ವಿದ್ಯಾದಾನ ಅತಿ ಶ್ರೇಷ್ಠ: ರಕ್ಷಿತಾ ರಾಜು

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 3 :
ನಗರದ ಬಿ. ಎಲ್.ಡಿ.ಇ.ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಯುವಕ ಯುವತಿಯರಿಗೆ ಪ್ರೇರಣೆಯ ಚಿಲುಮೆ ಎಂಬಂತೆ, “ಬ್ರೆಕಿಂಗ್ ಬ್ಯಾರಿಯರ್ಸ್ ಆನ್ ಇನ್ಸ್ಪೈರಿಂಗ್ ಇಂಟರಾಕ್ಷನ್ ವಿತ್ ಇಂಟರ್ನ್ಯಾಷನಲ್ ಪ್ಯಾರಾ ಅಥ್ಲೆಟ್” ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿ ಕುಮಾರಿ ರಕ್ಷಿತಾ ರಾಜು ಅಂತರಾಷ್ಟ್ರೀಯ ಪ್ಯಾರಾ ಅಥ್ಲೆಟ್,ಬೆಂಗಳೂರು ಇವರು ಮಾತನಾಡಿ, ಉಳ್ಳವರು ಶಿವಾಲಯವ ಮಾಡುವರು ಎಂಬ ಬಸವಣ್ಣನವರ ವಚನದಂತೆ ಶಾರೀರಿಕ ಮಿತಿಗಳು ನಮ್ಮ ಸಾಧನೆಯನ್ನು ಅಡ್ಡಿಪಡಿಸಲಾರವು. ನಮ್ಮಲ್ಲಿ ಯಾವ ಶಕ್ತಿ ಇಲ್ಲ ಎಂಬುದಕ್ಕಿಂತ ನಮ್ಮಲ್ಲಿ ಯಾವ ಶಕ್ತಿ ಇದೆ ಎಂಬುದನ್ನು ತಿಳಿದು, ಅದನ್ನು ಸಮರ್ಥವಾಗಿ ಬಳಸಿಕೊಂಡು ಸಾರ್ಥಕವಾದ ಬದುಕನ್ನು ಸಾಗಿಸುವುದು ಅರ್ಥಪೂರ್ಣವಾದದ್ದು ಎಂದರು. ವಿದ್ಯಾದಾನ ಅತಿ ಶ್ರೇಷ್ಠವಾದದ್ದು, ಹೆಣ್ಣೊಂದು ಕಲಿತರೆ ಶಾಲೆ ಒಂದು ತೆರೆದಂತೆ ಎಂದು ಹೇಳುತ್ತಾರೆ ಹಿರಿಯರು. ಅದಕ್ಕಾಗಿ ನಾನು ಹೆಣ್ಣು, ಅಬಲೆ, ಎಂದು ನಕಾರಾತ್ಮಕವಾಗಿ ಆಲೋಚಿಸಿ ಹೆಣ್ಣು ಮಕ್ಕಳು ಹಿಂದೆ ಉಳಿಯಬಾರದು. ಅವರು ಸುಶಿಕ್ಷಿತರಾದಾಗ ಮಾತ್ರ ಇಡೀ ದೇಶ ಸುಶಿಕ್ಷಿತವಾಗಲು ಸಾಧ್ಯ ಎಂದರು. ನಾನು ಹುಟ್ಟಿನಿಂದಲೇ ದೃಷ್ಟಿ ಹೀನಳಾಗಿದ್ದರೂ ಸಹ ನನ್ನಲ್ಲಿರುವ ವಿಶೇಷ ಶಕ್ತಿಯನ್ನು ಗುರುತಿಸಿ , ನನಗೆ ಸ್ಪೂರ್ತಿಯ ಚಿಲುಮೆಯಾಗಿ ನಿಂತವರು ನನ್ನ ಪೂಜ್ಯ ಗುರುಗಳಾದ ರಾಹುಲ ಬಾಲಕೃಷ್ಣನ್ ಸರ್ ಅವರು ಎಂದು ಈ ಸಂದರ್ಭದಲ್ಲಿ ತಮ್ಮ ಗುರುಗಳನ್ನು ಸ್ಮರಿಸಿಕೊಂಡರು. ಬಿ.ಎಲ್.ಡಿ.ಲ್.ಇ ಸಂಸ್ಥೆ ಎಸ್. ಎಸ್.ಆವರಣದ ಆಡಳಿತಾಧಿಕಾರಿ ಪ್ರೊ. ಐ.ಎಸ್.ಕಾಳಪ್ಪನವರ ಅವರು ಮಾತನಾಡಿ, ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ 2 ಚಿನ್ನದ ಪದಕಗಾರ್ತಿ, ಹೆಮ್ಮೆಯ ಕನ್ನಡತಿ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ ಪುರಸ್ಕೃತೆ ಕುಮಾರಿ ರಕ್ಷಿತಾ ರಾಜು ಅವರು ಬಾಲ್ಯದಿಂದಲೇ ಕಷ್ಟದಲ್ಲಿ ಬೆಳೆದು ಬಂದವರು. ಚಿಕ್ಕಂದಿನಲ್ಲಿಯೇ ತಾಯಿ ತಂದೆಯರನ್ನು ಕಳೆದುಕೊಂಡವರು. ಬ್ಲೈಂಡ್ ಎಂಬ ಕಾರಣಕ್ಕಾಗಿ ಇವರ ಸಂಬಂಧಿಕರಾರು ಹತ್ತಿರ ಕರೆದುಕೊಳ್ಳಲಿಲ್ಲ. ಇವರಿಗೆ ಮಾತೂ ಬಾರದ, ಕಿವಿಯೂ ಕೇಳದ ಅಜ್ಜಿಯೇ ಆಶ್ರಯವಾದಳು. ಅನಂತರ ಇವರಲ್ಲಿರುವ ವಿಶೇಷ ಪ್ರತಿಭಾ ಶಕ್ತಿಯನ್ನು ಗುರುತಿಸಿ ಬೆನ್ನೆಲುಬಾಗಿ ನಿಂತವರು ಇವರ ಗುರುಗಳು. ಮುಂದೆ ಗುರಿ ಹಿಂದೆ ಗುರು ಇರಬೇಕು ಎಂಬಂತೆ ಕೋಚ್ ರಾಹುಲ್ ಬಾಲಕೃಷ್ಣನವರು ಕುಮಾರಿ ರಕ್ಷಿತಾಳು ಪ್ಯಾರಾ ವಿಶ್ವ ಅಥ್ಲೆಟಿಕ್ ನಲ್ಲಿ ಹೆಸರು ಮಾಡಲು ಕಾರಣರಾದರು. ಕುಮಾರಿ ರಕ್ಷಿತಾ ಅವರು ಕೇವಲ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಮಾತ್ರವಷ್ಟೇ ಅಲ್ಲದೆ ವಿದ್ಯಾ ಕ್ಷೇತ್ರದಲ್ಲಿಯೂ ಸಹ ವಿಶೇಷ ಸಾಧನೆಗೈದವರು. ಇವರು ತಹಸಿಲ್ದಾರ್ ಹುದ್ದೆಗೆ ಆಯ್ಕೆ ಆಗಿದ್ದರೂ ಸಹ ಅದನ್ನು ವಿನಯತೆಯಿಂದಲೇ ತ್ಯಜಿಸಿ, IAS ಆಗಬೇಕೆಂಬ ಮಹಾದಾಶೆಯನ್ನು ಹೊಂದಿ ಈ ದಿಶೆಯಲ್ಲಿ ಅಧ್ಯಯನಶೀಲರಾಗಿದ್ದಾರೆ. ಹುಟ್ಟಿನಿಂದಲೇ ದೃಷ್ಟಿಹೀನರಾದ ಇವರು ಇಂದಿನ ಎಲ್ಲಾ ಯುವಕರಿಗೆ ಮಹತ್ ಸಾಧನೆಗೈಯಲು ವಿಶೇಷ ಮಾದರಿಯಾಗಿದ್ದಾರೆ ಎಂದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಭಾರತಿ.ವೈ. ಖಾಸನೀಸ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹಪ್ರಾಧ್ಯಾಪಕ ಡಾ.ಎಂ. ಎಸ್.ಹಿರೇಮಠ, ಡಾ. ಎಮ್.ಬಿ.ಕೋರಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಜೆ.ಎಸ್. ಪಟ್ಟಣಶೆಟ್ಟಿ, ಡಾ. ಬಿ.ಎಸ್. ಹಿರೇಮಠ, ಎಸ್.ಎಸ್ ಪಾಟೀಲ, ಪಿ.ಡಿ.ಮುಲ್ತಾನಿ, ಡಾ.ಎಸ್.ಪಿ.ಶೇಗುಣಸಿ, ಎಂ.ಪಿ.ಕುಪ್ಪಿ ಹಾಗೂ ಬಿ.ಎಲ್. ಡಿ.ಇ. ಸಮೂಹ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ ಪಲ್ಲವಿ ಹಿರೇಮಠ ನಿರೂಪಿಸಿದರು. ಪ್ರವೀಣ ಹೊಸಮನಿ ವಚನ ಗಾಯನ ಗೈದರು. ಶಾಫಿಯಾ ರಮಲಿ ಸ್ವಾಗತಿಸಿದರು. ಐಶ್ವರ್ಯ ಜೋಶಿ ವಂದಿಸಿದರು.

Share this