ವೃಕ್ಷಥಾನ್ ಹೆರಿಟೇಜ್ ರನ್- 20 ಸಾವಿರ ದಾಖಲೆಯ ಓಟಗಾರ ನೋಂದಣಿ

ಸಪ್ತಸಾಗರ ವಾರ್ತೆ, ವಿಜಯಪುರ, ನ. 21: ವೃಕ್ಷಥಾನ್ ಹೆರಿಟೇಜ್ ರನ್ ಆರನೇ ಆವೃತಿಯಲ್ಲಿ ಈ ಬಾರಿ 20 ಸಾವಿರಕ್ಕೂ ಹೆಚ್ಚು ಓಟಗಾರರು ನೋಂದಾಯಿಸಿಕೊಂಡಿದ್ದಾರೆ. ಬೆಂಗಳೂರು, ಮುಂಬೈ, ದೆಹಲಿ ಮತ್ತು ಚೆನೈ ಮಹಾನಗರಗಳನ್ನು ಹೊರತು ಪಡಿಸಿದರೆ, ವಿಜಯಪುರದಂತಹ ಟೈರ್-3 ನಗರದಲ್ಲಿ ನಡೆಯುವ ಮ್ಯಾರಥಾನ್ ನದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಓಟಗಾರರು ಭಾಗವಹಿಸುತ್ತಿರುವುದು ಇತಿಹಾಸ ಸೃಷ್ಟಿಸಲಿದೆ ಎಂದು ಕೋಟಿ ವೃಕ್ಷ ಅಭಿಯಾನ ಪ್ರತಿಷ್ಠಾನ ತಿಳಿಸಿದೆ.
ಒಂದು ಸಾಮಾಜಿಕ ಉದ್ದೇಶಕ್ಕಾಗಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಒಂದಡೆ ಸೇರಿ ಓಟದ ಮೂಲಕ ವಿಜಯಪುರದ ಪರಿಸರದಲ್ಲಿ ಬದಲಾವಣೆಗಾಗಿ ಸಸಿ ನೆಟ್ಟು, ಮರಗಳನ್ನು ಬೆಳೆಸುವುದು ಮತ್ತು ವಿಜಯಪುರದ ಪ್ರವಾಸಿ ಸ್ಥಾನಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಕೈಜೋಡಿಸುವ ಈ ವಿಶಿಷ್ಟ ವೃಕ್ಷಥಾನ್ ಹೆರಿಟೇಜ್ ರನ್ ಈ ಬಾರಿ ವಿಶೇಷ ದಾಖಲೆ ಸೃಷ್ಟಿಸಿ, ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆಯಲಿದೆ.
ಈ ಬಾರಿ 20 ಸಾವಿರಕ್ಕೂ ಹೆಚ್ಚು ಓಟಗಾರರು ಆನ್ ಲೈನ್ ಮೂಲಕ ನೋಂದಾಯಿಸಿದ್ದು, ನ.19 ರ ಸಂಜೆಯಿಂದ ಆನ್ ಲೈನ್ ನೋಂದಣಿ ಮುಕ್ತಾಯಗೊಳಿಸಲಾಗಿದೆ. ಇನ್ನು ಹೆಚ್ಚಿನ ಜನರು ಓಟದಲ್ಲಿ ಭಾಗವಹಿಸುವ ಇಂಗಿತ ವ್ಯಕ್ತಪಡಿಸಿದ್ದು, ಅವರಿಗೂ ಭಾಗವಹಿಸಲು ಅನುಕೂಲ ಕಲ್ಪಿಸಲು ಸ್ಪರ್ಧೆಯ ಮುನ್ನಾ ದಿನಗಳಾದ ಡಿಸೆಂಬರ್ 4, 5 ಮತ್ತು 6 ರಂದು ಮೂರು ದಿನ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲಿಯೇ ಟಿ-ಶರ್ಟ್ ಮತ್ತು ಬಿಬ್ ವಿತರಿಸಲಾಗುವುದು. ಇದು ಕೂಡ ಮೊದಲ ಬಂದವರಿಗೆ ಮೊದಲ ಆದ್ಯತೆ ಕೊಡಲಾಗುವುದು ಎಂದು ನೋಂದಣಿ ಸಮಿತಿಯ ಡಾ.ರಾಜು ಯಲಗೊಂಡ ಮತ್ತು ವೀರೇಂದ್ರ ಗುಚ್ಚಟ್ಟಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this