ಸಪ್ತ ಸಾಗರ ವಾರ್ತೆ, ವಿಜಯಪುರ, ಡಿ. 1: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಸೋಮವಾರ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಯಿತು.
ನಗರದ ಶಿವಾಜಿ ವೃತ್ತದಿಂದ ಪ್ರತಿಭಟನೆ ಮೆರವಣಿಗೆ ಆರಂಭಗೊಂಡು ಸಿದ್ದೇಶ್ವರ ದೇವಸ್ಥಾನ, ಗಾಂಧಿವೃತ್ತದ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ತೆರಳಿ ಸಮಾವೇಶವಾಗಿ ಸಭೆಯಾಗಿ ಮಾರ್ಪಟ್ಟಿತು.
ಮೆರವಣಿಗೆಯಲ್ಲಿ ವಿವಿಧ ಕಾಲೇಜಿನ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ನೀಡದ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸಿ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ನಂತರ ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಬಹಿರಂಗ ಸಭೆಯನ್ನು ಉದ್ದೇಶಿಸಿ ಹಿರಿಯ ಹೋರಾಟಗಾರರಾದ ಜಿ.ಬಿ ಪಾಟೀಲ ಅವರು ಮಾತನಾಡಿ, ವಿಜಯಪುರ ಜನರು ಇಂದು ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇಂದು ವಿದ್ಯಾರ್ಥಿಗಳು ಗಟ್ಟಿ ನಿರ್ಧಾರ ಮಾಡಬೇಕಾಗಿದೆ. ಇದು ನಮ್ಮ ಅಳಿವಿನ ಹೋರಾಟವಾಗಿದೆ.ನಮ್ಮ ಆಸ್ತಿಯನ್ನು ಉಳಿಸಿಕೊಳ್ಳುವ ಹೋರಾಟ ಇದಾಗಿದೆ. ಸರ್ಕಾರ ಆಸ್ತಿಯನ್ನು ಖಾಸಗಿಯವರು ಕಬಳಿಸಿಕೊಳ್ಳುವ ಹುನ್ನಾರ ಇದರಲ್ಲಿದೆ. ನಮ್ಮ ಆಸ್ತಿಯನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಸರ್ಕಾರಿ ಆಸ್ಪತ್ರೆಗೆ ಹೋಗುವವರು ಯಾರು ಬಡವರು,ಅಲ್ಪಸಂಖ್ಯಾತರು. ನಮ್ಮ ಹಸಿವನ್ನು ಬೆವರನ್ನು ಕಿತ್ತುಕೊಳ್ಳುವ ಶಕ್ತಿ ಈ ದೇಶದಲ್ಲಿ ಬರುತ್ತಿದೆ. ಅಂದರೆ ಅದನ್ನು ನಾವೆಲ್ಲರೂ ಒಕ್ಕೂರಲಿನಿಂದ ವಿರೋಧಿಸಬೇಕಾಗಿದೆ. ನಾವು ಅದನ್ನು ಖಂಡಿಸಬೇಕಾಗುತ್ತದೆ. ನಾವೆಲ್ಲರೂ ನಮ್ಮ ಆಸ್ತಿಯನ್ನು ಕಿತ್ತುಕೊಳ್ಳುವವರ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಯಾವುದೇ ಕಾರಣಕ್ಕೂ ಸರ್ಕಾರ ವೇದಿಕೆಯ ಕಾಲೇಜನ್ನು ಖಾಸಗಿ ಅವರಿಗೆ ಬಿಟ್ಟು ಕೊಡುವುದಿಲ್ಲ ಎಂದು ಗಟ್ಟಿಯಾಗಿ ನಮ್ಮ ಕೂಗನ್ನು ಅವರಿಗೆ ಮುಟ್ಟಿಸಬೇಕಾಗಿದೆ ಎಂದು ಹೇಳಿದರು.
ಪತ್ರಕರ್ತರು ಹಾಗೂ ಅಂಕಣಕಾರ ಡಿ. ಉಮಾಪತಿ ಅವರು ಮಾತನಾಡಿ, ಇಡೀ ದೇಶ ಖಾಸಗೀಕರಣದತ್ತ ಹೋಗುತ್ತಿದೆ. ಸರ್ಕಾರಗಳು ಈ ಪಕ್ಷ ಆ ಪಕ್ಷ ಎನ್ನುವ ಭೇದಭಾವವಿಲ್ಲದೆ ಸಾರ್ವಜನಿಕರ ಆಸ್ತಿಯನ್ನು ಖಾಸಗಿಯವರ ಕೈಗೆ ಒಪ್ಪಿಸಿವೆ. ದೊಡ್ಡ ದೊಡ್ಡ ಕಾರ್ಪೊರೇಟರ್ ಗಳು ಬಂದು ಈ ದೇಶದ ಶಿಕ್ಷಣ, ಆರೋಗ್ಯ, ನೀರು, ನೆಲ ಎಲ್ಲವನ್ನು ಖಾಸಾಗೀಕರಣಕ್ಕೆ ಒಳಪಡುವ ಪ್ರಯತ್ನಗಳು ಬಹಳ ವರ್ಷಗಳಿಂದ ನಡೆಯುತ್ತಿವೆ. ನೀವು ಪ್ರತಿರೋಧ ಮಾಡದೆ ಇದ್ದರೆ ನಿಮ್ಮ ಆರೋಗ್ಯ ವ್ಯವಸ್ಥೆ ಶಿಕ್ಷಣ ವ್ಯವಸ್ಥೆಯ ಖಾಸಗಿ ಅವರಿಗೆ ಹೋಗುತ್ತದೆ.ಬೆಟ್ಟ ಗುಡ್ಡವನ್ನು ಕೂಡ ಕಾರ್ಪೊರೇಟ್ ಗಳಿಗೆ ಒಪ್ಪಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ವಿಧಿಸುವ ದೊಡ್ಡ ದೊಡ್ಡ ಶುಲ್ಕವನ್ನು ಈ ದೇಶದ ಜನಸಾಮಾನ್ಯರು ಕಟ್ಟಬೇಕಾಗುತ್ತದೆ. ಸಾಮಾನ್ಯರಿಗೆ ಬರುವ ಕಡಿಮೆ ಸಂಬಳದಲ್ಲಿ ಕುಟುಂಬ ಸಂಸಾರ ಹೇಗೆ ನಡೆಸಬೇಕೆಂಬುವ ಪರಿಸ್ಥಿತಿ ಇದೆ. ಕಡಿಮೆ ಸಂಬಳದಲ್ಲಿ ಶಿಕ್ಷಣಕ್ಕೆ ಆರೋಗ್ಯಕ್ಕೆ ಎಷ್ಟು ವೆಚ್ಚ ನೀಡಬೇಕೆಂಬುದೇ ಜನಸಾಮಾನ್ಯರಿಗೆ ತಿಳಿಯುತ್ತಿಲ್ಲ ಎಂದರು.
ವಿಜಯಪುರ ಜಿಲ್ಲೆಗೆ ಇದೊಂದು ದೊಡ್ಡ ಹೋರಾಟಕ್ಕೆ ನನ್ನ ನೈತಿಕ ಬೆಂಬಲವಿದೆ ಎಂದು ಹೇಳಿದರು.
ಬಿ ಭಗವಾನ್ ರೆಡ್ಡಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ವೇದಿಕೆ ಮೇಲೆ ವಿವಿಧ ಸಂಘಟನೆಯ ನಾಯಕರುಗಳು, ಹೋರಾಟ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
75 ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ: ಬೃಹತ್ ಪ್ರತಿಭಟನಾ ಮೆರವಣಿಗೆ


