ಸಪ್ತಸಾಗರ ವಾರ್ತೆ, ವಿಜಯಪುರ, ಡಿ.30: ನಿರ್ಲಕ್ಷಿತಗೊಳಗಾದವರನ್ನು ಸುಶಿಕ್ಷಿತರನ್ನಾಗಿಸಿದ ಶ್ರೇಯಸ್ಸು ಕಾಕಾ ಕಾರಖಾನೀಸರಿಗೆ ಸಲ್ಲುತ್ತದೆ. ಎಂದು ಜಾತಿಭೇದ, ಲಿಂಗಭೇದ ಮತ್ತು ವರ್ಣಭೇದ ಹೋಗಲಾಡಿಸಲು ಅಹರ್ನಿಶಿ ದುಡಿದವರು. ಅವರು ಕೇವಲ ಸಹಾನುಭೂತಿ ತೋರದೇ, ಅವರಲ್ಲಿ ಒಂದಾಗಿ ಅನುಭೂತಿಯನ್ನು ತೋರಿದ ಮಹಾನ್ ಧೀಮಂತರು ಎಂದು ಬಣ್ಣಿಸಿದರು.
ಬ್ರಾಹ್ಮಣನಾಗಿದ್ದರೂ ನಾನು ಎಂದೆಂದೂ ಹರಿಜನನಾಗಿರುತ್ತೇನೆ ಎನ್ನುವ ಮೂಲಕ ಅದರಂತೆ ಬದುಕು ಸಾಗಿಸಿದವರು. ಸಮಾನತೆ ತರಲು ನಿರಂತರ ಹೋರಾಡಿದ ಹುಟ್ಟು ಸನ್ಯಾಸಿ, ದೇಶಪ್ರೇಮಿ, ಶತಾಯುಷಿ, ಸಾಬರಮತಿ ಆಶ್ರಮದಲ್ಲಿದ್ದು ಅಪ್ಪಟ ಗಾಂಧಿ ಅನುಯಾಯಿಯಾಗಿ ಪದ್ಮಶ್ರೀ ಕಾಕಾ ಕಾರಖಾನೀಸರು ಜನಾನುರಾಗಿಯಾಗಿದ್ದರು ಎಂದು ತಿಳಿಸಿದರು.
ನಗರದ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರ ಹಾಗೂ ಚಿಂತನ ಸಾಂಸ್ಕೃತಿಕ ಬಳಗ ಹಮ್ಮಿಕೊಂಡ ಅನುಭಾವಿಗಳು ಬದುಕು ವಿಷಯದ ಕುರಿತು ಉಪನ್ಯಾಸ ನೀಡುತ್ತ ಕಾಕಾ ಕಾರಖಾನೀಸರು ಮತ್ತು ಆರ್.ಡಿ.ರಾನಡೆಯವರ ಒಡನಾಟ ಹೊಂದಿದ್ದರು. ಹಿಂದುಳಿದ ಮಕ್ಕಳ ಸಲುವಾಗಿ ವಸತಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು. ದಲಿತ ಹೆಣ್ಣುಮಕ್ಕಳಿಗಾಗಿಯೇ ಕನ್ಯಾ ಶಾಲೆಯನ್ನು ಪ್ರಾರಂಭಿಸಿದರು. ಅವರ ಕುಂದುಕೊರತೆ ನೀಗಿಸಿ ಶಿಕ್ಷಣದ ಅವಶ್ಯಕತೆ ಕುರಿತು ಅರಿವು ಮೂಡಿಸಿದರು. ಕಾಕಾ ಅವರನ್ನು ಮೇಲ್ಜಾತಿಯವರು ಹೊರಹಾಕಿದರೂ ಅಳುಕದೇ, ಅಂಜದೇ ತಮ್ಮದೇ ಸಮಾಜಮುಖಿ ದೃಢ ನಿರ್ಧಾರದಿಂದ ಮುನ್ನಡೆದರು. ಸಂಕೇಶ್ವರದ ಶಂಕರಾಚರ‍್ಯರಿಂದ ‘ತ್ಯಾಗಮಹರ್ಷಿ’ ಬಿರುದು ಪಡೆದ ಕಾಕಾ ಅವರು ಬದುಕಿನುದ್ದಕ್ಕೂ ತಾವೇ ನೂಲಿನಿಂದ ಬಟ್ಟೆ ತಯಾರಿಸಿ ಖಾದಿ ಬಟ್ಟೆಯನ್ನೇ ಧರಿಸಿ ಇಂದಿನ ಪೀಳಿಗೆಗೆ ಸ್ಪೂರ್ತಿಯಾದವರೆಂದರು.
ಚಿಕ್ಕೋಡಿಯ ಮಾಜಿ ಎಂ.ಪಿ.ಶಂಕರಾನಂದ, ಸಂಸದ ಗೋವಿಂದ ಕಾರಜೋಳ, ರಾಮಣ್ಣ ಆಲಗೂರರಂಥ ಅನೇಕ ನಾಯಕರು ಕಾಕಾ ಅವರ ವಸತಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ಎಂದರು.
ಬಿ.ಎಂ.ಪಾಟೀಲ ವಚನಗಾಯನ ಮಾಡಿದರು. ಡಾ. ವ್ಹಿ.ಡಿ.ಐಹೊಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಸುಭಾಸ ಕನ್ನೂರ ನಿರೂಪಿಸಿದರು. ಡಾ. ಸಂಗಮೇಶ ಮೇತ್ರಿ ವಂದಿಸಿದರು.
ಕಾರ‍್ಯಕ್ರಮದಲ್ಲಿ ಡಾ. ಎಂ.ಎಸ್.ಮದಭಾವಿ, ಡಾ. ಆರ್.ಕೆ.ಕುಲಕರ್ಣಿ, ಡಾ. ಸೋಮಶೇಖರ ವಾಲಿ, ಡಾ. ವಿ.ಎನ್.ಬಾಗಾಯತ, ಸುಭಾಸ ಯಾದವಾಡ, ಎಸ್.ಬಿ.ದೊಡಮನಿ ದಂಪತಿ, ಸಿ.ಎಂ.ಬಂಡಗರ ದಂಪತಿ, ಜೆ.ಎಸ್.ಗಲಗಲಿ, ಡಾ. ಎಂ.ಎಸ್.ಚಾಂದಕವಠೆ, ಪ್ರಭಾವತಿ ದೇಸಾಯಿ, ಎಸ್.ವಾಯ್.ಗದಗ, ಜಿ.ಆರ್.ಬ್ಯಾಕೋಡ ದಂಪತಿ, ಬನಶ್ರೀ ಹತ್ತಿ, ಶಾರದಾ ಕೊಪ್ಪ, ಎಂ.ಎಸ್.ಝಳಕಿ, ಡಾ. ಎಸ್.ಕೆ.ಕೊಪ್ಪ, ಮಲ್ಲಮ್ಮ ಬಿರಾದಾರ, ಎಂ.ಎಸ್.ಡಿಗ್ಗಾವಿ, ಕೆ.ಎಸ್.ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
ನಿರ್ಲಕ್ಷಿತರಿಗೆ ಕಾಕಾ ಕಾರಖಾನೀಸರಿಂದ ಶಿಕ್ಷಣ ದಾಸೋಹ – ಬಿ.ಆರ್.ಬನಸೋಡೆ ಅಭಿಮತ


