ಸಪ್ತಸಾಗರ ವಾರ್ತೆ, ವಿಜಯಪುರ, ನ. 25 : ಕರ್ನಾಟಕ ಪಿಯುಸಿ ಫಲಿತಾಂಶ ರಾಷ್ಟ್ರಮಟ್ಟಕ್ಕೆ ಹೋಲಿಸಿದಾಗ ಕೆಳಮಟ್ಟದಲ್ಲಿದ್ದು, ಫಲಿತಾಂಶ ಸುಧಾರಿಸಲು ಇಲಾಖೆ ಅನೇಕ ಕ್ರಮಗಳನ್ನು ಮತ್ತು ಬದಲಾವಣೆಗಳನ್ನು ತಂದಿದೆ. ಈ ಬಾರಿ ಫಲಿತಾಂಶವನ್ನು ಶೇ. 90ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಜಂಟಿ ನಿರ್ದೇಶಕರಾದ ಸಿ.ಎಂ. ಮಹಾಲಿಂಗಯ್ಯ ಹೇಳಿದರು.
ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ(ಪ ಪೂ) ಉಪ ನಿರ್ದೇಶಕರ ಕಾರ್ಯಾಲಯದ ಸಹಯೋಗದಲ್ಲಿ ವಿಜಯಪುರ ನಗರ, ಬಬಲೇಶ್ವರ, ತಿಕೋಟಾ, ಇಂಡಿ, ಚಡಚಣ , ಸಿಂದಗಿ ತಾಲೂಕಿನ ಪ್ರಾಚಾರ್ಯ ಸಭೆ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಫಲಿತಾಂಶ ಸುಧಾರಣೆಗೆ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈ ಸಲ ನೀಲನಕ್ಷೆ ಪ್ರಕಾರ ಮತ್ತು ಎಲ್ಲಾ ವಿಷಯಗಳ ಪ್ರಶ್ನೆಕೋಶದಲ್ಲಿರುವ ಶೇ. 80ರಷ್ಟು ಪ್ರಶ್ನೆಗಳನ್ನು ಕೇಳಲಾಗುವುದು, ಹಾಗೂ KSEAB ವೆಬ್ ಸೈಟನಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಅಂಕಣ ನೀಡಲಾಗಿದೆ. ಅದರಲ್ಲಿ ಎಲ್ಲಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳು, ನೀಲನಕ್ಷೆ, ಹಿಂದಿನ ಪ್ರಶ್ನೆ ಪತ್ರಿಕೆಗಳು, ವಸ್ತು ವಿಷಯಗಳನ್ನು ನೀಡಲಾಗಿದೆ. ಉಪನ್ಯಾಸಕರು ಅದನ್ನು ಗಮನಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಮಕ್ಕಳು, ಪೋಷಕರು ಹಾಗೂ ಉಪನ್ಯಾಸಕರ ಸಮಸ್ಯೆಗಳನ್ನು ಹಾಗೂ ಸಲಹೆಗಳನ್ನು ತಿಳಿದುಕೊಳ್ಳಲು ಇಲಾಖೆಯು ಸಾಮಾಜಿಕ ಜಾಲತಾಣಗಳಲ್ಲಿ ಖಾತೆಯನ್ನು ತೆರೆಯಲಾಗಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಫಲಿತಾಂಶ ಸುಧಾರಿಸಲು ಎಲ್ಲಾ ಪ್ರಾಚಾರ್ಯರು ಹಾಗೂ ಉಪನಾಯಕರು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಸಭೆಯ ಇನ್ನೋರ್ವ ಅತಿಥಿ ಜಿಲ್ಲೆಯ ಉಪ ನಿರ್ದೇಶಕ ಡಾ. ಸಿ.ಕೆ. ಹೊಸಮನಿ ಅವರು ಮಾತನಾಡಿ, ಈಗಾಗಲೇ ಇಲಾಖೆಯಿಂದ ಮೊದಲ ಘಟಕ ಪರೀಕ್ಷೆ, ಅರ್ಧವಾರ್ಷಿಕ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಮಧ್ಯಮ ವಿದ್ಯಾರ್ಥಿಗಳನ್ನು ಹಾಗೂ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಉಪನ್ಯಾಸಕರು ದತ್ತು ಪಡೆದು ಸೂಕ್ತ ಮಾರ್ಗದರ್ಶನ ನೀಡಬೇಕೆಂದು
ಸೂಚಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಪರಿಹಾರ ಬೋಧನೆ ಮಾಡಲು ಸೂಚಿಸಲಾಗಿದೆ. ಇಲಾಖೆ ಸೂಚಿಸಿದ ಎಲ್ಲಾ ನಿರ್ದೇಶನಗಳನ್ನು ಪಾಲಿಸಲಾಗುತ್ತದೆ ಎಂದು ಹೇಳಿದರು.
ಸಭೆಯ ವೇದಿಕೆ ಮೇಲೆ ಪ್ರಾಚಾರ್ಯ ಮಹಾಮಂಡಳದ ಅಧ್ಯಕ್ಷ ಎ.ಕೆ. ಉಪ್ಪಾರ ಉಪಾಧ್ಯಕ್ಷ ಹೆಬ್ಬಿ ಸಂಸ್ಥೆಯ ಆಡಳಿತ ಅಧಿಕಾರಿ ಪ್ರೊ. ಆಯ್. ಎಸ್. ಕಾಳಪ್ಪನವರ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಾಚಾರ್ಯ ಡಾ. ಜಿ.ಡಿ. ಅಕಮಂಚಿ ಸ್ವಾಗತಿಸಿದರು. ಟಿ ಎಂ ಪವಾರ ವಂದಿಸಿದರು. ಜೆ.ಎ. ಬಿರಾದಾರ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರು ಕಾಲೇಜಿನ ಸಮಸ್ತ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಪಿಯುಸಿ ಫಲಿತಾಂಶ ಶೇ. 90ಕ್ಕೆ ಹೆಚ್ಚಿಸುವ ಗುರಿ-ಜಂಟಿ ನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ


