ದ್ವೇಷ ಭಾಷಣ ಮಸೂದೆಗೆ ಅಂಕಿತ ಬೇಡ: ಈಶ್ವರಪ್ಪ ರಾಜ್ಯಪಾಲರಿಗೆ ಮನವಿ

ಸಪ್ತಸಾಗರ ವಾರ್ತೆ ವಿಜಯಪುರ, ಡಿ. 23: ದ್ವೇಷ ಭಾಷಣ ವಿರೋಧಿ ವಿಧೇಯಕಕ್ಕೆ ಯಾವುದೇ ಕಾರಣಕ್ಕೂ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮನವಿ ಮಾಡಿಕೊಂಡಿದ್ದಾರೆ.
ಸೋಮವಾರ ಮಧ್ಯಾಹ್ನ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಮತ್ತೆ ಅಘೋಷಿತ ತುರ್ತು ಪರಿಸ್ಥಿತಿ ಹೇರಲು ಹುನ್ನಾರ ನಡೆಸಿದೆ. ಹೀಗಾಗಿ ಈ ವಿಧೇಯಕವನ್ನು ರಾಜ್ಯಪಾಲರು ಒಪ್ಪಲೇಬಾರದು ಎಂದು ಒತ್ತಾಯಿಸಿದರು.
ಅಂದು ಸರ್ವಾಧಿಕಾರ ವರ್ತನೆ ತೋರಿದ ದಿ.ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ ಪರಿಣಾಮ ಕಾಂಗ್ರೆಸ್ ಪಕ್ಷ ನೆಲಕಚ್ಚಿತು. ಈಗ ದ್ವೇಷ ಭಾಷಣ ವಿರೋಧಿ ಮಸೂದೆ ಹಿಂದೂ ನಾಯಕರನ್ನು ಹತ್ತಿಕ್ಕಲು ತಂದಿರುವ ಕರಾಳ ಶಾಸನ. ಪಾಕಿಸ್ತಾನ್ ಜಿಂದಾಬಾದ್ ಎನ್ನುವ ದುಷ್ಟರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅರೆಸ್ಟ್ ಮಾಡಿಲ್ಲ. ತಮಗೆ ಸರಿ ಕಾಣದವರನ್ನು ಅರೆಸ್ಟ್ ಮಾಡುವ ವ್ಯವಸ್ಥಿತ ಷಡ್ಯಂತ್ರಕ್ಕಾಗಿ ಕಾಂಗ್ರೆಸ್ ಈ ಕಾಯ್ದೆ ಜಾರಿಗೆ ತಂದಿದೆ ಎಂದು ದೂರಿದರು.
ಹಿಂದೂ ನಾಯಕರನ್ನು, ಹಿಂದೂ ಸಂಘಟನೆಗಳನ್ನು ಜೈಲಿಗೆ ಕಳಿಸುವ ವ್ಯವಸ್ಥಿತ ಕಾರಣಕ್ಕಾಗಿ ಈ ಮಸೂದೆ ರೂಪಿಸಿದೆ. ಹಿಂದೂತ್ವದ ಪರವಾಗಿರುವ ಸರ್ಕಾರ ಖಂಡಿತವಾಗಿಯೂ ಮುಂದೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದರು.
ಶಿವಸೇನೆ, ಬಿಜೆಪಿ ಎಂದು ನಾನು ಹೇಳುವುದಿಲ್ಲ. ಹಿಂದೂತ್ವವವನ್ನು ಒಪ್ಪುವ ನೈಜತೆಯ ಆಧಾರದ ಮೇಲೆ ಒಪ್ಪುವ ಸರ್ಕಾರ ಬಂದೇ ಬರುತ್ತದೆ. ಹಿಂದೂ ವಿರೋಧಿ ಸ್ವಭಾವ ನೆಲಕಚ್ಚುತ್ತದೆ. ಹಿಂದೂತ್ವವನ್ನು ದಮನ ಮಾಡುವ ಪ್ರಯತ್ನ ಮಾಡುವ ಕಾಂಗ್ರೆಸ್ ನಿರ್ನಾಮವಾಗುತ್ತದೆ. ಆದರೆ ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಹಿಂದೂತ್ವದ ಆಧಾರದ ಸರ್ಕಾರ ಬಂದೇ ಬರುತ್ತದೆ ಎಂದು ಭವಿಷ್ಯ ನುಡಿದರು.
ಒಕ್ಕಲಿಗ ಸಮಾಜದ ಶ್ರೀಗಳು ಡಿ.ಕೆ. ಶಿವಕುಮಾರ ಪರವಾಗಿ, ಹಾಲುಮತ ಸ್ವಾಮೀಜಿಗಳು ಸಿ.ಎಂ. ಸಿದ್ಧರಾಮಯ್ಯ ಅವರ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಅತ್ತ ಶಾಸಕರ ಗುಂಪುಗಾರಿಕೆ ಸಹ ವ್ಯಾಪಕವಾಗಿದೆ. ಇದರಿಂದ ಕಾರ್ಯಕರ್ತರಿಗೆ ಅನುಮಾನ ಇದ್ದರೆ, ಅಧಿಕಾರಿಗಳು ಮಾತ್ರ ಆರಾಮವಾಗಿದ್ದಾರೆ ಎಂದರು.
ಸಿ.ಎಂ. ಸ್ಥಾನ ಬದಲಾವಣೆ ವಿಷಯವಾಗಿ ಹೈಕಮಾಂಡ್ ತೀರ್ಮಾನ ಅಂತಿಮ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಹಾಗಾದರೆ ಎಐಸಿಸಿ ಅಧ್ಯಕ್ಷರು ಹೈಕಮಾಂಡ್ ಅಲ್ಲವೇ? ಕೇವಲ ಗಾಂಧಿ ಕುಟುಂಬಕ್ಕೆ ಇಡೀ ಕಾಂಗ್ರೆಸ್ ಪಕ್ಷವನ್ನು ಒತ್ತೆ ಇಡಲಾಗಿದೆಯೇ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕತ್ವ ದುರ್ಬಲಗೊಂಡು ದುಸ್ಥಿತಿಗೆ ತಲುಪಿದೆ. ಬಿಹಾರ ಮೊದಲಾದ ಚುನಾವಣೆಗಳಲ್ಲಿ ಕಾಂಗ್ರೆಸ್ ಧೂಳಿಪಟ ಮಾಡಿದಂತೆ ಕರ್ನಾಟಕದಲ್ಲಿಯೂ ಜನತೆ ಯಾವ ಸಂದರ್ಭದಲ್ಲೂ ಚುನಾವಣೆ ನಡೆದರೂ ಕಾಂಗ್ರೆಸ್ ಸೋಲಿಸುವುದು ಖಚಿತ ಎಂದರು.

Share this