ಸಪ್ತಸಾಗರ ವಾರ್ತೆ, ಬೆಂಗಳೂರು, ಫೆ. 2: ಚಿತ್ರಸಂತೆ ಸಂಸ್ಥೆಯ ವತಿಯಿಂದ ಪ್ರತಿವರ್ಷ ನೀಡಲಾಗುವ “ಹೆಮ್ಮೆಯ ಕನ್ನಡ ನಾಡಿನ ಸಾಧಕ (ನಿಮ್ಮ ವಿಶಿಷ್ಟ ಸಾಧನೆಗೆ ನಮ್ಮ ವಿಶಿಷ್ಟ ಗೌರವ)” ಪ್ರಶಸ್ತಿಗೆ ಈ ಬಾರಿ ರಾಕೇಶ್ ರಜಪೂತ, ರಾಜ್ಯ ಪ್ರಧಾನ ಕಾರ್ಯದರ್ಶಿ, ಆಲ್ ಇಂಡಿಯಾ ಬಂಜಾರಾ ಸೇವಾ ಸಂಘ – ಯುವ ಘಟಕ, ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಪ್ರತಿಷ್ಠಿತ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಗೌರವ ಪ್ರದಾನ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ನೆರವೇರಿತು. ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡು, ಬಂಜಾರಾ ಸಮುದಾಯ ಸೇರಿದಂತೆ ಸಮಾಜದ ವಿವಿಧ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ರಾಕೇಶ ರಜಪೂತರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜಸೇವೆ, ಶಿಕ್ಷಣ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಅನೇಕ ಸಾಧಕರಿಗೆ ಗೌರವ ಸಲ್ಲಿಸಲಾಯಿತು. ವಿಶೇಷ ಅತಿಥಿಗಳಾಗಿ ಚೌಕಿದಾರ ಸಿನೆಮಾದ ಖ್ಯಾತ ನಟ ಪೃಥ್ವಿ ಅಂಬಾರರ ಹಾಗೂ ಖ್ಯಾತ ನಟಿ ಧನ್ಯಾ ರಾಮಕುಮಾರ ಅವರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ವಿಶೇಷ ಗೌರವ ಮತ್ತು ಕಳೆ ನೀಡಿದರು.
ಗೌರವ ಸ್ವೀಕರಿಸಿ ಮಾತನಾಡಿದ ರಾಕೇಶ್ ರಜಪೂತ, “ಈ ಪ್ರಶಸ್ತಿ ನನ್ನೊಬ್ಬನ ಸಾಧನೆಯಲ್ಲ. ನನ್ನ ಬದುಕಿಗೆ ದಿಕ್ಕು ತೋರಿದ ತಂದೆ–ತಾಯಿಯವರು, ಸಾಮಾಜಿಕ ಕಾರ್ಯಗಳಲ್ಲಿ ಸದಾ ಬೆಂಬಲವಾಗಿ ನಿಂತ ಹಿರಿಯರಾದ ಡಾ. ಬಾಬುರಾಜೇಂದ್ರ ನಾಯಕರು, ನನ್ನ ಜೊತೆ ಹೆಜ್ಜೆ ಹಾಕಿದ ಸ್ನೇಹಿತರು ಹಾಗೂ ಸಂಘಟನಾ ಸಹಚರರ ಸಹಕಾರದ ಫಲವಾಗಿದೆ. ಈ ಗೌರವ ನಿಜವಾಗಿ ಅವರಿಗೆ ಸಲ್ಲಬೇಕು” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಚಿತ್ರಸಂತೆ ಸಂಸ್ಥೆಯ ಈ ಗೌರವ ಪ್ರದಾನ ಕಾರ್ಯಕ್ರಮವು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಮತ್ತಷ್ಟು ಪ್ರೇರಣೆಯಾಗಿದ್ದು, ಶ್ರಮ ಮತ್ತು ನಿಷ್ಠೆಗೆ ಸಮಾಜದಲ್ಲಿ ಗೌರವ ಸಿಗಬೇಕು ಎಂಬ ಸಕಾರಾತ್ಮಕ ಸಂದೇಶವನ್ನು ರವಾನಿಸಿತು. ಕಾರ್ಯಕ್ರಮವು ಅತ್ಯಂತ ಸ್ಮರಣೀಯವಾಗಿ ಮುಕ್ತಾಯವಾಯಿತು.
ಸಾಮಾಜಿಕ ಸೇವೆಗೆ ಸಮರ್ಪಿತ ಮನೋಭಾವದಿಂದ ಮುಂದುವರಿಯುವ ರಜಪೂತರ ಸೇವಾ ಪಯಣಕ್ಕೆ ಈ ಪ್ರಶಸ್ತಿ ಮತ್ತೊಂದು ಮಹತ್ವದ ಗುರುತಾಗಿ నిಲ್ಲಲಿದೆ.
ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ರಾಕೇಶ್ ರಜಪೂತರಿಗೆ ರಾಜ್ಯಮಟ್ಟದ ಗೌರವ


