ಸಪ್ತ ಸಾಗರ ವಾರ್ತೆ, ವಿಜಯಪುರ,ಡಿ.8: ಸಂಸ್ಕೃತ ಭಾಷೆ ಭಾರತೀಯ ಸಂಸ್ಕೃತಿಯ ಮೂಲಾಧಾರವಾಗಿದ್ದು, ದೇಶದ ಘನತೆ ಸಂಸ್ಕೃತ ಮತ್ತು ಸಂಸ್ಕೃತಿ ಎಂಬ ಎರಡು ಅಸ್ತಿವಾರಗಳಲ್ಲಿ ನಿಂತಿದೆ ಎಂದು ವಿಶ್ರಾಂತ ಉಪನ್ಯಾಸಕಿ ಡಾ. ಬನುದೇವಿ ಸಂಕಣ್ಣವರ ಹೇಳಿದರು.
ನಗರದ ಪಿಡಿಜೆ ಹೈಸ್ಕೂಲಿನಲ್ಲಿ ಬೆಂಗಳೂರಿನ ಅಗರಖೇಡ ಪ್ರತಿಷ್ಠಾನ ಮತ್ತು ಇಲ್ಲಿಯ ವಿಜಯಪುರ ಸಂಸ್ಕೃತ ಬಳಗದ ಸಂಯುಕ್ತ ಆಶ್ರಯದಲ್ಲಿ ‘ಸಂಸ್ಕೃತ ಸುಭಾಷಿತ ಸ್ಪರ್ಧೆ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಸ್ಕೃತವು ಅತ್ಯಂತ ವೈಜ್ಞಾನಿಕ ಭಾಷೆಯಾಗಿದ್ದು, ನಾಸಾ ಸಂಶೋಧನೆಗಳಲ್ಲಿ ಸಂಸ್ಕೃತದ ಉಪಯೋಗದ ಸಾಧ್ಯತೆಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಅನೇಕ ವಿದೇಶಗಳಲ್ಲಿಯೂ ಸಂಸ್ಕೃತ ಅಧ್ಯಯನ ಮುಂದುವರಿದು ಬಂದಿದೆ ಎಂದು ಅವರು ಹೇಳಿದರು.
ವೇದ, ಉಪನಿಷತ್ತು, ಮಹಾಭಾರತ, ರಾಮಾಯಣ ಶಾಶ್ವತ ಸಾಹಿತ್ಯಗಳನ್ನು ಅರಿಯಲು ಸಂಸ್ಕೃತವೇ ದಾರಿ ಎಂದು ವಿವರಿಸಿದ ಅವರು, ಸುಭಾಷಿತಗಳು ಜೀವನದ ಮಾರ್ಗದರ್ಶಕ ಮುತ್ತಿನ ಸರಿಗಳಂತೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಅವು ಅನುಪಮ ಎಂದು ಬಣ್ಣಿಸಿದರು.
ವಿದ್ಯಾರ್ಥಿಗಳಲ್ಲಿ ಸಂಸ್ಕೃತ ಭಾಷೆಯ ಮೇಲಿನ ಆಸಕ್ತಿಯನ್ನು ವೃದ್ಧಿಪಡಿಸುವುದು ಹಾಗೂ ಸುಭಾಷಿತಗಳಲ್ಲಿ ಅಡಕವಾಗಿರುವ ನೈತಿಕ ಮೌಲ್ಯಗಳನ್ನು ಪರಿಚಯಿಸುವುದು ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಉಷಾ ಅಗರಖೇಡ ತಿಳಿಸಿದರು.
ಕಾರ್ಯಕ್ರಮಕ್ಕೆ ಗೌರವದ ಅತಿಥಿಗಳಾಗಿ ಹಿರಿಯ ಪತ್ರಕರ್ತ ಸುಶೀಲೇಂದ್ರ ನಾಯಕ, ಸಂಸ್ಕçತ ಭಾಷಾ ಬೋಧಕ ರಾಮ್ ಸಿಂಗ್, ಸಂಸ್ಕತ ಭಾರತಿ ಪ್ರಾಂತ ಸಂಪರ್ಕ ಪ್ರಮುಖ ಡಾ. ಬಸವರಾಜ ದೇವನಾಯಕ ಉಪಸ್ಥಿತರಿದ್ದರು.
ಸ್ಪರ್ಧೆಯ ನಿರ್ಣಾಯಕರಾಗಿ ಖ್ಯಾತ ವೈದ್ಯೆ ಆಧ್ಯಾತ್ಮ ಚಿಂತಕಿ ಡಾ. ವನಜಾ ನರಸಾಪೂರ ಪಾಲ್ಗೋಂಡಿದ್ದರು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಪ್ರತಿನಿಧಿಗಳಾಗಿ ಡಾ. ಉಷಾ ಅಗರಖೇಡ, ದೀಪಕ್ ಅಗರಖೇಡ ಹಾಗೂ ಭಾಗ್ಯಶ್ರೀ ಅಗರಖೇಡ,ವಿಜಯಪುರ ಸಂಸ್ಕೃತ ಬಳಗದ ಪರವಾಗಿ ಡಾ. ಜಿ.ಆರ್. ಅಂಬಲಿ ಬಾಗವಹಿಸಿದ್ದರು. ಕಾರ್ಯಕ್ರಮವನ್ನು ಬಿಎಲ್‌ಡಿಇಎ ಇಂಜಿನಿಯರಿAಗ್ ಕಾಲೇಜಿನ ಡಾ. ಗೋನಾಳ ನಿರೂಪಿಸಿದ್ದರು.
ಪಂಡಿತ ಪ್ರದ್ಯುಮ್ನಾಚಾರ್ಯ ಪೂಜಾರ ಮಾರ್ಗದರ್ಶನ ನೀಡಿದ್ದರು. ಸಂತ ಜೋಸೆಫ್ ಮಾಧ್ಯಮಿಕ ಶಾಲೆ ಶಿಕ್ಷಕ ಅಕ್ಷಯ್ ಆನಂದ ಗಾಯಿ ಅವರು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನು ಅತ್ಯಂತ ಉತ್ತಮ ರೀತಿಯಲ್ಲಿ ನಡೆಸಿಕೊಟ್ಟರು.
ಸ್ಪರ್ಧೆಯ ರೂಪರೇಷೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶ್ಲೋಕಗಳನ್ನು ಪಠಿಸಲು, ಉಳಿದ ಸಾಲುಗಳನ್ನು ಪೂರೈಸಲು ಅಥವಾ ಅದರ ಅರ್ಥವನ್ನು ವಿವರಿಸಲು ಪ್ರಶ್ನೆಗಳು ನೀಡಲಾಯಿತು.
ಸ್ಪರ್ಧೆಯಲ್ಲಿ ಕೇಳಲಾದ ಮುಖ್ಯ ಸುಭಾಷಿತಗಳಲ್ಲಿ “ವಸುದೈವ ಕುಟುಂಬಕಮ್” ಹಾಗೂ “ಸತ್ಪುರುಷರು ಮರಗಳಂತೆ” ಎನ್ನುವ ಸುಭಾಷಿತಗಳು ವಿಶೇಷವಾಗಿದ್ದವು.
ಒಟ್ಟು ಆರು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅದರಲ್ಲಿ– ಪಿಡಿಜೆ ಹೈಸ್ಕೂಲಿನ ತಂಡ ಪ್ರಥಮ ಬಹುಮಾನ ಪಡೆದವು. ದ್ವಿತೀಯ ಮತ್ತು ತೃತೀಯ ಬಹುಮಾನ ಸಂತ ಜೋಸೆಫ್ ಹೈಸ್ಕೂಲಿನ ತಂಡಗಳು ಗಳಿಸಿದರು. ಕಾರ್ಯಕ್ರಮವನ್ನು ಅಗರಖೇಡ ಪ್ರತಿಷ್ಠಾನ ಎರಡನೇ ಬಾರಿಗೆ ಆಯೋಜಿಸಿದ್ದು, ಮುಂದಿನ ದಿನಗಳಲ್ಲಿ ಪ್ರತಿ ವರ್ಷವೂ ಇದೇ ರೀತಿಯ ಸ್ಪರ್ಧೆಯನ್ನು ನಡೆಸುವ ಬದ್ಧತೆಯನ್ನು ವ್ಯಕ್ತಪಡಿಸುತ್ತದೆ ಎಂದು ಸಂಚಾಲಕ ದೀಪಕ್ ಅಗರಖೇಡ ತಿಳಿಸಿದಲ್ಲದೇ, ಸಂಸ್ಕೃತ ಭಾಷೆಯ ಅರಿವು, ಭಾರತೀಯ ಮೌಲ್ಯಗಳ ಪ್ರಸಾರ ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಇದು ಮಹತ್ವದ ವೇದಿಕೆ ರೂಪಿಸಲಾಗಿದೆ ಎಂದರು.
ಸಂಸ್ಕೃತ ಭಾಷೆ ಭಾರತೀಯ ಸಂಸ್ಕೃತಿಯ ಮೂಲಾಧಾರ- ಡಾ. ಬನುದೇವಿ ಸಂಕಣ್ಣವರ


