ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ವಿರೋಧಿಸಿ ಸಹಿ ಸಂಗ್ರಹ ಅಭಿಯಾನ

ಸಪ್ತಸಾಗರ ವಾರ್ತೆ ವಿಜಯಪುರ, ನ. 25:
ಮಹಿಳೆಯರ ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ವಿರೋಧಿಸಿ ರಾಜ್ಯದ ಎಲ್ಲೆಡೆಯಂತೆ ಮಂಗಳವಾರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಎಐಎಮ್‌ಎಸ್‌ಎಸ್ ನ ಜಿಲ್ಲಾಧ್ಯಕ್ಷೆ ಗೀತಾ ಎಚ್. ಮಾತನಾಡಿ, ಮಹಳೆಯರು ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಸಾಧನೆ ಗೈದಿದ್ದಾರೆ. ೨೦೨೪ ಇಸ್ರೋದ ನ್ಯನೊ ಉಪಗ್ರಹ ವನ್ನು ಅಭಿವೃದ್ಧಿ ಪಡಿಸಿದರು. ೨೦೨೫ ರ ವಿಶ್ವಕಪ್ ಕ್ರಿಕೆಟ್ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಪುರುಷ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದು ಭಾರತದ ಇತಿಹಾಸಕ್ಕೆ ಹೊಸ ಅಧ್ಯಯ ಬರೆದಿದ್ದಾರೆ. ಹೀಗಿದ್ದರೂ ಸಮಾಜದಲ್ಲಿ ಮಹಿಳೆಯರ ನೋಡುವ ದೃಷ್ಟಿಕೋನ ಬದಲಾಗಿಲ್ಲ ಎಂದರು. ನಿರಂತರವಾಗಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ಕ್ರೌರ್ಯಗಳು ಹೆಚ್ಚುತ್ತಿವೆ. ಅತ್ಯಾಚಾರ, ಗುಂಪು ಅತ್ಯಾಚಾರ, ಆಸಿಡ್ ದಾಳಿ, ಮರ್ಯಾದೆಗೇಡು ಹತ್ಯೆ, ಸ್ತ್ರೀ ಭ್ರೂಣ ಹತ್ಯೆ, ವರದಕ್ಷಿಣೆ ಕೊಲೆ, ಲೈಂಗಿಕ ಕಿರುಕುಳ, ಬಾಲ್ಯವಿವಾಹ, ಹದಿಹರೆಯದ ಗರ್ಭಧಾರಣೆ, ಮಾನವ ಕಳ್ಳ ಸಾಗಣಿಕೆ, ಬೆತ್ತಲೆ ಮೆರವಣಿಗೆ, ಲಿಂಗ ತಾರತಮ್ಯ ಹೀಗೆ ಹುಟ್ಟಿನಿಂದ ಸಾಯುವ ತನಕ ಹೆಣ್ಣು ಎಂಬ ಕಾರಣಕ್ಕೆ ಅವಳು ಹಲವಾರು ಪೈಶಾಚಿಕ ದಾಳಿಗೆ ತುತ್ತಾಗುತ್ತಿದ್ದಾಳೆ ಎಂದರು.
ನಿರ್ಬಯಾ, ಆಶಿಪಾ, ಪ್ರಿಯಾಂಕ ರೆಡ್ಡಿ, ಅಭಯಾ ಇವರೆಲ್ಲರ ಮೇಲಿನ ಅತ್ಯಾಚಾರ ಮತ್ತು ಕೊಲೆಗಳು, ಮಹಿಳಾ ಕುಸ್ತಿಪಟುಗಳ ಮೇಲಿನ ಅಗೌರವಗಳು , ಹಾಸನದ ಲೈಂಗಿಕ ಹಗರಣ, ದೇಶದ ಜನತೆಯನ್ನು ಬೆಚ್ಚಿ ಬೀಳಿಸಿವೆ. ಕರ್ನಾಟಕ ದಲ್ಲಿ ಸೌಜನ್ಯ, ದಾನಮ್ಮ, ನೇಹಾ ಹಿರೇಮಠ, ಅಂಜಲಿ, ಯಾಮಿನಿಯಂತವರ ಘೋರ ಸಾವುಗಳು ನಾಗರಿಕರನ್ನು ಆಘಾತಕ್ಕೀಡು ಮಾಡಿವೆ. ಹುಬ್ಬಳ್ಳಿಯಲ್ಲಿ ೬ ವರ್ಷದ ಕಂದಮ್ಮ, ದಸರಾದಲ್ಲಿ ಬಲೂನು ಮಾರಲು ಕುಟುಂಬದೊಂದಿಗೆ ಗುಳೆ ಬಂದ ಕಂದಮ್ಮ, ತೊರಣಗಲ್ಲಿ ವಲಸೆ ಬಂದ ಕಾರ್ಮಿಕರ ಐದು ವರ್ಷದ ಕಂದಮ್ಮಗಳ ಮೇಲಿನ ಕ್ರೂರ ಅತ್ಯಾಚಾರ ಹಾಗೂ ಕೊಲೆಗಳು ವಿಕೃತ ತೆಯ ಪರಾಕಾಷ್ಠೆಯನ್ನು ತಲುಪಿವೆ. ಜೊತೆಗೆ ಯುದ್ಧ, ದ್ವೇಷ ಅಥವಾ ಜನಾಂಗಿಯ ಕಲಹಗಳಿಗೆ ಕೆಳವರ್ಗದ ಮಹಿಳೆಯರು ಸೇರಿದಂತೆ , ಎಲ್ಲಾ ವರ್ಗದ ಮಹಿಳೆಯರ ದೇಹ ಕದನ ಮೈದಾನವಾಗಿ ಬಿಟ್ಟಿದೆ ಎಂದು ಹೇಳಿದ್ದಾರೆ.
ಇನ್ನೂ ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೋ ವರದಿಗಳು ಸ್ಪರ್ಧೆಗಳಿದಂತೆ ಹೆಚ್ಚುತ್ತಲೆ ಸಾಗಿವೆ. ೨೦೨೨ ರಲ್ಲಿ ೪.೪೫ ಲಕ್ಷ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ದಾಖಲಾಗಿವೆ. ಕಳೆದ ೪ ವರ್ಷದಲ್ಲಿ ೨.೯೯ ಲಕ್ಷ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ. ಕರ್ನಾಟಕದಲ್ಲಿಯೂ ಸಾಕಷ್ಟು ಎಲ್ಲ ರೀತಿಯ ಪ್ರಕರಣಗಳು ದಾಖಲಾಗುತ್ತಿವೆ. ಇದನ್ನು ಎದುರಿಸಲು ಎಲ್ಲರೂ ಒಂದಾಗಿ ಪ್ರತಿಭಟಿಸುವುದು ಅನಿವಾರ್ಯವಾಗಿದೆ ಎಂದರು.
ಇದೇ ವೇಳೆ ಎಐಎಮ್ ಎಸ್ ಎಸ್ ನ ಜಿಲ್ಲಾ ಕಾರ್ಯದರ್ಶಿ ಶಿವಬಾಳಮ್ಮ ಕೊಂಡಗೂಳಿ ಮಾತನಾಡಿ, ಹೆತ್ತು ಹೊರೆವ ಹೆಣ್ಣನ್ನು ಹಲವಾರು ಆಲಂಕಾರ ಪೂರಿತ ಪದಪುಂಜಗಳಿಂದ ಪೂಜಿಸಲ್ಪಡುವ ಈ ದೇಶದಲ್ಲಿ ಮಹಿಳೆಯರ ಮತ್ತು ಮಕ್ಕಳು ಅತ್ಯಂತ ಹೀನಾಯ ಸ್ಥಿತಿಗೆ ತಲುಪುತ್ತಿರುವದು ಏಕೆ? ಪ್ರಾಣಿ ಪ್ರಪಂಚದಲ್ಲೂ ಜರುಗದ ಇಂತಹ ವಿಕೃತಗಳು ,ಮನಷ್ಯ ಸಮಾಜದಲ್ಲಿ ಏಕೆ ಜರುಗುತ್ತಿವೆ. ಹೆಣ್ಣು ಪುರುಷನ ಆಸ್ತಿ ,ಭೋಗದ ವಸ್ತು ಎಂಬ ಊಳಿಗಮಾನ್ಯ ವಿಚಾರ ಸಮಾಜದಲ್ಲಿ ಜೀವಂತವಾಗಿದೆ, ಸಮಾನತೆ ಎಂಬುವದು ನೆಲೆಗೊಂಡಿಲ್ಲ. ಮತ್ತು ಜಾಗತೀಕರಣ ನೀತಿಯಿಂದಾಗಿ ಹೆಣ್ಣಿನ ದೇಹವನ್ನು ಕೂಡಾ ಲಾಭದ ನಿಕ್ಷೇಪವನ್ನಾಗಿ ಮಾಡಲಾಗಿದೆ. ಮುಕ್ತ ಮಾರುಕಟ್ಟೆಯಲ್ಳಿ ಹೆಣ್ಣಿನ ದೇಹವು ಕೂಡಾ ಮುಕ್ತವಾದ ಸರಕಾಗಿದೆ. ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಂದರೆ ಟಿವಿ, ಮೊಬೈಲ್ ಇಂಟರ್ನೆಟ್ ಗಳಲ್ಲಿ ಆವ್ಯಾಹತವಾಗಿ ಹರಿದಾಡುತ್ತಿರುವ ಅಶ್ಲೀಲತೆ ,ಕ್ರೌರ್ಯ, ನೀಲಿಚಿತ್ರ ಹಾಗೂ ಶಾಟ್ಸ್ ,ರಿಲ್ಸ್, ಇನ್ಟ್ಸಗ್ರಾಮ್‌ನಲ್ಲಿನ ಅನುಚಿತ ವಿಷಯಗಳು ಹದಿಹರೆಯದವರಲ್ಲಿ ಕೆಟ್ಟ ಪ್ರಭಾವ ಬೀರಿದೆ ನೈತಿಕ ಮೌಲ್ಯಗಳ ಬೇರನ್ನು ಬುಡ ಸಮೇತ ಹೊಸಕಿ ಹಾಕಿವೆ. ಅತ್ಯಂತ ಸುಲಭವಾಗಿ ಸಿಗುವ ಈ ಕುಸಂಸ್ಕೃತಿಯ ಜೊತೆಗೆ ಮದ್ಯ ಮಾದಕ ವಸ್ತುಗಳು ಮನುಷ್ಯನಲ್ಲಿನ ಮೂಲ ಪ್ರವೃತ್ತಿಗಳನ್ನು ಪ್ರಚೋದಿಸಿ ಅವನನ್ನು ಪಶುತ್ವಕ್ಕಿಂತ ಕೀಳು ಮಟ್ಟಕ್ಕೆ ಇಳಿಸುತ್ತವೆ ಎಂದು ನುಡಿದರು.
ಎಳೆಯ ಬಾಲಕರಿಂದ ಹಿಡಿದು ವಯಸ್ಸಾದವರೂ ಕೂಡ ಇದರ ದಾಸರಾಗಿದ್ದಾರೆ. ನರರೂಪದ ಮನುಷ್ಯರಾಗಿ ಕಾಣುವಂತಹವರ ಅತ್ಯಾಚಾರಕ್ಕೆ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ಯಾವುದೇ ಕಡಿವಾಣ ಇಲ್ಲದೆ ಅಶ್ಲೀತೆ ಪ್ರಸಾರವಾಗುತ್ತಿದೆ. ಇಂದಿನ ಪೊಲೀಸ್, ಆಡಳಿತಾಂಗ ಮತ್ತು ನ್ಯಾಯಾಂಗ ಸಂಪೂರ್ಣವಾಗಿ ಸೋತಿವೆ ಅಷ್ಟೇ ಅಲ್ಲ ನಿಷ್ಕ್ರಿಯವಾಗಿವೆ. ಹೀಗಾಗಿಯೇ ಅಪರಾಧಿಗಳು ಕಿಂಚಿತ್ತು ಭಯವಿಲ್ಲದೆ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಜೊತೆಗೆ ರಾಜಕಾರಣಿಗಳು , ಧರ್ಮಗುರುಗಳು ಮಹಿಳೆಯರ ಘನತೆಯನ್ನು ಗೌರವಿಸುತ್ತಾರೆ ಎನ್ನುವುದು ದೂರದ ಮಾತು. ಬದಲಿಗೆ ಅವರೆ ಎಷ್ಟೋ ಘಟನೆಗಳಲ್ಲಿ ನೇರವಾಗಿ ಅಪರಾಧಿಗಳಾಗಿದ್ದಾರೆ. ಅಪರಾಧಿ ಹಿನ್ನೆಲೆಯುಳ್ಳ ಶಾಸಕರು ಮತ್ತು ಸಚಿವರ ಸಂಖ್ಯೆ ಹೆಚ್ಚುತ್ತಿದೆ. ಡೊಮಿನಕನ್ ರಿಪಬ್ಲಿಕ ದೇಶದ ನಿರುಂಕುಶ ಪ್ಯಾಸಿವಾದಿ ಆಡಳಿತದ ವಿರುದ್ದ ಹುತಾತ್ಮರಾದ ಮಿರಾಬೆಲ್ ಸಹೋದರಿಯರ ನೆನಪಿಗಾಗಿ ನವಂಬರೆ ೨೫ ವಿಶ್ವ ಮಹಿಳಾ ದೌರ್ಜನ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಅಂತವರ ಸ್ಫೂರ್ತಿಯಿಂದ ಮಹಿಳೆಯರು ತಮ್ಮ ರಕ್ಷಣೆಗಾಗಿ ಹೋರಾಡಿ ಸಮಾನತೆಯ ಸಮಜ ರೂಪಿಸುವದು ಒಂದೆ ಪರಿಹಾರವಾಗಿದೆ ಎಂದರು.
ಎಐಎಮ್ ಎಸ್ ಎಸ್ ನ ಜಿಲ್ಲಾ ಜಂಟಿ ಕಾರ್ಯದಶಿ ಶಿವರಂಜನಿ ಉಪಸ್ಥತರಿದ್ದರು.
ನೂರಾರು ವಿದ್ಯಾರ್ಥಿ, ಯುವಕರು, ಮಹಿಳೆಯರು ತಮ್ಮ ಸಹಿ ಮಾಡುವುದರ ಮೂಲಕ ಈ ಅಭಿಯಾನಕ್ಕೆ ಬೆಂಬಲಿಸಿದರು.

Share this