ಹೋರಾಟಗಾರರ ಬಂಧನ:ಎಐಯುಟಿಯುಸಿ ಕಾರ್ಮಿಕ ಸಂಘಟನೆ ಖಂಡನೆ

ಸಪ್ತ ಸಾಗರ ವಾರ್ತೆ, ವಿಜಯಪುರ, ಜ. 2: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಧರಣಿ ನಡೆಸಲು ಮುಂದಾದ ಹೋರಾಟಗಾರರನ್ನು ಬಂಧಿಸಿ, ಸುಳ್ಳು ಮೊಕದ್ದಮೆ ದಾಖಲಿಸಿರುವ ಕ್ರಮವನ್ನು ಎಐಯುಟಿಯುಸಿ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
ಪಿಪಿಪಿ ಮಾದರಿಯ ಬದಲಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂದು ಹೋರಾಟ ಸಮಿತಿಯಿಂದ ನಿರಂತರವಾಗಿ ೧೦೦ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಯುತ್ತಿತ್ತು. ನಿನ್ನೆ ಹೋರಾಟದ ಮುಂದುವರೆದ ಭಾಗವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಧರಣಿ ನಡೆಸಲು ಪ್ರತಿಭಟನಾಕಾರರು ಮುಂದಾದರು. ಇದನ್ನು ತಡೆದು ಪೊಲೀಸರು ಹೋರಾಟಗಾರರನ್ನು ಬಂಧಿಸಲು ಯತ್ನಿಸಿದಾಗ ನಡೆದ ತಳ್ಳಾಟದಲ್ಲಿ ಸ್ವಾಮೀಜಿಯೊಬ್ಬರು ಮತ್ತು ಮಫ್ತಿಯಲ್ಲಿದ್ದ ಪೊಲೀಸರ ನಡುವೆ ಘರ್ಷಣೆ ನಡೆದ ಘಟನೆ ವರದಿಯಾಗಿದೆ. ಮುಂಚಿತವಾಗಿ ಘೋಷಿಸಿ ಮಾಡಿದ ಈ ಜನಪರ ಹೋರಾಟದ ಸಂದರ್ಭದಲ್ಲಿ ನಡೆದ ಈ ಅನುಚಿತ ಪ್ರಕರಣವನ್ನು ಮಾತುಕತೆ ಮೂಲಕ ಪರಿಹರಿಸುವ ಬದಲು ಕೊಲೆಯತ್ನ, ಕೊಲೆ ಬೆದರಿಕೆ, ಅಕ್ರಮಕೂಟ ಮುಂತಾದ ಕರಾಳ ಸೆಕ್ಷನ್‌ಗಳನ್ನು ಸ್ವಾಮೀಜಿ ಜೊತೆಗೆ, ಹೆಣ್ಣು ಮಕ್ಕಳನ್ನೂ ಸೇರಿಸಿ ಇತರ ಹೋರಾಟಗಾರರ ಮೇಲೂ ಹಾಕಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದು ಈ ಜನಪರ ಹೋರಾಟವನ್ನು ಹತ್ತಿಕ್ಕುವ ಪಿತೂರಿಯಲ್ಲದೆ ಬೇರೇನೂ ಅಲ್ಲ ಎಂದು ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ ಯಾದಗಿರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದ್ದರಿಂದ, ಈ ಕೇಸುಗಳನ್ನು ರದ್ದುಪಡಿಸಿ, ವಿನಾಕಾರಣ ಬಂಧಿಸಲ್ಪಟ್ಟಿರುವ ಅನಿಲ್ ಹೊಸಮನಿ, ಭಗವಾನ್ ರೆಡ್ಡಿ ಮೊದಲಾದ ೬ ಮಂದಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ನಿನ್ನೆ ಬಂಧಿತರಾದ ಮಲ್ಲಿಕಾರ್ಜುನ ಮತ್ತು ಇತರೆ ಎಲ್ಲ ೨೭ ಹೋರಾಟಗಾರರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ಕೈಬಿಡಬೇಕು, ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ನ್ಯಾಯಯುತ ಆಗ್ರಹವನ್ನು ಈಡೇರಿಸಬೇಕೆಂದು ಎಐಯುಟಿಯುಸಿ ರಾಜ್ಯ ಸಮಿತಿಯು ಕರ್ನಾಟಕ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ.

Share this