ವಿಪತ್ತು ಬಂದಾಗ ಗಾಬರಿಯಾಗಬೇಡಿ, ಸಿದ್ದತೆಯೇ ನಮ್ಮ ರಕ್ಷಣೆ: ಮೋಹಮದ್ ಅಜ್ಮಲ್ ಶಕೀಬ್

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 26:
ವಿಪತ್ತು ಪ್ರಕೃತಿ ಅಥವಾ ಮಾನವ ಸೃಷ್ಟಿಯಾದ ಅನಾಹುತಗಳಿಂದ ಉಂಟಾಗುವ ಗಂಭೀರ ಸಮಸ್ಯೆಗಳಾಗಿದ್ದು, ಸರಿಯಾದ ಸಿದ್ಧತೆ ಮತ್ತು ಜಾಗೃತಿಯ ಮೂಲಕ ಅವುಗಳಿಂದಾಗುವ ಹಾನಿಯನ್ನು ಕಡಿಮೆ ಮಾಡಬಹುದು ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ಘಟಕದ ವಿಪತ್ತು ನಿರ್ವಹಣೆ ಉಪ ಸಮಿತಿಯ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ನಿರ್ದೇಶಕ ಮೊಹಮ್ಮದ್ ಅಜ್ಮಲ್ ಶಕೀಬ್ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಯುವ ರೆಡ್ ಕ್ರಾಸ್ ಘಟಕ ಹಾಗೂ ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಎ.ಎಸ್.ಪಾಟೀಲ ವಾಣಿಜ್ಯ ಕಾಲೇಜು ಇವರ ಸಹಯೋಗದಲ್ಲಿ, ಭಾರತ ಸರ್ಕಾರದ ಪ್ರಧಾನಮಂತ್ರಿ ರಾಷ್ಟೀಯ ಉಚ್ಚತರ ಶಿಕ್ಷಣ ಅಭಿಯಾನ ಪಿಎಮ್‌ಉಷಾ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಅನುದಾನದ ನೆರವಿನಿಂದ ಇತ್ತೀಚಿಗೆ ಹಮ್ಮಿಕೊಂಡಿದ್ದ “ಪದವಿ ವಿದ್ಯಾರ್ಥಿಗಳಲ್ಲಿ ವಿಪತ್ತು ಸಿದ್ದತೆ ಮತ್ತು ಜಾಗೃತಿ” ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಪತ್ತುಗಳು ಪ್ರಕೃತಿ ಅಥವಾ ಮಾನವ ಸೃಷ್ಟಿಯಾದ ಅನಾಹುತಗಳಿಂದ ಮಾನವ ಜೀವನ, ಆಸ್ತಿ ಹಾಗೂ ಪರಿಸರಕ್ಕೆ ಭಾರೀ ಹಾನಿ ಉಂಟುಮಾಡುತ್ತವೆ. ಇವುಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲವಾದರೂ, ಸರಿಯಾದ ಮುನ್ನೆಚ್ಚರಿಕೆ, ಜಾಗೃತಿ ಮತ್ತು ಸಿದ್ಧತೆಯ ಮೂಲಕ ಹಾನಿಯನ್ನು ಕಡಿಮೆ ಮಾಡಬಹುದು. ವಿಪತ್ತು ನಿರ್ವಹಣೆಯಲ್ಲಿ ತಡೆಗಟ್ಟುವಿಕೆ, ಸಿದ್ಧತೆ, ಪ್ರತಿಕ್ರಿಯೆ ಮತ್ತು ಪುನಶ್ಚೇತನ ಎಂಬ ನಾಲ್ಕು ಪ್ರಮುಖ ಹಂತಗಳಿದ್ದು, ತುರ್ತು ಪರಿಸ್ಥಿತಿಗಳಿಗೆ ಮುನ್ನ ಸಿದ್ಧರಾಗಿರುವುದು ಅತ್ಯಂತ ಅಗತ್ಯ. ವಿಪತ್ತು ನಿರ್ವಹಣೆಯಲ್ಲಿ ಸಮುದಾಯದ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು.
ವಿಜಯಪುರ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ರಾಕೇಶ ಜೈನಾಪುರ ಮಾತನಾಡಿ, ವಿಪತ್ತು ನಿರ್ವಹಣೆಯಲ್ಲಿ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು ಸರ್ಕಾರದ ಜೊತೆಗೆ ಪ್ರತಿಯೊಬ್ಬರೂ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಹಲವು ವ್ಯವಸ್ಥೆಗಳಿದ್ದರೂ ಜನರಲ್ಲಿ ಜಾಗೃತಿ ಇಲ್ಲದೆ ಅವು ಫಲಕಾರಿಯಾಗುವುದಿಲ್ಲ. ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಜಿಲ್ಲಾ ಪ್ರಾಧಿಕಾರವು ಅಗ್ನಿಶಾಮಕ ದಳ, ಪೊಲೀಸ್, ಆರೋಗ್ಯ ಇಲಾಖೆ ಮತ್ತು ಸ್ವಯಂಸೇವಕ ಸಂಘಟನೆಗಳೊAದಿಗೆ ಸಮನ್ವಯ ಸಾಧಿಸಿ ತಕ್ಷಣದ ನೆರವು ಒದಗಿಸುತ್ತದೆ. ವಿದ್ಯಾರ್ಥಿಗಳು, ಯುವಕರು ಹಾಗೂ ಸ್ವಯಂಸೇವಕರು ಪ್ರಥಮ ಚಿಕಿತ್ಸೆ ಮತ್ತು ರಕ್ಷಣಾ ಕ್ರಮಗಳ ಕುರಿತು ತರಬೇತಿ ಪಡೆದು ಸಮಾಜಕ್ಕೆ ಪರಿಣಾಮಕಾರಿಯಾಗಿ ನೆರವಾಗಬೇಕು ಎಂದು ಅವರು ಹೇಳಿದರು.
ಕಾರ್ಯಾಗಾರದ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಧಾರವಾಡ ಡಿಮ್ಹಾನ್ಸ್ ಸಂಸ್ಥೆಯ ಮನೋವೈದ್ಯಕೀಯ ಸಮಾಜಕಾರ್ಯಕರ್ತ ಅಶೋಕ ಕೋರಿ ಮಾತನಾಡಿ, ವಿಪತ್ತು ಎಂದರೆ ಕೇವಲ ಆಸ್ತಿ ಅಥವಾ ಮೂಲ ಸೌಕರ್ಯಗಳ ನಾಶವಲ್ಲ, ಅದು ವ್ಯಕ್ತಿಯನ್ನು ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಆಳವಾಗಿ ಕದಡುವ ಅನುಭವವಾಗಿದೆ. ವಿಪತ್ತಿನ ನಂತರ ಜನರಲ್ಲಿ ಭಯ, ಆತಂಕ, ದುಃಖ, ನಿದ್ರಾಹೀನತೆ ಸೇರಿದಂತೆ ಹಲವು ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಪೀಡಿತರ ಮಾತನ್ನು ಸಹಾನುಭೂತಿಯಿಂದ ಕೇಳುವುದು, ಅವರ ಭಾವನೆಗಳಿಗೆ ಗೌರವ ನೀಡುವುದು ಮತ್ತು ಸುರಕ್ಷಿತ ವಾತಾವರಣ ಒದಗಿಸುವುದು ಅತ್ಯಂತ ಅಗತ್ಯವಿದೆ. ಆಹಾರ ಮತ್ತು ಆಶ್ರಯದ ಜೊತೆಗೆ ಮಾನಸಿಕ ಆರೋಗ್ಯದ ಆರೈಕೆಯೂ ವಿಪತ್ತು ನಿರ್ವಹಣೆಯಲ್ಲಿ ಸಮಾನ ಮಹತ್ವ ಹೊಂದಿದ್ದು, ಸಾಂತ್ವನವೇ ಮೊದಲ ಚಿಕಿತ್ಸೆ ಎಂದು ಹೇಳಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಬಿಎಲ್‌ಡಿಇ ಸಂಸ್ಥೆಯ ಎ.ಎಸ್.ಪಿ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಬಿ. ಕಮತಿ ಮಾತನಾಡಿ, ವಿಪತ್ತುಗಳು ಯಾವುದೇ ಮುನ್ಸೂಚನೆ ನೀಡದೆ ನಮ್ಮ ಜೀವನದಲ್ಲಿ ಪ್ರವೇಶಿಸಬಹುದು. ಪ್ರವಾಹ, ಭೂಕಂಪ, ಚಂಡಮಾರುತ, ಅಗ್ನಿ ಅವಘಡ ಮತ್ತು ಆರೋಗ್ಯ ಸಂಬಂಧಿತ ತುರ್ತು ಪರಿಸ್ಥಿತಿಗಳು ನಮ್ಮ ಜೀವನ, ಆಸ್ತಿ ಹಾಗೂ ಮಾನಸಿಕ ನೆಮ್ಮದಿಯನ್ನು ಹದಗೆಡಿಸಬಹುದು. ಇಂತಹ ಸಂದರ್ಭಗಳಲ್ಲಿ ಸಿದ್ಧತೆ ಮತ್ತು ಜಾಗೃತಿಯೇ ನಮ್ಮ ಶಕ್ತಿಯಾಗಿದ್ದು, ಕಾರ್ಯಾಗಾರದ ಉದ್ದೇಶವು ಕೇವಲ ಮಾಹಿತಿಯನ್ನು ನೀಡುವುದಲ್ಲ, ವಿಪತ್ತು ಎದುರಿಸುವ ಸಾಮರ್ಥ್ಯವನ್ನು ಬೆಳೆಸುವುದಾಗಿದೆ. ವಿಪತ್ತು ಸಂಭವಿಸುವ ಮೊದಲು ಏನು ಮಾಡಬೇಕು, ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಮತ್ತು ನಂತರ ಪುನಶ್ಚೇತನಗೊಳ್ಳಬೇಕು ಎಂಬ ಸಮಗ್ರ ಅರಿವು ಇಂದು ಅತ್ಯವಶ್ಯಕವಾಗಿದೆ ಎಂದರು.
ಕಾರ್ಯಾಗಾರದಲ್ಲಿ ಯುವ ರೆಡ್ ಕ್ರಾಸ್ ಅಧಿಕಾರಿಗಳು, ಬೋಧಕ ಮತ್ತು ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತಿತರಿದ್ದರು.
ಡಾ. ಕಲಾತಿ ಎಚ್. ಕಾಂಬಳೆ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಮಹಿಳಾ ಸಬಲೀಕರಣ ಕೋಶದ ಅಧ್ಯಕ್ಷೆ ಡಾ. ಭಾರತಿ ಮಠ ವಂದಿಸಿದರು, ವಿಜಯಪುರದ ಕನ್ನಡ ವಿಭಾಗ ಬಿಎಲ್‌ಡಿಇ ಸಂಸ್ಥೆ ವಾಣಿಜ್ಯ ಕಾಲೇಜು, ಮತ್ತು ಬಿಎಲ್‌ಡಿಇ ಸಂಸ್ಥೆ ವಾಣಿಜ್ಯ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸ್ನೇಹಾ ಬೆನಕಟ್ಟಿ ನಿರೂಪಿಸಿದರು.

Share this