ಸಪ್ತಸಾಗರ ವಾರ್ತೆ ವಿಜಯಪುರ, ಡಿ. 23:
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ದೂರಿನ ಹಿನ್ನೆಲೆಯಲ್ಲಿ ಬಸವನಬಾಗೇವಾಡಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ತಪಾಸಣೆ ಕೈಗೊಂಡು ಆದಾಯ ಮೀರಿ 2.50 ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವುದನ್ನು ಪತ್ತೆ ಹಚ್ಚಿದ್ದಾರೆ.
ಬಸವನ ಬಾಗೇವಾಡಿ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಪ್ಪ ಹನಮಂತಪ್ಪ ಯರಝರಿ ಎಂಬುವರ ವಿಜಯಪುರದ ನವರಸಪುರ ಬಡಾವಣೆಯಲ್ಲಿನ ಮನೆ, ಕಣಕಾಲ ಗ್ರಾಮದ ಫಾರ್ಮ್ ಹೌಸ್ ಹಾಗೂ ಮುದ್ದೇಬಿಹಾಳದಲ್ಲಿನ ಅವರ ಮಾವನ ಮನೆ ಮೇಲೆ ಮತ್ತು ಅಧಿಕಾರಿಯ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಇಡೀ ದಿನ ತಪಾಸಣೆಗೆ ಒಳಪಡಿಸಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವುದನ್ನು ಪತ್ತೆ ಮಾಡಿದ್ದಾರೆ.
ಮನೆ ಶೋಧ ಮಾಡಲು ನ್ಯಾಯಾಲಯದಿಂದ ವಾರೆಂಟ್ ಪಡೆಯಲಾಗಿತ್ತು. ಶೋಧನೆ ವೇಳೆ ಆಪಾದಿತರ ಅಧಿಕಾರಿಯ ವಿಜಯಪುರದ ನವರಸಪುರ ಮನೆ, ಲಾಕರ್ ಮತ್ತು ಮಾವನ ಮನೆ ಸೇರಿ ಸುಮಾರು ರೂ.29,42,000 ನಗದು, ಹಣ, ಬೆಳ್ಳಿ ಬಂಗಾರದ ಆಭರಣಗಳು, ವಾಹನಗಳು ಮತ್ತು ಇತರೆ ಆಸ್ತಿಗಳಿಗೆ ಸಂಬಂಧಿಸಿದ ದಾಖಲಾತಿಗಳು ದೊರೆತಿದ್ದು, ಅಂದಾಜು 2.50 ಕೋಟಿಗೂ ಹೆಚ್ಚಿನ ಅಕ್ರಮ ಆಸ್ತಿ ಗಳಿಸಿರುವದು ಪತ್ತೆಯಾಗಿದೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ. ಮಲ್ಲೇಶ್ ಅವರ ಮಾರ್ಗದರ್ಶನದಲ್ಲಿ ಡಿಎಸ್ಪಿಗಳಾದ ಮಲ್ಲಿಕಾರ್ಜುನ ತುಳಸಿಗೇರಿ, ಬಿ.ಎಸ್.ಪಾಟೀಲ್, ಪೊಲೀಸ್ ಇನ್ಸಪೆಕ್ಟರ್ ಗಳಾದ ಆನಂದ ವಿ. ಟಕ್ಕನ್ನವರ್, ಆನಂದ ಡೋಣಿ, ನಿಂಗಪ್ಪ ಪೂಜೇರಿ, ಸಂಗಮನಾಥ ಹೊಸಮನಿ ಹಾಗೂ ವಿಜಯಪುರ ಮತ್ತು ಬೆಳಗಾವಿ ಪೊಲೀಸ್ ಸಿಬ್ಬಂದಿಗಳು ಶೋಧನಾ ಕಾರ್ಯಾಚರಣೆ ಕೈಗೊಂಡು ಯಶಸ್ವಿಗೊಳಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬಸವನಬಾಗೇವಾಡಿ ಸಹಾಯಕ ಕೃಷಿ ನಿರ್ದೇಶಕರ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ


