ಸಪ್ತ ಸಾಗರ ವಾರ್ತೆ, ವಿಜಯಪುರ, ನ. 15: ಲೇಖಕ, ಪುಸ್ತಕ, ಪ್ರಕಾಶಕ ಹಾಗೂ ಓದುಗರ ನಡುವೆ ಅವಿನಾಭಾವ ಸಂಬಂಧವಿದೆ. ಈ ನಾಲ್ಕು ಪ್ರಮುಖರನ್ನು ಒಂದೇ ಕಡೆ ಸೇರಿಸುವ ಮೂಲಕ ಕನ್ನಡ ಪುಸ್ತಕ ಪರಿಷತ್ತು ಆಗಾಗ್ಗೆ ತನ್ನ ಪುಸ್ತಕ ಪ್ರಿಯ ಕನ್ನಡದ ಕೆಲಸ ಮಾಡುತ್ತಲೆ ಇದೆ. ಪುಸ್ತಕೋದ್ಯಮ ಈಗ ಸವಾಲುಗಳನ್ನು ಎದುರಿಸುತ್ತಲಿದೆ. ಪುಸ್ತಕಗಳೆಂದರೆ ಹುಟ್ಟಲಿರುವ ಜನಾಂಗದ ಆಸ್ತಿ ಎಂದು ಸಾಹಿತಿ ಶಂಕರ ಬೈಚಬಾಳ ಹೇಳಿದರು.
ನಗರದ ಪ್ರಗತಿ ಹೈಸ್ಕೂಲ್ ಸಭಾಂಗಣದಲ್ಲಿ ನಡೆದ ಕನ್ನಡ ಪುಸ್ತಕ ಪರಿಷತ್ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಸಿದ್ಧರಾಮ ಬಿರಾದಾರ, ಪುಸ್ತಕ ಪರಿಷತ್ ಸಮ್ಮೇಳನ ಆಡಂಭರ ಇರದೆ ವೈಚಾರಿಕ, ಬೌದ್ಧಿಕ, ಚರ್ಚಾತ್ಮಕವಾಗಿರಬೇಕೆಂದು ಸಲಹೆ ನೀಡಿದರು.
ಸಮ್ಮೇಳನದಲ್ಲಿ ಡಾ. ತೋಂಟದ ಸಿದ್ಧಲಿಂಗ ಶ್ರೀ ಪುಸ್ತಕ ಪ್ರಶಸ್ತಿ, ಸಮಗ್ರ ಸಾಹಿತ್ಯ ಪುರಸ್ಕಾರ, ಸಾಧಕರಿಗೆ ಸನ್ಮಾನ, ಸಂಗೀತ ಸುಧೆ, ಚಿತ್ರಕಲಾ ಪ್ರದರ್ಶನ, ಪುಸ್ತಕ ಮಾರಾಟ, ಓದುಗರ ಆಸಕ್ತಿ ಮುಂತಾದ ಗೋಷ್ಠಿಗಳು ಇರಬೇಕೆಂದು ಡಾ. ಜಿ.ಎಸ್. ಭೂಸಗೊಂಡ ಅಭಿಪ್ರಾಯಪಟ್ಟರು.
ಈ ಸಮ್ಮೇಳನದ ವೇದಿಕೆಗೆ ಕಾದಂಬರಿಕಾರ ಎಸ್.ಎಲ್. ಭೈರಪ್ಪ, ಮಂಟಪಕ್ಕೆ ಮಕ್ಕಳ ಸಾಹಿತಿ ಶರಣಪ್ಪ ಕಂಚ್ಯಾಣಿ ಎಂದು ಹೆಸರಿಡಲಾಗಿದೆ. ಕವಿ ಶಂ.ಗು. ಬಿರಾದಾರ ದ್ವಾರ ಮತ್ತು ಪ್ರವಚನಕಾರ ಇಬ್ರಾಹಿಂ ಸುತಾರ ದ್ವಾರ ಎಂದು ಬಾಗಿಲುಗಳಿಗೆ ನಾಮಕರಣ ಮಾಡಲು ನಿಶ್ಚಯಿಸಲಾಯಿತು.
ಸೇರಿದ ಸಭೆಯಲ್ಲಿ ಗೌರವಾಧ್ಯಕ್ಷ ರಾವಸಾಬ ಬಿರಾದಾರ, ಕಾರ್ಯಾಧ್ಯಕ್ಷ ಫ.ಗು. ಸಿದ್ದಾಪೂರ, ಕಾರ್ಯದರ್ಶಿ ಸಿದ್ಧರಾಮ ಬಿರಾದಾರ, ಸಹಕಾರ್ಯದರ್ಶಿ ಲಾಲಸಾಬ ಮೇಲಿನಮನಿ, ಖಜಾಂಚಿ ಕೆ.ಎಸ್. ಬಾಗೇವಾಡಿ, ಮಾರ್ಗದರ್ಶಕ ಮಂಡಳಿಯವರಾದ ಎಂ.ಎಸ್. ಮಾಳಗೊಂಡ, ಉಮಾಪತಿ ಡಂಗಿ, ಅಡವಿಸ್ವಾಮಿ ಕೊಳಮಲಿ, ಉಮೇಶ ಕವಲಗಿ, ಸುರೇಶ ಗೊಲಗೊಂಡ, ಎಂ.ಆಯ್. ಬಿರಾದಾರ, ವಿಶ್ವನಾಥ ಅರಬಿ, ಪ್ರೇಮಾನಂದ ಬಿರಾದಾರ, ಚಂದ್ರು ಚೌದ್ರಿ, ಬಿ.ಎಸ್. ನರಗುಂದ ಮುಂತಾದವರು ಉಪಸ್ಥಿತರಿದ್ದರು.
ಪುಸ್ತಕಗಳೆಂದರೆ ಹುಟ್ಟಲಿರುವ ಜನಾಂಗದ ಆಸ್ತಿ: ಶಂಕರ ಬೈಚಬಾಳ ಅಭಿಮತ


