ಸಪ್ತಸಾಗರ ವಾರ್ತೆ, ವಿಜಯಪುರ, ಜ.21: ವಚನ ಪರಂಪರೆ, ತನ್ನ ನೇರ ವಚನಗಳ ಮೂಲಕ ಸಾಮಾಜಿಕ ಸಮಾನತೆಯ ಸಾರಿದವರು ನಿಜಶರಣ ಅಂಬಿಗರ ಚೌಡಯ್ಯನವರು ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂಬಿಗರ ಚೌಡಯ್ಯ ಅವರು ಕೇವಲ ವಚನಕಾರ ಮಾತ್ರವಲ್ಲ, ಶ್ರಮಜೀವಿಗಳ ಆಶಯ ಮತ್ತು ಧ್ವನಿಯಾಗಿದ್ದರು. ದುಡಿಯುವ ವರ್ಗದ ಗೌರವ, ಸಮಾನತೆ, ಮಾನವೀಯತೆ ಹಾಗೂ ಸಮಾಜದಲ್ಲಿನ ಅಸಮಾನತೆಗಳ ವಿರುದ್ಧದ ಹೋರಾಟ ಅವರ ವಚನಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಶರಣರ ವಚನ ಸಾಹಿತ್ಯವು ಇಂದಿನ ಸಮಾಜಕ್ಕೆ ದಿಕ್ಕು ತೋರಿಸುವ ಶಾಶ್ವತ ಮೌಲ್ಯಗಳ ಭಂಡಾರವಾಗಿದೆ ಎಂದು ಹೇಳಿದರು.
ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ಶ್ರಮದ ಮಹತ್ವವನ್ನು ಪ್ರತಿಪಾದಿಸುತ್ತವೆ. ಶರಣರ ಸಂದೇಶಗಳನ್ನು ಯುವಜನತೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಶರಣ ಸಂಸ್ಕೃತಿ ನಮ್ಮ ನಾಡಿನ ಸಾಮಾಜಿಕ ನ್ಯಾಯದ ಆಧಾರ ಶಿಲೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಶರಣರ ತತ್ವ ಚಿಂತನೆಗಳನ್ನು ವಿದ್ಯಾರ್ಥಿಗಳು ಪರಿಚಯ ಹೊಂದುವುದರಿಂದ ಮಾನವೀಯ ಮೌಲ್ಯಗಳು ಮತ್ತು ಶ್ರಮ ಸಂಸ್ಕೃತಿ ಬೆಳೆಸಲು ಸಾಧ್ಯವಾಗುತ್ತದೆ. ಶರಣ ಸಂಸ್ಕೃತಿಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಂಕಲ್ಪದೊಂದಿಗೆ ಹಾಗೂ ಸಮಾನತೆ ಮತ್ತು ಮಾನವೀಯತೆಯ ಸಂದೇಶವನ್ನು ಸಮಾಜದಲ್ಲಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ ವಚನಗಳು ದಾರಿದೀಪವಾಗಿವೆ ಎಂದು ಹೇಳಿದರು.
ಶಿವಶರಣಪ್ಪ ಶಿರೂರ ಅವರು ಉಪನ್ಯಾಸ ನೀಡಿ, ಅಂಬಿಗರ ಚೌಡಯ್ಯನವರ ಜೀವನ ಮತ್ತು ವಚನಗಳ ಸಾಮಾಜಿಕ ಹಿನ್ನೆಲೆಯನ್ನು ವಿವರಿಸಿದರು. ಅವರ ವಚನಗಳು ಶೋಷಿತ ವರ್ಗದ ಪರವಾಗಿ ಮಾತನಾಡುವ ಶಕ್ತಿಶಾಲಿ ಸಾಹಿತ್ಯವಾಗಿದ್ದು, ಇಂದಿಗೂ ಸಮಕಾಲೀನವಾಗಿವೆ ಎಂದು ತಿಳಿಸಿದರು.
ಶರಣರ ವಿಚಾರಧಾರೆಯನ್ನು ಇಂದಿನ ಯುವ ಪೀಳಿಗೆಗೆ ಮತ್ತು ಜನಸಾಮಾನ್ಯರಿಗೆ ತಲುಪಿಸುವ ಅಗತ್ಯವಿದೆ. ಯುವ ಜನತೆ ವಚನ ಸಾಹಿತ್ಯದ ಮೂಲಕ ಜೀವನ ಮೌಲ್ಯಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು. ಶರಣರ ವಚನಗಳ ಸಾರ ಅರಿಯುವ ಮೂಲಕ ಶರಣರ ಅದರೊಳಗಡಿಗಿರುವ ಸಾರ ತಿಳಿದು ಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ರಾಜಶೇಖರ ಧೈವಾಡಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಅಧಿಕ್ಷಕರಾದ ಶ್ರೀಮತಿ ಶ್ರೀದೇವಿ,ಎಂ.ಆರ್ ಗುರಿಕರ, ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿ, ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ವಿವಿಧ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ನೇರ–ದಿಟ್ಟ ವಚನಗಳ ಮೂಲಕ ಕಾಯಕಜೀವಿಗಳ ಧ್ವನಿಯಾದವರು ನಿಜಶರಣ ಅಂಬಿಗರ ಚೌಡಯ್ಯ-ಡಾ. ಔದ್ರಾಮ


