ಸಪ್ತಸಾಗರ ಪಯಣಕ್ಕೆ ಶುಭ ಹಾರೈಕೆ ಇರಲಿ…
ನಾನು ಕಳೆದ 4 ದಶಕಗಳಿಂದ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುವ ಮೂಲಕ ಪತ್ರಿಕಾ ರಂಗದಲ್ಲಿ ಅಪಾರ ಅನುಭವ ಪಡೆದಿದ್ದೇನೆ.
ಮೂಲತಃ ಭಾರತ ದೇಶದ ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ನನ್ನ ಹುಟ್ಟೂರು. 1962 ಜೂ.1ರಂದು ತಂದೆ ಬೈಲಪ್ಪ, ತಾಯಿ ಶಾವಂತ್ರೆವ್ವ ಅವರ ಪುಣ್ಯದ ಉದರದಲ್ಲಿ ಜನಿಸಿದ ನಾನು ಬಡತನದಿಂದಲೇ ಮೇಲೆ ಬಂದವನು.
ಬಿಎ ಪದವೀಧರರಾಗಿರುವ ನಾನು ಶಾಲಾ ಕಾಲೇಜು ಹಂತದಲ್ಲಿಯೇ ಪತ್ರಿಕೆ ಓದುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದೆನು. ಇದಲ್ಲದೆ ಚಿಕ್ಕಂದಿನಲ್ಲಿ ಕಥೆ, ಕವನ, ಲೇಖನ ಬರೆಯುವುದು ನನ್ನ ಹವ್ಯಾಸ ಕೂಡಾ ಆಗಿತ್ತು. ಹೀಗಾಗಿ ಪತ್ರಿಕಾ ರಂಗದ ಕಡೆಗೆ ನನ್ನ ಒಲವು ಹೆಚ್ಚಿತು. ನವೋದಯ, ಕನ್ನಡಮ್ಮ, ರಾಜಮಾರ್ಗ, ಕನ್ನಡಪ್ರಭ, ಸಂಜೆವಾಣಿ ದಿನಪತ್ರಿಕೆಗಳಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿದ್ದೇನೆ. ಸುದೀರ್ಘವಾಗಿ ನಾಲ್ಕು ದಶಕಗಳ ಕಾಲ ಪತ್ರಿಕಾ ರಂಗದಲ್ಲಿ ಕೃಷಿ ಮಾಡಿದ್ದೇನೆ. ಇದೀಗ ನನ್ನದೇ ಆದ ‘ಸಪ್ತಸಾಗರ’ ಎಂಬ ಶಿರೋನಾಮೆಯ ನಾಲ್ಕು ಪುಟಗಳ ಕನ್ನಡದಿನಪತ್ರಿಕೆಯನ್ನು ಆರಂಭಿಸಿದ್ದೇನೆ.
ನನ್ನ ಪತ್ರಿಕಾ ಕ್ಷೇತ್ರದ ಸೇವೆಯನ್ನು ಗುರುತಿಸಿ ಕರ್ನಾಟಕ ಘನ ಸರ್ಕಾರ 2024ರಲ್ಲಿ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ, ಸಿದ್ದೇಶ್ವರ ಸಂಸ್ಥೆಯು ಸಿದ್ದೇಶ್ವರ ರತ್ನ ಪ್ರಶಸ್ತಿ, ಜಿಲ್ಲಾ ಆಡಳಿತ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯಮಟ್ಟದ 2017ರ ಭಾವೈಕ್ಯತಾ ಪ್ರಶಸ್ತಿ, ಜಿಲ್ಲಾ ಸದ್ಭೂಷಣ ರತ್ನ ಪ್ರಶಸ್ತಿ, ಜರ್ನಲಿಸ್ಟ್ ಅಸೋಸಿಯೇಷನ್ ಮಾಧ್ಯಮ ರತ್ನ ಪ್ರಶಸ್ತಿ ಸೇರಿದಂತೆ ನನಗೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ನನ್ನದೇಯಾದ ಸಪ್ತಸಾಗರ ದಿನ ಪತ್ರಿಕೆಯ ಪಯಣದ ಯಶಸ್ವಿಗೆ ತಮ್ಮೆಲ್ಲರ ಸಹಕಾರ, ಪ್ರೀತಿ, ಆಶೀರ್ವಾದ ಇರಲೆಂದು ಪ್ರಾರ್ಥಿಸುತ್ತೇನೆ.

Rudrappa B Asangi