ಶಾಲಾ ದಶಮಾನೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಶ್ರೀಗಳು

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 19: ಯಶಸ್ವಿ ಹತ್ತು ವರ್ಷಗಳನ್ನು ಪೂರೈಸಿರುವ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ದಶಮಾನೋತ್ಸವ ಸಮಾರಂಭ ಡಿ.26 ಮತ್ತು ಡಿ.27 ರಂದು ನಡೆಯಲಿದ್ದು,
ಗುರುವಾರ ಸಂಜೆ ಗ್ರಾಮದ ಶ್ರೀ ಉದಯಲಿಂಗೇಶ್ವರ ಹಿರೇಮಠದಲ್ಲಿ ನಡೆದ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಮ ಘ ಚ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಶ್ರೀಗಳು ಮಾತನಾಡಿ, ಶಾಲೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡುವ ಜತೆಗೆ ಸಂಸ್ಕಾರ ಕಲಿಸಿ ಕೊಡುತ್ತಿರುವದು ಹೆಮ್ಮೆಯ ವಿಷಯವಾಗಿದೆ. ಮಕ್ಕಳ ಭವಿಷ್ಯಕ್ಕೆ ಶಿಕ್ಷಣ-ಸಂಸ್ಕಾರ ಅತೀ ಮುಖ್ಯವಾಗಿವೆ ಎಂದರಿತ ಈ ಶಾಲೆಯು ಯಶಸ್ವಿಯತ್ತ ಸಾಗಲಿ ಎಂದು ಶುಭ ಹಾರೈಸಿದರು.
ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ವಿಶೇಷ ಅವಕಾಶಗಳನ್ನು ಕಲ್ಪಿಸಿ, ಅವರನ್ನು ಪ್ರತಿಭಾವಂತರನ್ನಾಗಿ ಬೆಳೆಸಿ, ಮಕ್ಕಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಈ ಶಾಲೆಯ ಆಶೋತ್ತರಗಳು ಈಡೇರಿ, ಮಕ್ಕಳ ಬಾಳು ಬಂಗಾರವಾಗಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಎರಡು ದಿನದ ಈ ದಶಮಾನೋತ್ಸವ ಸಮಾರಂಭದ ಆಚರಣೆಗಾಗಿ ವಿವಿಧ ಸಮಿತಿಗಳನ್ನು ರಚಿಸಿಕೊಂಡು ಈಗಾಗಲೇ ಸಿದ್ಧತಾ ಕಾರ್ಯ ಆರಂಭ ಮಾಡಲಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಸುರೇಖಾ ಬಂಡೆ,ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ರಾಘು ಮೊಗಳ, ಸಿದ್ದು ರತ್ನಾಕರ, ರಾಜಶೇಖರ ಶಿರಶ್ಯಾಡ, ಸಿದ್ದು ಅರಕೇರಿ,ಭುವನೇಶ್ವರಿ ಬಂಡೆ ಸೇರಿದಂತೆ ಶಾಲಾ ಮಕ್ಕಳು, ಗ್ರಾಮಸ್ಥರು ಭಾಗವಹಿಸಿದ್ದರು.

Share this