ಸಪ್ತಸಾಗರ ವಾರ್ತೆ, ವಿಜಯಪುರ, ನ. 20 :
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರ್ಕಾರ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿದೆ. ಅವರ ಈ ದರಿದ್ರ ರಾಜಕಾರಣದಿಂದ ಕರ್ನಾಟಕ ಜನತೆಗೆ ಶಾಪವಾಗಿ ಪರಿಗಣಿಸಿದೆ. ಇನ್ನೂ ಗೃಹ ಸಚಿವರು ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಸಂಸದ ರಮೇಶ ಜಿಗಜಿಣಗಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎನ್ನುವುದು ಸಂಪೂರ್ಣ ಹಾಳಾಗಿದೆ. ಹಾಡಹಗಲೇ ಕೊಲೆ, ಸುಲಿಗೆ ನಡೆಯುತ್ತಿವೆ. ಬೆಂಗಳೂರಿನಲ್ಲಿಯೇ ಹಾಡ ಹಗಲೇ ಏಳು ಕೋಟಿ ರೂ. ದೋಚಲಾಗಿದೆ. ವಿಜಯಪುರದಲ್ಲಿ ಎರಡು ಬ್ಯಾಂಕುಗಳು ದರೋಡೆಯಾಗಿ ೧೦೦ ಕೋಟಿ ರೂ.ಗೂ ಅಧಿಕ ಸ್ವತ್ತು ಕಳ್ಳತನವಾಗಿದೆ. ಒಟ್ಟಾರೆಯಾಗಿ ದರೋಡೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ದಿನ ಬೆಳಗಾದರೆ ಈ ರೀತಿಯ ಬೆಚ್ಚಿಬೀಳಿಸುವ ಘಟನೆಗಳು ಸಾಮಾನ್ಯವಾಗಿವೆ. ಪ್ರತಿಯೊಬ್ಬರು ಮನೆಯಿಂದ ಹೊರಬರಲು ಅಂಜುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ತ ಉಗ್ರಗಾಮಿಗಳಿಗೆ ಜೈಲಿನಲ್ಲಿ ಆತಿಥ್ಯ ನೀಡಲಾಗುತ್ತಿದೆ. ಹೊರಗಡೆ ಅಪರಾಧಿಕ ಕೃತ್ಯಗಳು ವ್ಯಾಪಕವಾಗಿವೆ. ಇವುಗಳನ್ನು ತಡೆಗಟ್ಟುವಲ್ಲಿ ರಾಜ್ಯದ ಹೋಂ ಮಿನಿಸ್ಟರ್ ಸಂಪೂರ್ಣ ವೈಫಲ್ಯವಾಗಿ ವೇಸ್ಟ್ ಮಿನಿಸ್ಟರ್ ಆಗಿದ್ದಾರೆ ಎಂದು ಜಿಗಜಿಣಗಿ ಟೀಕಿಸಿದ್ದಾರೆ.
ತಮ್ಮ ಸಂಸ್ಥೆಗಳಿಗೆ ಉತ್ತಮ ಆಡಳಿತಗಾರರಾಗಿರುವ ಡಾ.ಜಿ. ಪರಮೇಶ್ವರ ಗೃಹ ಸಚಿವರಾಗಿ ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ಈ ಎಲ್ಲ ಅಪರಾಧಿಕ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇಷ್ಟೆಲ್ಲಾ ಸಮಸ್ಯೆಗಳು ಎದುರಿಸುತ್ತಿದ್ದರೂ ಸಹ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಕೇವಲ ರಾಜಕಾರಣಕ್ಕೆ ಆದ್ಯತೆ ನೀಡುತ್ತಿದೆ. ಅವರ ಈ ದರಿದ್ರ ನಡವಳಿಕೆಯಿಂದ ಜನತೆ ನರಕಯಾತನೆ ಅನುಭವಿಸುವಂತಾಗಿದೆ ಎಂದರು.
ರಾಜ್ಯದಲ್ಲಿ ರಸ್ತೆಗಳು ಹಾಳಾಗಿ ಹೋಗಿವೆ. ಈ ಬಗ್ಗೆ ಸಣ್ಣ ಬಾಲಕನೋರ್ವ ಪ್ರಧಾನಿಗೆ ಪತ್ರ ಬರೆಯುವಂತಾಗಿದೆ. ಬಿಹಾರ್ ಮಾದರಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗುವುದಂತೂ ದಿಟ. ರಾಜ್ಯದಲ್ಲಿ ಇನ್ನಷ್ಟೂ ಕಾನೂನು-ಸುವ್ಯವಸ್ಥೆ ಬಿಗಡಾಯಿಸುವ ಮುನ್ನವೇ ಎಚ್ಚೆತ್ತುಕೊಳ್ಳಿ, ಕೇವಲ ಒಂದು ಸಮುದಾಯ ಖುಷಿ ಪಡಿಸಲು ಉಳಿದ ಸಮಾಜಗಳನ್ನು ತುಳಿಯುವ ಹಾಗೂ ಅವರನ್ನು ತೊಂದರೆಗೆ ತಳ್ಳುವ ಕೆಲಸ ಮಾಡಬೇಡಿ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲ: ಜಿಗಜಿಣಗಿ


