ಸಪ್ತಸಾಗರ ವಾರ್ತೆ ವಿಜಯಪುರ, ಡಿ. 10:
ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ಇರುವ ತಾರತಮ್ಯವನ್ನು ಕಡಿಮೆ ಮಾಡುವುದಲ್ಲದೆ ಇದನ್ನು ಸಮಾಜದಿಂದ ಬೇರು ಸಮೇತ ಕಿತ್ತೊಗೆಯುವ ಕಾರ್ಯವನ್ನು ಮಾಡಬೇಕು ಎಂದು ವಿಜಯಪುರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ಅರವಿಂದ ಎಸ್ ಹಾಗರಗಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ರುಡ್ ಸೆಟ್ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಃಡಿದ್ದ “ಮಗಳನ್ನು ರಕ್ಷಿಸಿ ಮಗಳನ್ನು ಓದಿಸಿ” ಯೋಜನೆಯಡಿ “ಒಂದು ದಿನದ ಸಾಮರ್ಥ್ಯ ಬಲವರ್ಧನೆ” ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಮಗುವಿನ ಜನನದ ಮೊದಲು ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆಯನ್ನು ತೆಡೆಗಟ್ಟಬೇಕು ಹಾಗೂ ಸಮಾಜಕ್ಕೆ ಅತಿ ದೊಡ್ಡ ಪಿಡುಗಾದ ಬಾಲ್ಯ ವಿವಾಹ ಪದ್ದತಿಯನ್ನು ತಡೆದು ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡುವಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಹೆಣ್ಣು ಮಕ್ಕಳು ಯಾವುದರಲ್ಲಿಯೂ ಕಡಿಮೆ ಇಲ್ಲ. ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ. ಕೇವಲ ಪುರುಷರಿಗೆ ಸೀಮಿತವಾದ ಕ್ರಿಕೆಟ್ ಇಂದು ನಮ್ಮ ಭಾರತದ ವನಿತೆಯರು ವಿಶ್ವ ಕಪ್ ಗೆಲ್ಲುವ ಮೂಲಕ ನಮ್ಮ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಯಾವುದೇ ರೀತಿಯ ಕೀಳರಿಮೆ ಬೆಳೆಸಿಕೊಳ್ಳದೇ ಈ ದಿನದ ಕಾರ್ಯಕ್ರಮಕ್ಕೆ ನಿಜವಾದ ಅರ್ಥ ಬರಬೇಕಾದರೆ ಎಲ್ಲರೂ ಶಿಕ್ಷಣವನ್ನು ಹೊಂದಬೇಕು. ಸ್ವಾವಲಂಬನೆ ಹೊಂದಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿ, ತಾಯಂದಿರು ಲಿಂಗ ತಾರತಮ್ಯ ಮಾಡದೇ, ಶಿಕ್ಷಣ ಮತ್ತು ಸಾಮಾಜಿಕ ಜೀವನದಲ್ಲಿ ಗಂಡು ಮಗುವಿಗೆ ನೀಡುವ ಪ್ರಾಮುಖ್ಯತೆಯನ್ನು ಹೆಣ್ಣಿಗೂ ನೀಡಿದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು. ತಮ್ಮ ವೃತ್ತಿ ಜೀವನದ ಅನುಭವವನ್ನು ಹಂಚಿಕೊಂಡ ಅವರು ಹೆಣ್ಣಿನ ಮೇಲಾಗುವ ದೌರ್ಜನ್ಯಕ್ಕೆ ಹೆದರಿ ಅನೇಕ ಪೋಷಕರು ಹೆಣ್ಣು ಮಕ್ಕಳನ್ನು ವಿವಾಹ ಬಂಧನಕ್ಕೆ ಅಣಿಗೊಳಿಸುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು. ಕೂಡಲೇ ಈ ಪ್ರವೃತ್ತಿ ನಿಲ್ಲಬೇಕು. ಶಾಲಾ_ ಕಾಲೇಜಿಗೆ ಹೋಗುವ ಹೆಣ್ಣು ಮಗುವಿನ ಮೇಲೆ ನಿಗಾ ಇಟ್ಟರೇ ಈ ದುರಂತಗಳಿಂದ ಅವಳನ್ನು ರಕ್ಷಿಸಬಹುದು. ಈ ಮೂಲಕ ಬಾಲ್ಯ ವಿವಾಹದಂತ ಪಿಡುಗಿಗೆ ಲಗಾಮ ಹಾಕಬಹುದು ಎಂದು ತಿಳಿಸಿದರು.
ಹೆಣ್ಣಿನ ಜನ್ಮ ನಕ್ಷತ್ರ, ಜಾತಕ, ಕಾಲ್ಗುಣ ಎಂಬಿತ್ಯಾದಿ ಮೂಢನಂಬಿಕೆಗಳಿಗೆ ದಾಸರಾಗದೇ, ವಾಸ್ತವ ನೆಲೆಗಟ್ಟಿನಲ್ಲಿ ಯೋಚನೆ ಮಾಡಿದಾಗ ಮಾತ್ರ ಹೆಣ್ಣು ಸಮಾಜದ ಮುಖ್ಯವಾಹಿನಿಯಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ನಂತರ ಕುಮಾರಿ ಶಿಲ್ಪಾ ನಾಯಿಕ ಮೇಲ್ವಿಚಾರಕಿ, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಪ್ರತಿಜ್ಞಾ ವಿಧಿ ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ ಮಾತನಾಡಿ, ಸಮಾಜದಲ್ಲಿ ಇರುವ ಅನಿಷ್ಟ ಪದ್ದತಿಗಳನ್ನು ತೊಡೆದು ಹಾಕುವಂತೆ ಗ್ರಾಮ ಮಟ್ಟದಿಂದಲೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದು. ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣದ ವ್ಯಾಮೋಹಕ್ಕೆ ಒಳಗಾಗಿ ತಮ್ಮ ವಿದ್ಯಾರ್ಥಿ ಜೀವನ ವ್ಯರ್ಥ ಮಾಡಕೊಳ್ಳದೆ ಇರುವಂತೆ ನೋಡಿಕೊಳ್ಳುವುದು ನಮ್ಮೆಲರ ಹೊಣೆಯಾಗಿದೆ ಎಂದು ತಿಳಿಸಿದರು.
ಇನ್ನೊರ್ವ ಮುಖ್ಯಅತಿಥಿಗಳಾಗಿ ಆಗಮಿಸಿದ ಯುವ ಜನ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ರಾಜಶೇಖರ ದೈವಾಡಿ ಮಾತನಾಡಿ, ಹೆಣ್ಣು ಇಲ್ಲದೇ ಸಮಾಜವಿಲ್ಲ. ಹೆಣ್ಣು ಮಕ್ಕಳ ಮಹತ್ವ ಕುರಿತು ಮಾತನಾಡಿದರು.
ಮಹಿಳಾ ಪೊಲೀಸ್ ಠಾಣೆ ಪಿಎಸ್ಐ ಆರ್.ಎ. ದಿನ್ನಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳು ಒಡ್ಡುವ ಆಸೆ ಅಮಿಷೆಗಳಿಗೆ ಒಳಗಾಗಿ ತಮ್ಮ ಭವಿಷ್ಯವನ್ನು ಮಕ್ಕಳು ಹಾನಿಮಾಡಿಕೊಳ್ಳದಂತೆ ನೋಡಿಕೊಳ್ಳುವುದು ಪಾಲಕರ ಜವಾಬ್ದಾರಿಯಾಗಿದೆ. ಯಾವುದೇ ರೀತಿಯ ಸಂಕಷ್ಟಕ್ಕೆ ಮಹಿಳೆಯರು ಓಳಗಾದಾಗ ಮುಜುಗರ ಹಾಗೂ ಸಂಕೋಚ ಪಡದೇ ನೇರವಾಗಿ ಮಹಿಳಾ ಪೋಲಿಸ್ ಠಾಣೆಗೆ ಭೇಟಿ ಅಥವಾ ಕರೆ ಮಾಡಬಹುದು ಎಂದು ಹೇಳಿದರು.
ಇನ್ನೋರ್ವ ಮುಖ್ಯಅತಿಥಿ ಕೇಂದ್ರ ಸಂವಹನ ಇಲಾಖೆಯ ಕಾರ್ಯಕ್ರಮ ಸಂಯೋಜಕ ಸಿ.ಕೆ ಸುರೇಶ, ಕೇಂದ್ರ ಸರ್ಕಾರದಿಂದ ಇರುವ ಯೋಜನೆಗಳ ಕುರಿತು ಮಾಹಿತಿಯನ್ನು ನೀಡಿದರು.
ಈ ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಿ.ಎಲ್.ಡಿ.ಇ (DU) ಎಂ.ಬಿ ಪಾಟೀಲ ಮೆಡಿಕಲ್ ಕಾಲೇಜು ಹಾಗೂ ಸಂಶೋದನಾ ಕೇಂದ್ರದ ಡಿ.ಜಿ.ಓ ಪ್ರೊ. ಹಾಗೂ ಮುಖ್ಯಸ್ಥರು ಡಾ: ಶೋಭಾ ಗುಡದಿನ್ನಿ (ಶಿರಗೂರ) ಅವರು ಪಿ.ಸಿ. ಮತ್ತು ಪಿಎನ್.ಡಿ.ಟಿ ಮತ್ತು ಎಂ.ಟಿ.ಪಿ ಕಾಯ್ದೆಗಳ ಕುರಿತು ಉಪನ್ಯಾಸ ನೀಡಿದರು.
ಇನ್ನೊರ್ವ ಸಂಪನ್ಮೂಲ ವ್ಯಕ್ತಿ ಆರ್‌ಸಿಎಚ್ ಅಧಿಕಾರಿ ಡಾ. ಪರಶುರಾಮ ಹಿಟ್ನಳ್ಳಿ ಮಾತನಾಡಿ, Teenage Pregnency ಬಗ್ಗೆ ಉಪನ್ಯಾಸ ನೀಡಿದರು.
ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಸಮನ್ವಯ ಅಧಿಕಾರಿ ಟಿ.ಎಸ್.ಕೊಲ್ಹಾರ ಮಾತನಾಡಿ, ಶಿಕ್ಷಣ ಇಲಾಖೆಯಿಂದ ಹೆಣ್ಣು ಮಕ್ಕಳಿಗಾಗಿ ಇರುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಿಷನ್ ಶಕ್ತಿ ಸಂಯೋಜಕಿ ಭಾರತಿ ಪಾಟೀಲ ಮಾತನಾಡಿ, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಅನುಷ್ಠಾನ, ಗುರಿ, ಉದ್ದೇಶ, ಸಮನ್ವಯ ಇಲಾಖೆಗಳ ಕುರಿತು ಮತ್ತು ಮಿಷನ್ ಶಕ್ತಿ ಯೋಜನೆಯ ಕುರಿತು ಮಾಹಿತಿ ನೀಡಿದರು. ಮಕ್ಕಳ ಸಹಾಯವಾಣಿ ಆಪ್ತ ಸಮಾಲೋಚಕಿ ನೀಲಮ್ಮ ಅರಳಗುಂಡಗಿ, ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಸಹಾಯವಾಣಿ ಕುರಿತು ಮಾಹಿತಿಯನ್ನು ನೀಡಿದರು.
ಈ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಆಶಾ ಆನಂದ ಕೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ದೀಪಾ ಕಾಳೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ಮಹಿಳಾ ಪೊಲೀಸ್ ಠಾಣೆ ಸಿಪಿಐ ಜಯವಂತ ದುಲಾಡಿ, ಮಹೇಶ ಮಾಳವಾಡೆಕರ, ವಿಜಯಲಕ್ಷ್ಮೀ ಬಾಳಿ, ಮುಕುಂದ ಝಳಕಿ, ಎಸ್.ಸಿ ಮ್ಯಾಗೇರಿ, ಬಸವರಾಜ ಜಿಗಳೂರು, ಗೀತಾ ಗುತ್ತರಗಿಮಠ ಮತ್ತಿತರರು ಭಾಗವಹಿಸಿದ್ದರು.


