ದಾಕ್ಷಿ ಬೆಳೆ ವಿಮೆ ಪರಿಹಾರದ ಹಣ: ಶೀಘ್ರದಲ್ಲಿ ಬಿಡುಗಡೆಗೊಳಿಸುವಂತೆ ದ್ರಾಕ್ಷಿ ಬೆಳೆಗಾರರು ಆಗ್ರಹ

ಸಪ್ತಸಾಗರ ವಾರ್ತೆ, ವಿಜಯಪುರ, ನ. 26:
ದಾಕ್ಷಿ ಬೆಳೆ ವಿಮೆಯ ಪರಿಹಾರದ ಹಣವನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸುವಂತೆ ದ್ರಾಕ್ಷಿ ಬೆಳೆಗಾರರು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ಡಾ. ಕೆ. ಎಚ್. ಮುಂಬಾರೆಡ್ಡಿ ಮಾತನಾಡಿ, ಕರ್ನಾಟಕದಲ್ಲಿ ಸಾಕಷ್ಟು ಜನ ರೈತರು ದಾಕ್ಷಿ ಬೆಳೆ ವಿಮೆ ಯೋಜನೆಯಡಿ 2024-25 ಸಾಲಿನ ದ್ರಾಕ್ಷಿ ಬೆಳೆಯ ವಿಮೆಯ ಕಂತನ್ನು ತುಂಬಿದ್ದು ಪರಿಹಾರ ಘೋಷಣೆ ಆದರೂ ಕೂಡ ಇಲ್ಲಿಯವರೆಗೆ ವಿಮೆಯ ಪರಿಹಾರ ಹಣ ಬಿಡುಗಡೆ ಆಗಿಲ್ಲ. ದಾಕ್ಷಿ ಬೆಳೆ ವಿಮೆಯ ಅವಧಿ ಸಪ್ಟೆಂಬರ್ ದಿಂದ ಏಪ್ರೀಲ್‌ವರೆಗೆ ರಿಸ್ಕ್ ಅವಧಿ ಇದ್ದು, ಅದು ಮುಗಿದ ನಂತರ ಕೂಡಲೇ ವಿಮೆ ಪರಿಹಾರ ಕೊಡಬೇಕಾಗಿತ್ತು. ಆದರೆ ನಕಲಿ ಕ್ಷೇತ್ರದ ನೆಪ ಒಡ್ಡಿ ಪರಿಹಾರ ನೀಡದಿರುವುದು ಖಂಡನೀಯ ಮತ್ತು ಕಾನೂನು ಬಾಹಿರವಾಗಿರುತ್ತದೆ ಎಂದರು.
ಆದ್ದರಿಂದ, 2024-25 ರಲ್ಲಿ ಬೆಳೆ ಪರಿಹಾರದ ವಿಮೆಯ ಕಂತನ್ನು ತುಂಬಿದ ಎಲ್ಲ ರೈತರಿಗೂ ತ್ವರಿತವಾಗಿ ಬೆಳೆ ಪರಿಹಾರದ ವಿಮೆ ಕಂತನು ಬಿಡುಗಡೆಗೊಳಿಸಬೇಕು ಎಂದರು.
ಒಂದು ವಾರದಲ್ಲಿ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
2024-25ರ ಅವಧಿಯ ಕ್ಷೇತ್ರದ ಸರ್ವೆ ಕಾರ್ಯ ಕಾನೂನು ಬಾಹಿರವಾಗಿದ್ದು, ಕೂಡಲೇ ಕೈಬಿಡಬೇಕು. ಈಗ ಆಗಲೇ ಹವಾಮಾನ ವೈಪರೀತ್ಯದಿಂದ ಕಳೆದ 2 ವರ್ಷ ದಾಕ್ಷಿ ಬೆಳೆಗಾರರು ಅಪಾರ ನಷ್ಟ ಅನುಭವಿಸಿ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಆದ್ದರಿಂದ ಕೂಡಲೇ ವಿಮೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ವಾಮನ ಮಹಿಷಿ, ಶ್ರೀಶೈಲಗೌಡ ಪಾಟೀಲ, ಉಮೇಶ ಮಲ್ಲಣ್ಣವರ, ಸುರೇಶಗೌಡ ಬಿರಾದಾರ, ಅಶೋಕ ಬಾಲಗಾವಿ, ವಿಶ್ವನಾಥ ಚನಾಳ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Share this