ಸಮಾಜ ಸುಧಾರಣೆಗೆ ಮಡಿವಾಳ ಮಾಚಿದೇವರ ಕೊಡುಗೆ ಅಪಾರ– ಪ್ರಶಾಂತ ಚನಗೊಂಡ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ.1: ಸಮಾಜದಲ್ಲಿದ್ದ ಅಸಮಾನತೆ, ಅಂಕು-ಡೊಂಕುಗಳನ್ನು ತಿದ್ದಲು ತಮ್ಮ ವಚನಗಳ ಮೂಲಕ ಅತ್ಯಂತ ಸರಳವಾಗಿ ಜನರಾಡುವ ಭಾಷೆಯಲ್ಲಿಯೆ ವಚನಗಳ ಮೂಲಕ ಸಂದೇಶ ನೀಡಿದ ಮಡಿವಾಳ ಮಾಚಿದೇವರ ಕೊಡುಗೆ ಅಪಾರವಾಗಿದೆ ಎಂದು ವಿಜಯಪುರ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರು ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಡಿವಾಳ ಮಾಚಿದೇವರು ಕೇವಲ ಶರಣ ಮಾತ್ರವಲ್ಲ, ಸಮಾಜ ಪರಿವರ್ತನೆಗೆ ಹಾಗೂ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು
ಅನೇಕ ಅಮಾನತೆಯಿಂದ‌ ಬಳಲುತ್ತಿದ್ದ ಅಂದಿನ ಸಮಾಜದ ಅಂಧಕಾರ ತೊಲಗಿಸಲು ಸಮಾನತೆ ಸಾರಿದ ಶರಣರಾಗಿದ್ದಾರೆ.
ಅವರು ವಚನಗಳ ಮೂಲಕ ಬಿತ್ತಿದ ಸಂದೇಶ ‌ಇಂದಿಗೂ ಪ್ರಸ್ತುತವಾಗಿದೆ. ಅವರ ತತ್ವ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.
ಕಾಯಕ ನಿಷ್ಠೆ ಮತ್ತು ಶುದ್ಧ ಜೀವನಶೈಲಿಯ ಪ್ರತಿರೂಪವಾಗಿದ್ದ ಮಡಿವಾಳ ಮಾಚಿದೇವ ಅವರ ವಚನಗಳಲ್ಲೂ ಅದರ ಸಾರ ಸರಳತೆ ಹೊಳಹುಗಳನ್ನು ಅರಿಯಬಹುದಾಗಿದೆ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವೀರಯ್ಯ ಸಾಲಿಮಠ ಮಾತಮಾಡಿ, ವಚನಗಳ ಮೂಲಕ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ ಮಡಿವಾಳ ಮಾಚಿದೇವರ ಸಂದೇಶಗಳು ಸಾರ್ವಕಾಲಿಕವಾಗಿವೆ ಎಂದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ತಮ್ಮ ವಚನಗಳಲ್ಲಿ ಸಾಮಾಜದಲ್ಲಿನ ಮೌಢ್ಯತೆ,ಕಂದಾಚಾರದಂತಹ ಸಾಮಾಜಿಕ ಸುಧಾರಣೆಗೆ ಶ್ರಮಿಸಿದ್ದಾರೆ ಎಂದು ಹೇಳಿದರು.
ಡಾ. ಎಂ. ನಾಗರಾಜ ಉಪನ್ಯಾಸ ನೀಡಿ,12ನೇ ಶತಮಾನದ ಶರಣ ಮಡಿವಾಳ ಮಾಚಿದೇವ ಅವರ ವಚನಗಳಲ್ಲಿ ವ್ಯಕ್ತವಾಗುವ ಮಾನವೀಯತೆ ಇಂದಿನ ಸಮಾಜಕ್ಕೂ ದಿಕ್ಕು ತೋರುವ ಶಕ್ತಿ ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಅಶೋಕ ಕಲಘಟಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಮುತ್ತಪ್ಪ ಮಡಿವಾಳ, ಬಾಪು ಬಳ್ಳಾರಿ , ಪ್ರಭು ಮಡಿವಾಳ, ರಂಗಪ್ಪ ಬಾಗಲಕೋಟ, ಶಿವಪ್ಪ ಹುಬ್ಬಳ್ಳಿ, ಪ್ರೇಮನಾಥ ಅಗಸರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಮೆರವಣಿಗೆ
ಮಡಿವಾಳ ಮಾಚಿದೇವರ ಭಾವ ಚಿತ್ರದ ಮೆರವಣಿಗೆಯು ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಚಾಲನೆಗೊಂಡು, ಪ್ರಮುಖ ವೃತ್ತಗಳ ಮೂಲಕ ಸಾಗಿ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು.

Share this