ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳ ಮಠಕ್ಕೆ ೫೦ ವಸಂತಗಳ ಸಂಭ್ರಮ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 5: ಶ್ರೀ ದಿವಟಗೇರಿ ಗಲ್ಲಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳ ಮಠಕ್ಕೆ ೫೦ ವಸಂತಗಳ ಸಂಭ್ರಮ. ಅದರಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ನೆರವೇರುತ್ತಿವೆ.
ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥರು ಶ್ರೀಮಠಕ್ಕೆ ಭೇಟಿ ನೀಡಿ ರಾಯರ ಪವಿತ್ರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ಮಾಡಿದರು. ನಂತರ ಫಲ-ಪುಷ್ಪಗಳನ್ನು ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಂಸ್ಥಾನ ಪೂಜೆಯನ್ನು ನೆರವೇರಿಸಿದರು. ನಂತರ ಭಕ್ತಾದಿಗಳಿಗೆ ಫಲಮಂತ್ರಾಕ್ಷತೆ ನೀಡಿ ಹರಸಿದರು.
ಇದಕ್ಕೂ ಮುನ್ನ ಧರ್ಮ ಬೋಧನೆ ಸಂದೇಶ ನೀಡಿದ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು, ಶ್ರೀ ಗುರು ರಾಘವೇಂದ್ರ ರಾಯರು ಕಲಿಯುಗದ ಕಾಮಧೇನು, ಇಷ್ಟಾರ್ಥಗಳನ್ನು ಕರುಣಿಸುವ ಗುರು ರಾಘವೇಂದ್ರ ರಾಯರನ್ನು ಭಕ್ತಿಭಾವದಿಂದ ಸ್ಮರಿಸಬೇಕು. ಅದಮ್ಯವಾದ ಭಕ್ತಿಗೆ ಗುರು ರಾಘವೇಂದ್ರರು ಮೆಚ್ಚುತ್ತಾರೆ ಎಂದರು. ಶ್ರೀ ರಾಯರ ಮಠ ೬೦ ವಸಂತ ಪೂರ್ಣಗೊಳಿಸುವ ಸಂದರ್ಭದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವುದು ಸಂತೋಷ ತಂದಿದೆ ಎಂದರು.
ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಶ್ರೀಮಠದ ಅರ್ಚಕ ಶ್ರೀನಿವಾಸ ಆಚಾರ್ಯರು, ಮಾಜಿ ಅಧ್ಯಕ್ಷ ಪ್ರಕಾಶ ಅಕ್ಕಲಕೋಟ, ಶ್ರೀನಿವಾಸ ಬೆಟಗೇರಿ, ಉಪೇಂದ್ರ ದೇಸಾಯಿ, ವಿಜಯ ಜೋಶಿ, ವಿಕಾಸ ಪದಕಿ, ಶ್ರೀಕೃಷ್ಣ ಗುನ್ನಾಳಕರ, ರಾಕೇಶ ಕುಲಕರ್ಣಿ, ವಾಮನ ಕುಲಕರ್ಣಿ, ವಿನಾಯಕ ಕುಲಕರ್ಣಿ, ನಂದಕಿಶೋರ ಕುಲಕರ್ಣಿ, ಅಪ್ಪಣ್ಣ ಗಾಯಿ, ಬಿಂದು ಖಾಸನೀಸ್ ಮೊದಲಾದವರು ಪಾಲ್ಗೊಂಡಿದ್ದರು.

Share this