹಳಕಟ್ಟಿ ಸಂಶೋಧನ ಕೇಂದ್ರದ ಸಾಧನೆ ಅಪೂರ್ವವಾಗಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಕಲಬುರ್ಗಿಯವರ ಕಲಬುರ್ಗಿಯೊರೊಂದಿಗೆ ತಾವು ಹೊಂದಿದ್ದ ಒಡನಾಟ, ಚರ್ಚಿಸುತ್ತಿದ್ದ ಕವನ, ಸಾಹಿತ್ಯ, ನಾಟಕ, ಸಂಶೋಧನೆ ಮತ್ತು ಸ್ನೇಹವವನ್ನು ಮೆಲುಕು ಹಾಕಿದರು. ಈಗ ಬಿಡುಗಡೆಯಾಗಿರುವ ಸಂಪುಟಗಳಲ್ಲಿ ಕಲಬುರ್ಗಿಯವರು ಮಹಾಯಾನದ ಕಥೆ ಸಂಪುಟಗಳಲ್ಲಿದೆ. ಎಲ್ಲ ವಿದ್ಯಾಸಂಸ್ಥೆಗಳಿಗೆ ಆದರ್ಶವಾಗುವ ಅಂಶಗಳಿವೆ. ಎಲ್ಲ ಸಾಹಿತಿಗಳಿಗೆ ಪ್ರೇರಣೆಯಾಗಿವೆ ಎಂದು ಹೇಳಿದರು.
ಡಾ. ಮಹಾಂತೇಶ ಬಿರಾದಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ಎಂ. ಎಂ. ಕಲಬುರ್ಗಿ ಮತ್ತು ಸಚಿವ ಎಂ. ಬಿ. ಪಾಟೀಲ ಅವರ ನಡುವೆ ಬಾಂಧವ್ಯವನ್ನು ವಿವರಿಸಿದರು.
ಇದೇ ವೇಳೆ 40 ಸಂಪುಟವನ್ನು ಸಂಪಾದಿಸಿದ 15 ಜನ ಸಂಶೋಧಕರಾದ ಡಾ. ವೀರಣ್ಣ ರಾಜೂರ, ಡಾ. ಕೃಷ್ಣ ಕೊಲ್ಹಾರಕುಲಕರ್ಣಿ, ಪಿ. ಬಿ. ಶಿರೂರ, ಡಾ. ಎಸ್. ಕೆ. ಕೊಪ್ಪಾ, ಡಾ. ಗುರುಪಾದ ಮರಿಗುದ್ದಿ, ಡಾ. ಕೆ. ರವೀಂದ್ರನಾಥ, ಡಾ. ಎಂ. ಪಿ. ಹಳ್ಳಿಕೇರಿ, ಡಾ. ಮಲ್ಲಿಕಾರ್ಜುನ ಮೇತ್ರಿ, ಡಾ. ಪಿ. ಕೆ. ರಾಠೋಡ, ಡಾ. ಹಣಮಂತ ಮೇಲಿನಮನಿ, ಡಾ. ಎಸ್. ಎಸ್. ಭಗವತಿ, ಶ್ರೀಧರ ತೋಡಕರ ಹಾಗೂ ಡಾ. ಎಂ. ಎಂ. ಕಲಬುರ್ಗಿ ಅವರ ಪತ್ನಿ ಉಮಾದೇವಿ ಕಲಬುರ್ಗಿ, ಡಾ. ಹನುಮಾಕ್ಷಿ ಗೋಗಿ, ಸಂಪುಟ ಮುದ್ರಕ ಬಸವರಾಜ ಪಾಟೀಲ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಮಾದೇವಿ ಕಲಬುರ್ಗಿ, ಡಾ. ವೀರಣ್ಣ ರಾಜೂರ, ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ. ವೀರಣ್ಣ ರಾಜೂರ, ಡಾ. ಎಂ. ಎಸ್. ಮದಭಾವಿ, ಡಾ. ವಿಜಯ ಕೋರಿಶೆಟ್ಡಿ, ಡಾ. ವೈ. ಎಂ. ಜಯರಾಜ, ಡಾ. ಆರ್. ವಿ. ಕುಲಕರ್ಣಿ, ಡಾ. ಎಂ. ಎಂ. ಕಲಬುರ್ಗಿ ಕುಟುಂಬ ಸದಸ್ಯರು, ನಾನಾ ಹಿರಿಯ ಸಾಹಿತಿಗಳು, ಸಾಹಿತ್ಯಾಸಕ್ತರು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎಸ್. ಬಿ. ಆರ್ಟ್ಸ್ ಮತ್ತು ಕೆ.ಸಿ.ಪಿ ಸಾಯಿನ್ಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ. ಸುಭಾಸ ಕನ್ನೂರ ಮತ್ತು ಉಷಾದೇವಿ ನಿರೂಪಿಸಿದರು. ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ವಂದಿಸಿದರು.

Share this