ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ತಿದ್ದುಪಡಿ ಕಾಯಿದೆ ವಿಧಾನಸಭೆಯಲ್ಲಿ ಮಂಡಿಸದಂತೆ ಆಗ್ರಹಿಸಿ ಡಿಸಿಗೆ ಮನವಿ

ಸಪ್ತ ಸಾಗರ ವಾರ್ತೆ ವಿಜಯಪುರ, ಡಿ. 8 : ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ ೨೦೨೦ರ ಪ್ರಸ್ತಾವಿತ ತಿದ್ದುಪಡಿಯು ಸಂವಿಧಾನದ ಅಶಯಕ್ಕೆ ಹಾಗೂ ರಾಜ್ಯದ ಮತ್ತು ಹಿಂದೂ ಸಮಾಜದ ಹಿತಾಸಕ್ತಿಗೆ ವಿರೋಧಿಯಾಗಿರುವುದರಿಂದ ಅದನ್ನು ವಿಧಾನ ಸಭೆಯಲ್ಲಿ ಮಂಡಿಸದಂತೆ ಸರ್ವ ಕ್ರಮ ಕೈಗೊಳ್ಳಲು ಆಗ್ರಹಿಸಿ ಮತ್ತು ಗೋ ಸಂರಕ್ಷಣೆ ಕಾನೂನು ಸಡಿಲಗೊಳಿಸುತ್ತಿರುವ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಕಾರ್ಯದರ್ಶಿ ಕರ್ನಾಟಕ ಸರ್ಕಾರ ಬೆಂಗಳೂರ ಅವರಿಗೆ ವಿಶ್ವ ಹಿಂದೂ ಪರಿಷತ್ ವಿಜಯಪುರ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಾಂತ ಪ್ರಮುಖರಾದ ಸುನೀಲ ಭೈರವಾಡಗಿ ಮಾತನಾಡಿ, ಕರ್ನಾಟಕ ಸರಕಾರ ತನ್ನ ಕ್ಯಾಬಿನೆಟ್ ಸಭೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ ೨೦೨೦ರ ಸೆಕ್ಷನ್ ೮(೪)ಕ್ಕೆ ತಿದ್ದುಪಡಿಯನ್ನು ಮಾಡುವ ಬಗ್ಗೆ ನಿರ್ಣಯ ತೆಗೆದುಕೊಂಡಿದೆ ಎಂದು ಮಾಧ್ಯಮದ ಮೂಲಕ ತಿಳಿದು ಬಂದಿದ್ದು, ಇದನ್ನು ಇವತ್ತು ಸೇರಿದ ಈ ಸಭೆಯು ತೀವ್ರವಾಗಿ ವಿರೋಧಿಸುತ್ತಿದ್ದು ತಿದ್ದುಪಡಿ ಮಾಡುವುದನ್ನು ತಕ್ಷಣ ಕೈಬಿಡಬೇಕೆಂದು ಸಂಬಂಧಪಟ್ಟವರೆಲ್ಲರಿಗೂ ತಾವು ತಿಳಿಸಬೇಕೆಂದು ಹಾಗೂ ಈ ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಮಂಡಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಗೋವುಗಳು ಅತ್ಯಂತ ಹಿಂಸಾತ್ಮಕವಾಗಿ ಒಂದೇ ವಾಹನದಲ್ಲಿ ನಿಗದಿತ ಸಂಖ್ಯೆಗಿಂತ ಹತ್ತಾರು ಪಟ್ಟು ಹೆಚ್ಚು ಜಾನುವಾರುಗಳನ್ನು ಕ್ರೂರವಾಗಿ ಒಂದರ ಮೇಲೊಂದು ಹಾಕಿ ದುಡ್ಡಿನ ಆಸೆಗಾಗಿ ಸಾಗಾಟ ಮಾಡುತ್ತಿರುವುದು ಕಂಡುಬರುತಿತ್ತು. ಮೇಲ್ಕಾಣಿಸಿದ ಕಾಯಿದೆ ೨೦೨೧ ರಲ್ಲಿ ಜಾರಿಯಾದ ನಂತರ ಈ ಕ್ರೂರತೆ ಒಂದಷ್ಟು ಕಡಿಮೆ ಆದದ್ದು ಕಂಡು ಬಂದಿದೆ. ಆದರೆ ಇನ್ನೂ ಕೂಡ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡದ ಕಾರಣ ಹಲವು ಕಡೆ ಹಣದ ಆಸೆಗಾಗಿ ವಾಹನದ ಮಾಲಕರು ಕ್ರೂರವಾಗಿ ಜಾನುವಾರುಗಳನ್ನು ಸಾಗಿಸುವುದು ಕಂಡು ಬಂದಿದೆ . ಇದನ್ನು ನಿಯಂತ್ರಿಸಬೇಕಾದರೆ ಈ ಕಾಯಿದೆ ಬಿಗಿಯಾದ ರೀತಿಯಲ್ಲಿ ಜಾರಿಗೊಳಿಸಬೇಕಾಗಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕಟುಕರಿಗೆ ಹಾಗೂ ಅಕ್ರಮ ಗೋ ಕಳ್ಳರಿಗೆ ಸುಲಭವಾಗಿ ಸಾಗಾಟ ಮಾಡಲು ಅನುಕೂಲವಾಗುವಂತೆ ವಶಪಡಿಸಿದ ವಾಹನ ತಾತ್ಕಾಲಿಕ ಹಸ್ತಾಂತರಕ್ಕೆ ಬ್ಯಾಂಕ್ ಗ್ಯಾರಂಟಿ ಕೊಡುವುದನ್ನು ಕೈ ಬಿಡುವ ಬಗ್ಗೆ ಕಾಯಿದೆಯನ್ನು ತಿದ್ದುಪಡಿ ಮಾಡದಂತೆ ಕ್ರಮ ಕೈಗೊಂಡು ರಾಜ್ಯದಲ್ಲಿ ಕಾನೂನು ರೀತಿಯಲ್ಲಿ ಮಾತ್ರ ಜಾನುವಾರುಗಳನ್ನು ಸಾಗಾಟ ಮಾಡುವಂತೆ ಕಾನೂನು ಜಾಗೃತಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ರೋಡಗಿ, ಈ ಕಾಯಿದೆ ಕೇವಲ ಜಾನುವಾರು ವಧೆ ನಿಷೇಧಿಸುವ ಉದ್ದೇಶ ಮಾತ್ರವಲ್ಲದೆ ಸಂರಕ್ಷಣಾ ಕಾಯಿದೆಯೂ ಆಗಿರುತ್ತದೆ. ಅಂದರೆ ಮುಖ್ಯವಾಗಿ ಸಾಗಾಟದ ಸಮಯದಲ್ಲಿ ಜಾನುವಾರುಗಳಿಗೆ ವಾಹನದ ಮಾಲಕರು ಮಾಡುವ ಕ್ರೂರ ಸಾಗಾಟ ನಿಲ್ಲಿಸಿ ಸಾಗಾಟದಲ್ಲಿ ಜಾನುವಾರುಗಳಿಗೆ ಆಗಬಹುದಾದಂತಹ ಹಿಂಸೆ. ಗಾಯ ಗಳಿಂದ ಸಂರಕ್ಷಣೆ ಮಾಡುವ ಉದ್ದೇಶವನ್ನು ಹೊಂದಿದ್ದು ಅದಕ್ಕಾಗಿ ಜಾನುವಾರು ಸಾಗಾಟ ನಿಯಮಾವಳಿಗಳನ್ನು ವಾಹನ ಮಾಲಕರೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮನೋಭಾವ ಸೃಷ್ಟಿಯಾಗಲು ಬಿಗಿಯಾದಂತ ಕಾನೂನು ರಚಿಸಲಾಗಿತ್ತು. ಈಗ ಕಾನೂನು ದುರ್ಬಲಗೊಳಿಸುವ ಮೂಲಕ ವಾಹನ ಸಾಗಾಟಗಾರರಿಗೆ, ಗೋ ಹಂತಕರಿಗೆ “ನೀವು ಹೇಗೆ ಬೇಕಾದರೂ ಸಾಗಾಟ ಮಾಡಬಹುದು ನಾವು ನಿಮ್ಮ ಜೊತೆಗಿದ್ದೇವೆ”ಎಂದು ಕಾಂಗ್ರೆಸ್ ಸರಕಾರವು ಅವರಿಗೆ ನಿರ್ಭಯವನ್ನು ಕೊಟ್ಟಂತಾಗಿದೆ. ತನ್ಮೂಲಕ ಗೋವುಗಳಿಗೆ ಹಿಂಸೆ ಹಾಗೂ ಅವುಗಳ ಹತ್ಯೆ ಇನ್ನು ಮುಂದೆ ಹೆಚ್ಚಾಗಲಿದೆ . ಇದು ಹಿಂದುಗಳಿಗೆ ಪೂಜನೀಯವಾಗಿರತಕ್ಕಂತಹ ಗೋವುಗಳಿಗೆ ನೋವು,ಹಿಂಸೆ ಮಾಡಲು ಕಾಂಗ್ರೆಸ್ ಸರಕಾರ ಅನುಕೂಲ ಮಾಡಿಕೊಟ್ಟಂತಾಗಿದ್ದು ಇದರಿಂದಾಗಿ ಹಿಂದುಗಳ ಆಕ್ರೋಶ ಹೆಚ್ಚಾಗಿ ರಾಜ್ಯದಲ್ಲಿ ಅಶಾಂತಿ ಅರಾಜಕತೆಗೆ ಕಾರಣವಾಗ ಬಹುದು. ಗೋ ಕಳ್ಳಸಾಗಾಟಗಾರರಿಗೆ ಈ ತಿದ್ದುಪಡಿಯಿಂದ ನಿರ್ಭಯತ್ವ ಕೊಟ್ಟಂತಾಗಿರುವುದು ಸಂವಿಧಾನ ವಿರೋಧಿಯಾಗಿದೆ. ಸಂವಿಧಾನದ ಆರ್ಟಿಕಲ್ ೫೧ಎ ಇದರ ಪ್ರಕಾರ ಜೀವಿಗಳಿಗೆ ಕರುಣೆ ತೋರಿಸುವುದು ಪ್ರತಿಯೊಬ್ಬ ಭಾರತೀಯನ ಮೂಲಭೂತ ಕರ್ತವ್ಯವಾಗಿದೆ. ಇದು ಕರ್ನಾಟಕ ಸರಕಾರಕ್ಕೂ ಅನ್ವಯವಾಗುತ್ತದೆ. ಈ ತಿದ್ದುಪಡಿ ಸಂವಿಧಾನದ ಈ ಆಶಯಕ್ಕೆ ವಿರುದ್ಧವಾಗಿದೆ. ಇದು ಜೀವಿಗಳಿಗೆ ನಿಷ್ಕರುಣೆ ತೋರಿಸುವ ತಿದ್ದುಪಡಿಯಾಗಿದೆ. ಆದ್ದರಿಂದ ಸಂವಿಧಾನ ವಿರೋಧಿಯಾಗಿದೆ ಎಂದರು.
ಪ್ರಾಂತ ಪ್ರಮುಖ ಶ್ರೀಮಂತ ದುದ್ದಗಿ, ಜಿಲ್ಲಾ ಕಾರ್ಯದರ್ಶಿ ಸಿದ್ದು ಹೂಗಾರ ಮಾತನಾಡಿ, ಸಂವಿಧಾನದ ರಕ್ಷಣೆಗಾಗಿ ತಮ್ಮ ಘನ ಹುದ್ದೆಯನ್ನು ಯಥೋಚಿತವಾಗಿ ಬಳಸಿ ಈ ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಮಂಡಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಸಮಾಜದ ಪರವಾಗಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಾಂತ ಸಹ ಪ್ರಮುಖ ಶೇಖರ ಹರನಾಳ, ಶಿವಾನಂದ ಸುತ್ತಗೊಂಡಿ, ಸಿದ್ದು ಹೂಗಾರ, ಹನುಮಂತ ಪೂಜಾರಿ, ಪ್ರವೀಣ ಪೋಳ, ಡಾ. ಆನಂದ ಕುಲಕರ್ಣಿ, ಭೀಮಾಶಂಕರ ಹೊನ್ನುಟಗಿ, ಈರಣ್ಣ ಹಳ್ಳಿ, ಪ್ರಶಾಂತ ಪಟ್ಟಣಶೆಟ್ಟಿ, ವೀರೇಶ ಬಿರಾದಾರ, ವಿನಾಯಕ ಕುಂಬಾರ, ಪ್ರವೀಣ ಬಿರಾದಾರ, ಅಶ್ವಿನಕುಮಾರ ಪಟ್ಟಣಶೆಟ್ಟಿ, ಮಹೇಶ ಸಾಲೋಟಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share this