ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಿ- ಸಾವುಕಾರ

ಸಪ್ತಸಾಗರ ವಾರ್ತೆ, ವಿಜಯಪುರ, ನ. 29:
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡಬೇಕು ಎಂದು ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ. ಸಾವುಕಾರ ಅವರು ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಯಶವಂತರಾಯಗೌಡ ಅವರು
ಒಬ್ಬ ಜಾತ್ಯಾತೀತ ನಾಯಕರಾಗಿದ್ದು, ಎಲ್ಲ ಸಮುದಾಯದವರ ಪ್ರೀತಿಗೆ ಪಾತ್ರರಾಗಿದ್ದಾರೆ. ಮತಕ್ಷೇತ್ರದಲ್ಲಿ ಅವರ ಅಧಿಕಾರಾವಧಿಯಲ್ಲಿ ಒಳ್ಳೆಯ ಅಭಿವೃದ್ಧಿ ಕಾರ್ಯಗಳು ನಡೆದಿರುತ್ತವೆ. ಇವರೊಬ್ಬ ತಳಮಟ್ಟದ ಹಾಗೂ ಸಜ್ಜನ ರಾಜಕಾರಣಿಯಾಗಿದ್ದು, ಅಂದರೆ ಮೂರು ಬಾರಿ ಜಿಲ್ಲಾ ಪಂಚಾಯತಿ ಸದಸ್ಯರಾಗಿ ನಂತರ ಮೂರು ಬಾರಿ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಮತಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್‌, ಸಮುದಾಯ ಭವನ ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ಒಬ್ಬ ಜನಪ್ರಿಯ ಶಾಸಕರಾಗಿ ಹೊರಹೊಮ್ಮಿದ್ದಾರೆ. ಇಂಡಿ ಭಾಗವು ಲಿಂಬೆ ಬೆಳೆಯ ಕಣಜವಾಗಿದ್ದು, ಲಿಂಬೆ ಅಭಿವೃದ್ಧಿ ಮಂಡಳಿಯ ರಚನೆಯಲ್ಲಿ ಇವರ ಪ್ರಯತ್ನವು ತುಂಬಾ ಶ್ಲಾಘನೀಯವಾಗಿದೆ ಎಂದು ತಿಳಿಸಿದ್ದಾರೆ. ಇಂಡಿ ಮತ್ತು ಸಿಂದಗಿ ತಾಲೂಕಿನ ರೈತರ ಜೀವನಾಡಿಯಾಗಿರುವ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಮರಗೂರ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಮನರುಜ್ಜೀವನಗೊಳಿಸಿ ರೈತರ ಬಾಳು ಹಸನುಗೊಳಿಸಿದ್ದಾರೆ. ಇಂಡಿ ನಗರದಲ್ಲಿ ಮಿನಿ ವಿಧಾನಸೌಧ, ಮೆಘಾ ಮಾರ್ಕೆಟ್ ಹಾಗೂ ಇಂಡಿ ನಗರಕ್ಕೆ 24X7 ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇಂಡಿ ಮತಕ್ಷೇತ್ರದಲ್ಲಿ ಶಾಸಕರ ಸಮುದಾಯದ ಮತಗಳು ಕೇವಲ 5-6 ಸಾವಿರರಷ್ಟು ಮಾತ್ರವಿದ್ದರೂ ಸತತ ಮೂರು ಬಾರಿ ಆರಿಸಿ ಬರಲು ಅವರು ಮತದಾರರಿಗೆ ತೋರಿಸುತ್ತಿರುವ ಪ್ರೀತಿ, ಕಾಳಜಿ ಮತ್ತು ಅವರ ಜನಪ್ರಿಯತೆಗೆ ಸಾಕ್ಷಿ ಎನ್ನಬಹುದು ಎಂದು ಹೇಳಿದ್ದಾರೆ.
ಅವರ ತಂದೆಯವರಾದ ವಿಠಲಗೌಡ ಪಾಟೀಲ ಅವರ ಕಾಲದಿಂದಲೇ ಅವರ ಕುಟುಂಬವು ಕಟ್ಟಾ ಕಾಂಗ್ರೆಸ್ ಕಾರ್ಯಕರ್ತರಾಗಿ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಅದರಂತೆ 2023ರ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಯಶವಂತರಾಯಗೌಡ ಪಾಟೀಲ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದೇ ಆದಲ್ಲಿ ಅವರನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದರು ಎಂದು ನೆನಪಿಸಿದ್ದಾರೆ. ಆದ್ದರಿಂದ ಸದ್ಯ ಮಾಡಲಿರುವ ಸಂಪುಟ ಪುನಾರಚನೆಯಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದಂತೆ ಯಶವಂತರಾಯಗೌಡ ಪಾಟೀಲರಿಗೆ ಸಚಿವಸ್ಥಾನ ನೀಡಲೇಬೇಕೆಂದು ವಿನಂತಿಸುತ್ತೇನೆ. ಅದು ಅಲ್ಲದೆ ಇಂಡಿ ಮತಕ್ಷೇತ್ರವಾದಾಗಿನಿಂದಲೂ ಅಂದರೆ ಸ್ವಾತಂತ್ರ್ಯಾನಂತರ ಇಲ್ಲಿಯವರೆಗೂ ಈ ಇಂಡಿ ಮತಕ್ಷೇತ್ರವು ಸಚಿವಸ್ಥಾನ ದೊರೆಯದೆ ವಂಚಿತವಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಯಶವಂತರಾಯಗೌಡ ಪಾಟೀಲ ಅವರನ್ನು ಸಂಪುಟ ಪುನಾರಚನೆಯಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರನ್ನಾಗಿ ನೇಮಿಸಬೇಕೆಂದು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಹಾಗೂ ರಾಜ್ಯ ಮಟ್ಟದ ನಾಯಕರಲ್ಲಿ ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾವುಕಾರ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Share this