ಬ್ಯಾಂಕ್ ನೌಕರರ ಮುಷ್ಕರ ಯಶಸ್ವಿ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 27:
ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಬ್ಯಾಂಕ್ ನೌಕರರ ಅಖಿಲ ಭಾರತ ಒಂದು ದಿನದ ಮುಷ್ಕರ ಯಶಸ್ವಿಯಾಗಿ ನಡೆಯಿತು.
ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಜಿ. ಗಾಂಧಿ ಅವರು, ಮುಷ್ಕರದ ಅನಿವಾರ್ಯತೆಯನ್ನು ವಿವರಿಸಿದರು.
08-03-2024ರಂದು IBA ಮತ್ತು UFBU ನಡುವಿನ ಒಪ್ಪಂದ (MOU) ಪ್ರಕಾರ, ವಾರಕ್ಕೆ ಐದು ದಿನಗಳ ಬ್ಯಾಂಕಿಂಗ್ ಸೇವೆ ಜಾರಿಗೊಳಿಸಿ ಎಲ್ಲಾ ಶನಿವಾರಗಳನ್ನು ರಜೆಯಾಗಿ ಘೋಷಿಸಬೇಕಾಗಿದೆ. ಈ ಬಗ್ಗೆ IBA ಕೇಂದ್ರ ಸರ್ಕಾರದ ಅನುಮೋದನೆಗಾಗಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಇಷ್ಟರವರೆಗೆ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದಿಂದ ಯಾವುದೇ ಅನುಮೋದನೆ ದೊರೆತಿಲ್ಲ.
UFBU ನಾಯಕರು ಹಣಕಾಸು ಸಚಿವಾಲಯಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ, UFBU ಅನಿವಾರ್ಯವಾಗಿ ಮುಷ್ಕರಕ್ಕೆ ಕರೆ ನೀಡಿದೆ.
ಜನವರಿ 22 ಮತ್ತು 23ರಂದು ಕೇಂದ್ರ ಸರ್ಕಾರದ ಕಾರ್ಮಿಕ ಆಯುಕ್ತರ ಮಧ್ಯಸ್ಥಿಕೆಯಲ್ಲಿ UFBU, IBA ಹಾಗೂ DFS ಅಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಯಿತು. ಆದರೆ DFS ನ ಹಠಾತ್ ಧೋರಣೆಯಿಂದ ಯಾವುದೇ ಫಲಿತಾಂಶ ಹೊರಬರಲಿಲ್ಲ. ಇದರಿಂದಾಗಿ ಮುಷ್ಕರ ನಡೆಸುವುದು ಅನಿವಾರ್ಯವಾಯಿತು ಎಂದು ತಿಳಿಸಿದರು.
UFBU ಮತ್ತು IBA ನಡುವೆ ನಡೆದ ಒಪ್ಪಂದದಂತೆ ಐದು ದಿನಗಳ ಬ್ಯಾಂಕಿಂಗ್ ಜಾರಿಗೊಳಿಸುವಂತೆ ಆಗ್ರಹಿಸಿ, ರಾಷ್ಟ್ರೀಕೃತ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕುಗಳು ಹಾಗೂ ಸಹಕಾರಿ ಬ್ಯಾಂಕುಗಳ ಸುಮಾರು 8 ಲಕ್ಷಕ್ಕೂ ಹೆಚ್ಚು ಬ್ಯಾಂಕ್ ನೌಕರರು ಈ ಮುಷ್ಕರದಲ್ಲಿ ಭಾಗವಹಿಸಿದರು.
ವಿಜಯಪುರದಲ್ಲಿ ಸುಮಾರು 300ಕ್ಕೂ ಹೆಚ್ಚು ಬ್ಯಾಂಕ್ ನೌಕರರು ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ತಮ್ಮ ಪ್ರಮುಖ ಬೇಡಿಕೆಯಾದ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಸಂಯುಕ್ತ ವೇದಿಕೆಯ ಸಂಚಾಲಕರಾದ
ಕಂ. ಅಶೋಕ್ ಕಟ್ಟಿಮನಿ, ಶ್ರೀಕಾಂತ್, ಸುಶೀಲ್ ಶಿಂಧೆ, ರಾಹುಲ್ ಪೊಳ್ಳು, ಝಳಕಿ, ಕಂ. ಸುನಿಲ್ ನಾಯಕ್, ಸಾಗರ ಲೋಣಿ, ಚಂದ್ರಶೇಖರ ಗಂಟೆಪ್ಪಗೋಳ, ಅಜಯ ಚೌವಣಾ, ಮಹಾಂತೇಶ ಭೂತನಾಳ, ಸಿದ್ರಾಮ ಕಾಭಾಡ್ಗಿ,ಜಹೀರ್, ಫಾರೂಕ್ ನದಾಫ್, ಕವಿತಾ ಜಾಧವ್, ಸೌಮ್ಯಾ, ರೇಣುಕಾ, ರಶ್ಮಿ, ಝಳಕಿ ಮೇಡಂ, ಐಶ್ವರ್ಯ ರವಿಶಂಕರ್, ಸವಿತಾ ಕೋರಿ, ಮಂಗಳ ಪಾಟೀಲ, ನಿವೇದಿತಾ ಸೇರಿದಂತೆ ಹಲವರು ಮಾತನಾಡಿದರು.

Share this