ಸಿದ್ದರಾಮಯ್ಯ ಕೇವಲ ಕಾಂಗ್ರೆಸ್ ಸಿಎಂ ಅಲ್ಲ, ಕರ್ನಾಟಕದ ಸಿಎಂ: ಯತ್ನಾಳ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 12:
ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಅಲ್ಲ, ರಾಜ್ಯದ ಸಿಎಂ ಆಗಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗಿನ ವೇದಿಕೆ ಹಂಚಿಕೆ ಹಾಗೂ ಅವರನ್ನು ಹೊಗಳಿದ ವಿಚಾರವಾಗಿ ಕೇಳಿಬಂದ ಟೀಕೆಗಳಿಗೆ,
ಸಿದ್ದರಾಮಯ್ಯ ಅವರು ಕೇವಲ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಲ್ಲ. ಅವರು ಇಡೀ ರಾಜ್ಯದ ಮುಖ್ಯಮಂತ್ರಿ. ನಮ್ಮ ಕ್ಷೇತ್ರಕ್ಕೆ ಬಂದಾಗ ಅವರಿಗೆ ಗೌರವ ನೀಡುವುದು ಶಿಷ್ಟಾಚಾರ ಮತ್ತು ನನ್ನ ಕರ್ತವ್ಯ. ನಾನು ಗೌರವ ನೀಡಿದ್ದಕ್ಕೆ ಕೆಲವರಿಗೆ ನೋವಾಗಿದ್ದರೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ, “ನಾನು, ಸಿಎಂಗೆ ಗೌರವ ನೀಡಿದಂತೆ ಕಾಂಗ್ರೆಸ್‌ನವರು ಕೂಡ ಪ್ರಧಾನ ಮಂತ್ರಿಗಳಿಗೆ ಗೌರವ ನೀಡಲಿ ಎಂದು ಕುಟುಕಿದರು.
“ಡಿಕೆಶಿ ಎದುರೇ ಜನ ನನ್ನ ಪರ ಕೂಗಿದ್ದು ಜಿಲ್ಲಾ ನಾಯಕರಿಗೆ ಮುಜುಗರ ತಂದಿರಬಹುದು. ಆದರೆ ಇದು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ನನ್ನನ್ನು ಮತ್ತು ಪ್ರತಾಪ್ ಸಿಂಹ ಅಂತಹವರನ್ನು ಕೈಬಿಟ್ಟರೆ ಪಕ್ಷಕ್ಕೆ ಹುಷಾರ್” ಎಂದು ಸ್ವಪಕ್ಷದ ನಾಯಕರಿಗೂ ಪರೋಕ್ಷವಾಗಿ ಯತ್ನಾಳ ಎಚ್ಚರಿಕೆ ನೀಡಿದರು.
ಬಿಜೆಪಿ ರಾಜಾಧ್ಯಕ್ಷರ ನೇಮಕ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಅವರು,
“ಹೈಕಮಾಂಡ್ ನಾಯಕರಿಗೆ ಎಲ್ಲವೂ ತಿಳಿದಿದೆ. ಯಾರಿಗೆ ಯಾವಾಗ ಏನು ಜವಾಬ್ದಾರಿ ನೀಡಬೇಕೆಂದು ಅವರು ನಿರ್ಧರಿಸುತ್ತಾರೆ ಎಂದರು.
ಬಳ್ಳಾರಿಯಲ್ಲಿ ನಡೆದ ಇತ್ತೀಚಿನ ಗಲಾಟೆ ಪ್ರಕರಣವನ್ನು ರಾಜ್ಯದ ಸಿಓಡಿ ತನಿಖೆಗೆ ಬದಲಾಗಿ ಸಿಬಿಐಗೆ ವಹಿಸಬೇಕು ಎಂದು ಯತ್ನಾಳ್ ಆಗ್ರಹಿಸಿದರು.
“ರಾಜ್ಯ ಸರ್ಕಾರದ ತನಿಖೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕ್ಲೀನ್ ಚಿಟ್ ನೀಡುವ ಸಾಧ್ಯತೆ ಇದೆ. ಸದ್ಯದ ಆಡಿಯೋ ಮತ್ತು ವಿಡಿಯೋಗಳನ್ನು ಸಾಕ್ಷ್ಯವಾಗಿ ನಂಬಲಾಗದು, ಏಕೆಂದರೆ ಎಐ ತಂತ್ರಜ್ಞಾನದ ಮೂಲಕ ಯಾವುದನ್ನೂ ಬೇಕಾದರೂ ನಕಲಿ ಮಾಡಬಹುದು. ಸತ್ಯಾಸತ್ಯತೆ ಹೊರಬರಲು ಕೇಂದ್ರದ ತನಿಖಾ ಸಂಸ್ಥೆಯೇ ಸೂಕ್ತ” ಎಂದು ಅವರು ಅಭಿಪ್ರಾಯಪಟ್ಟರು.

Share this