ಸಪ್ತಸಾಗರ ವಾರ್ತೆ ವಿಜಯಪುರ, ನ. 15: ಬಿಹಾರಿನಲ್ಲಿ ಎನ್ಡಿಎ ಮೈತ್ರಿಕೂಟ ಭರ್ಜರಿ ಜಯಭೇರಿ ಸಾಧಿಸಿದ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ಶನಿವಾರ ವಿಜಯೋತ್ಸವ ಆಚರಿಸಿದರು.
ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಬಿಜೆಪಿ ಬಾವುಟ ಹಿಡಿದು ಸಂಭ್ರಮೋತ್ಸವದಲ್ಲಿ ಭಾಗಿಯಾದರು. ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನಿಸಿ ವಿಜಯೋತ್ಸವ ಸಂಭ್ರಮದಲ್ಲಿ ಮಿಂದೆದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ಬಿಜೆಪಿಯ ಜನಪರ ನಿಲುವಿಗೆ ಬಿಹಾರ ಜನತೆ ಗೆಲುವಿನ ಉಡುಗೊರೆ ನೀಡಿದ್ದಾರೆ. ಬಿಹಾರ ಸರ್ವತೋಮುಖ ವಿಕಾಸವನ್ನು ಕೇಂದ್ರವಾಗಿರಿಸಿಕೊಂಡು ಚುನಾವಣೆ ಎದುರಿಸಿದ್ದ ಬಿಜೆಪಿಗೆ ಬಿಹಾರ ಜನತೆ ಮತ್ತೊಮ್ಮೆ ಆಶೀರ್ವದಿಸಿದ್ದಾರೆ. ವಿನಾಕಾರಣ ಬಿಜೆಪಿಯ ಕೇಂದ್ರ ಸರ್ಕಾರಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿರುವ ಕಾಂಗ್ರೆಸ್ ಮೊದಲಾದ ಪಕ್ಷಗಳಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಜನತೆ ಬಿಜೆಪಿಯೊಂದಿಗೆ ಇದ್ದಾರೆ ಎಂಬುದು ಇನ್ನೊಮ್ಮೆ ಸಾಬೀತಾಗಿದೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಈ ಬಿಹಾರ ಚುನಾವಣೆಯೇ ದಿಕ್ಸೂಚಿ. ಇಲ್ಲಿಯೂ ಬಿಜೆಪಿ ಅತ್ಯಂತ ದಾಖಲೆಯೊಂದಿಗೆ ವಿಜಯ ಸಾಧಿಸಲಿದೆ. ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿ ಉಸಿರಾಗಿಸಿಕೊಂಡಿರುವ ನೀತಿಶಕುಮಾರ ಅವರ ನಾಯಕತ್ವಕ್ಕೆ ಬಿಹಾರ ಜನತೆ ಮನ್ನಣೆ ನೀಡಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಭೀಮಾಶಂಕರ ಹದನೂರ, ಮಳುಗೌಡ ಪಾಟೀಲ, ಸಾಬು ಮಾಶ್ಯಾಳ, ಈರಣ್ಣ ರಾವೂರ್, ಬಸವರಾಜ ಬೈಚಬಾಳ, ಕೃಷ್ಣ ಗುನ್ನಾಳಕರ, ಸಂಜೀವ ಐಹೊಳೆ, ಉಮೇಶ ಕೊಳಕೂರ, ಮಹೇಂದ್ರ ನಾಯಕ, ಸಂಜಯ್ ಪಾಟೀಲ್ ಕನಮಡಿ, ಚಿದಾನಂದ ಚಲವಾದಿ, ಸಂದೀಪ ಪಾಟೀಲ, ಶಿವರುದ್ರ ಬಾಗಲಕೋಟ, ಪಾಪುಸಿಂಗ್ ರಜಪೂತ, ಮಲ್ಲು ಕಲಾದಗಿ, ವಿಜಯ ಜೋಶಿ, ಚಿನ್ನು ಚಿನಗುಂಡಿ, ಕಾಂತು ಶಿಂಧೆ, ವಿನಾಯಕ ದಹಿಂಡೆ, ರಾಘವೇಂದ್ರ, ಅಶೋಕ ರಾಠೋಡ, ಶ್ರೀಧರ ಬಿಜ್ಜರಗಿ, ಗಿರೀಶ ಪಾಟೀಲ, ಆನಂದ ಮುಚ್ಚಂಡಿ, ಜಗದೀಶ ಮುಚ್ಚಂಡಿ, ಸಿದ್ದು ಮಲ್ಲಿಕಾರ್ಜುನಮಠ, ಸಂಗಮೇಶ ಹೌದೆ, ರಾಹುಲ್ ಜಾಧವ, ಅಪ್ಪು ಕುಂಬಾರ, ಬಸವರಾಜ ಹಳ್ಳಿ, ರಾಜಶೇಖರ ಬಾಗಲಕೋಟ, ಗೇಸುರಾಜ್ ಇನಾಮದಾರ, ಗಣೇಶ ರಣದೇವಿ, ಲಖನ್ ದೇವಳ್ಳಿ, ಭರತ್ ಕೋಳಿ ಪಾಲ್ಗೊಂಡಿದ್ದರು.
ಬಿಹಾರ್ ನಲ್ಲಿ ಎನ್ ಡಿ ಎ ಜಯಭೇರಿ: ಬಿಜೆಪಿ ವಿಜಯೋತ್ಸವ


