ಸಪ್ತಸಾಗರ ವಾರ್ತೆ, ವಿಜಯಪುರ, ಜ. 22:
ಸಾಂವಿಧಾನಿಕ ಹುದ್ದೆಯಾಗಿರುವ ರಾಜ್ಯಪಾಲರನ್ನು ಅತ್ಯಂತ ಅಗೌರವದಿಂದ ನಡೆದುಕೊಳ್ಳುವ ಮೂಲಕ ಕಾಂಗ್ರೆಸ್ ನಾಯಕರು ಭಾರತೀಯ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದು ಅತ್ಯಂತ ಬೇಜವಾಬ್ದಾರಿತನದಿಂದ ನಡೆದುಕೊಂಡಿದ್ದಾರೆ. ಕೂಡಲೇ ಈ ಎಲ್ಲ ಸದಸ್ಯರನ್ನು ಅನರ್ಹಗೊಳಿಸಿ ಮುಂದೆ ಅವರು ಚುನಾವಣೆಗೆ ಸ್ಪರ್ಧೆ ಮಾಡದಂತೆ ನಿಷೇಧ ಹೇರಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯಪಾಲ ಥಾವರಚಂದ ಗೆಹ್ಲೋಟ ಅವರು ಸಾಂವಿಧಾನಿಕ ಹುದ್ದೆಯಲ್ಲಿರುವವರು, ಸರ್ಕಾರ ಸಿದ್ಧಪಡಿಸಿದ ಭಾಷಣವನ್ನೇ ಓದಬೇಕು ಎಂಬ ನಿಯಮ ಎಲ್ಲಿಯೂ ಇಲ್ಲ. ತನ್ನ ಸ್ವಾರ್ಥ ಸಾಧನೆಗಾಗಿ ವಿಶೇಷ ಅಧಿವೇಶನವನ್ನು ಕರೆಯುವ ಮೂಲಕ ಕಾಂಗ್ರೆಸ್ ಸರ್ಕಾರ ರಾಜಕಾರಣ ಮಾಡಲು ಬಯಸಿತ್ತು. ಆದರೆ ಜನಪರ ಚಿಂತನೆಯುಳ್ಳ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಸರ್ಕಾರದ ಸಿದ್ಧ ಭಾಷಣ ಓದಲಿಲ್ಲ. ಇದರಿಂದಾಗಿಯೇ ಕಾಂಗ್ರೆಸ್ ಶಾಸಕರು ರಾಜ್ಯಪಾಲರ ಜೊತೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡು ಅವರ ದಾರಿಯನ್ನು ಅಡ್ಡಗಟ್ಟಿರುವುದು ಶೋಭೆ ತರದ ಸಂಗತಿ. ಇದು ಅತ್ಯಂತ ನಾಚಿಕಗೇಡಿನ ಸಂಗತಿ ಎಂದು ಜಿಗಜಿಣಗಿ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯಪಾಲರು ರಾಜ್ಯದ ಆಡಳಿತ ಯಂತ್ರದ ಮುಖ್ಯಸ್ಥರಿದ್ದಂತೆ. ಈ ರಾಜ್ಯಪಾಲರ ದಾರಿಯನ್ನು ಅಡ್ಡಗಟ್ಟಿ ಘೇರಾವ್ ಹಾಕುವುದು ನಮ್ಮ ಸಂಸ್ಕೃತಿಯಲ್ಲ. ಕಾಂಗ್ರೆಸ್ ನಾಯಕರು ಮಾಡಿರುವ ಈ ಕೃತ್ಯ ಸಹಿಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯಪಾಲರಿಗೆ ಅಗೌರವ ತೋರಿದ ಎಲ್ಲ ಕಾಂಗ್ರೆಸ್ ಸದಸ್ಯರನ್ನು ಕೂಡಲೇ ಶಾಸಕ ಸ್ಥಾನದಿಂದ ವಜಾ ಮಾಡಬೇಕು. ಈ ರೀತಿಯ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದವರು ಚುನಾವಣೆಗೂ ಸ್ಪರ್ಧಿಸಬಾರದು. ಹೀಗಾಗಿ ಅವರೆಲ್ಲರೂ ಚುನಾವಣೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಎಂದು ಜಿಗಜಿಣಗಿ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಸದನದಲ್ಲಿ ರಾಜ್ಯಪಾಲರ ವಿರುದ್ಧವೇ ಗೂಂಡಾ ವರ್ತನೆ ಪ್ರದರ್ಶನ ಮಾಡುವ ಮೂಲಕ ಕಾಂಗ್ರೆಸ್ಸಿಗರು ಸಂವಿಧಾನದ ಆಶಯಗಳಿಗೆ ಲೋಪವೆಸಗಿದ್ದಾರೆ ಎಂದು ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿಯತ್ತ ಗಮನಹರಿಸಬೇಕಾದ ರಾಜ್ಯ ಕಾಂಗ್ರೆಸ್ ಸರ್ಕಾರವು, ಕೇಂದ್ರ ಸರ್ಕಾರದ ವಿರುದ್ಧ ದ್ವೇಷ ಸಾಧಿಸುವ ಸಲುವಾಗಿ ಸಂವಿಧಾನಿಕ ಹುದ್ದೆಯಲ್ಲಿರುವ ಗೌರವಾನ್ವಿತ ರಾಜ್ಯಪಾಲರಿಗೆ ಅಪಮಾನ ಮಾಡುತ್ತಿರುವುದು ಖಂಡನೀಯ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ ಬಡವರ ಪರವಾದ ಸುಧಾರಿತ ಕೇಂದ್ರ ಸರ್ಕಾರದ ಯೋಜನೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಸರ್ಕಾರ ಗೂಂಡಾಗಿರಿಯ ಮೂಲಕ ಅಧಿವೇಶನದ ಘನತೆಯನ್ನು ಕುಂದಿಸುತ್ತಿದೆ.
ಕಾಂಗ್ರೆಸ್ ಸರ್ಕಾರದ ಗೂಂಡಾ ವರ್ತನೆ ಖಂಡನಾರ್ಹ ಎಂದು ಅವರು ಹೇಳಿದ್ದಾರೆ.
ರಾಜ್ಯಪಾಲರಿಗೆ ಅಗೌರವ: ಶಾಸಕರ ಅನರ್ಹಕ್ಕೆ ಸಂಸದ ಜಿಗಜಿಣಗಿ ಒತ್ತಾಯ


