ವಂದೇ ಮಾತರಂ ಗೀತೆ ರಾಷ್ಟ್ರೀಯ ಭಾವನೆಯ ಸಂಕೇತ: ಶಾಸಕ ಯಶವಂತಗೌಡ ಪಾಟೀಲ

ಸಪ್ತಸಾಗರ ವಾರ್ತೆ, ಇಂಡಿ, ಡಿ. 30: ನಮ್ಮ ದೇಶ ವಿಭಿನ್ನ ರಾಜ್ಯಗಳು, ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದೆ. ಆದರೆ ನಮ್ಮೆಲ್ಲರ ಚಿಂತನೆ ಒಂದೇ ಆಗಿರಬೇಕು ಎಂಬುದನ್ನು ವಂದೇ ಮಾತರಂ ಗೀತೆ ಪ್ರಚುರಪಡಿಸುತ್ತದೆ ಎಂದು ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಯಶವಂತಗೌಡ ಪಾಟೀಲ ತಿಳಿಸಿದ್ದಾರೆ.
ಇಂಡಿ ನಗರದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ನಡೆದ ಭಾರತ ಸರ್ಕಾರ ಕೇಂದ್ರ ಸಂವಹನ ಇಲಾಖೆ, ವಿಜಯಪುರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ, ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಇಲಾಖೆ ಹಾಗು ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘ ಇಂಡಿ ಅವರ ಸಂಯುಕ್ತಾಶ್ರಯದಲ್ಲಿ ವಂದೇ ಮಾತರಂ ನ 150ನೇ ವರ್ಷಾಚರಣೆ, ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ, ವಿಕಸಿತ ಭಾರತ -2047 ಮತ್ತು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳ ಕುರಿತು ಚಿತ್ರ ಪ್ರದರ್ಶನ ಮತ್ತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿ ಮಾತನಾಡಿದರು.
ಬಾಲ್ಯ ವಿವಾಹದ ಪಿಡುಗಿನ ಕುರಿತು ಮಾತನಾಡಿದ ಶಾಸಕರು, ಆಡುವ ವಯಸ್ಸಿನಲ್ಲಿ ಮಗುವಿಗೆ ಮದುವೆ ಮಾಡಿದರೆ ಮಗುವಿನ ಆರೋಗ್ಯ ಮತ್ತು ಮಾನಸಿಕ ಸ್ವಾಸ್ಥ್ಯ ಜೀವನದ ಮೇಲೆ ಬಹುತರ ಪರಿಣಾಮ ಉಂಟು ಮಾಡುತ್ತದೆ. ಆದ್ದರಿಂದ ಬಾಲ್ಯವಿವಾಹ ಪದ್ದತಿ ನಾಗರಿಕ ಸಮಾಜಕ್ಕೆ ಅಂಟಿದ ಪಿಡುಗಾಗಿದೆಯೆಂದು ಹೇಳಿದರು.
ಸೂಕ್ತ ಶಿಕ್ಷಣದಿಂದ ಬಾಲ್ಯ ವಿವಾಹವನ್ನು ತಡೆಯಬಹುದು. ಪೋಷಕರು ಕುಟುಂಬದ ಹಿರಿಯರ ಒತ್ತಡಕ್ಕೆ ಮಣಿದು ಬಾಲ್ಯ ವಿವಾಹದ ಬಂಧನಕ್ಕೆ ಹೆಣ್ಣನ್ನು ದೂಡಬಾರದು. ಆಕೆಗೆ ತನ್ನ ಜೀವನವನ್ನು ರೂಪಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುತಿದ್ದು, ಅವುಗಳ ಸೂಕ್ತ ಅನುಷ್ಠಾನದಿಂದ ಭಾರತ 2047ರ ವೇಳೆಗೆ ವಿಕಸಿತ ಭಾರತ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದರು.
ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಯುವಜನಾಂಗ ಬಳಸಿಕೊಳ್ಳಬೇಕು. ಈ ಮೂಲಕ ಭಾರತವನ್ನು ಸೂಪರ್ ಪವರ್ ದೇಶವನ್ನಾಗಿ ಮಾಡಲು ಸಹಕರಿಸಬೇಕು ಎಂದು ತಿಳಿಸಿದರು.
ಇನ್ನೂ ಕೆಲವೆ ವರ್ಷಗಳಲ್ಲಿ ವಿಶ್ವದ ಹಿರಿಯಣ್ಣನ ಸಾಲಿಗೆ ಭಾರತವನ್ನು ಸೇರಿಸಲು ಸರ್ಕಾರ ಮತ್ತು ಜನತೆ ದೃಢ ನಿರ್ಧಾರ ಮಾಡಿ, ದೇಶದ ಉಜ್ವಲ ಭವಿಷ್ಯಕ್ಕೆ ದುಡಿಯಬೇಕು ಎಂದು ಅವರು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೀತಾ ಗುತ್ತರಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಸಂವಹನ ಇಲಾಖೆಯ ಅಧಿಕಾರಿ ಸಿ.ಕೆ. ಸುರೇಶ ಸ್ವಾಗತಿಸಿದರು.
ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಇಂಡಿ ತಹಶೀಲ್ದಾರ ಬಿ.ಎಸ್.ಕಡಕಭಾವಿ, ತಾಲೂಕು ಆರೋಗ್ಯ ಅಧಿಕಾರಿ ರಾಜೇಶ ಕೋಳೆಕರ, ಶ್ರೀ ಶಾಂತೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನೀಲಕಂಠಗೌಡ ಪಾಟೀಲ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಪ್ಪ ಚನಗೊಂಡ, ತಾಲೂಕು ಪಂಚಾಯತಿಯ ನಂದೀಪ ರಾಠೋಡ, ದತ್ತಾ ಕುಲಕರ್ಣಿ(ಹಿಂಗಣಿ), ಸತೀಶ ಚವ್ಹಾಣ, ವಿವಿಧ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು,ಶಾಲಾ ಕಾಲೇಜಿನ ಸಿಬ್ಬಂದಿ ಹಾಗು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Share this