ಗ್ರ್ಯಾರಂಟಿ ಯೋಜನೆಗಳ ಸೌಲಭ್ಯ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಿ -ಎಸ್.ಆರ್.ಪಾಟೀಲ ಕರೆ

ಸಪ್ತಸಾಗರ ವಾರ್ತೆ, ವಿಜಯಪುರ,ಫೆ.13:
ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಹಾಗೂ ಅವರು ಸ್ವಾವಲಂಬಿಯಾಗಿ ಜೀವನ ನಡೆಸಲು ಪಂಚ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದ್ದು, ಈ ಪಂಚ ಗ್ಯಾರಂಟಿ ಯೋಜನೆಯ ಸೌಲಭ್ಯವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಲಭಿಸುವಂತೆ ನೋಡಿಕೊಂಡು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಲಾಭ ಜನರಿಗೆ ತಲುಪಿಸಿ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ (ಬ್ಯಾಡಗಿ) ಸೂಚಿಸಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ಪಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನಸಾಮಾನ್ಯರ ಬದುಕಿನಲ್ಲಿ ಸುಭದ್ರತೆಯ ಭಾವನೆ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳು ಎಲ್ಲ ವರ್ಗದ ಜನರಿಗೂ ಅನುಕೂಲ ಒದಗಿಸಿವೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಕೆಲಸವನ್ನು ಆಸಕ್ತಿಯಿಂದ ಹಾಗೂ ಶ್ರದ್ದೆಯಿಂದ ಅಧಿಕಾರಿಗಳು ನಿರ್ವಹಿಸಬೇಕು. ಪಡಿತರ ಅಂಗಡಿಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಬೋರ್ಡ ಪ್ರದರ್ಶಿಸಬೇಕು. ಒಟ್ಟಾರೆಯಾಗಿ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ಫಲಾನುಭವಿಗಳಿಗೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.

ಜಿಲ್ಲಾ ಮಟ್ಟದ ಸಮಾವೇಶ :

ಫೆಬ್ರವರಿ 21 ರಂದು ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಾವೇಶ-ಉತ್ಸವ ಹಾಗೂ ಫಲಾನುಭವಿಗಳೊಂದಿಗೆ ಚರ್ಚೆ ಸಮಾರಂಭವು ಜರುಗಲಿದ್ದು,ಈ ಸಮಾರಂಭವನ್ನು ಅತ್ಯಂತ ಉತ್ಸವದಂತೆ ಆಚರಿಸಲು ಉದ್ದೇಶಿಸಲಾಗಿದೆ. ಗ್ಯಾರಂಟಿ ಸಮಾವೇಶವು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಸಂಭ್ರಮದಿಂದ ಜರುಗಲು ವಿವಿಧ ಸಮಿತಿಗಳನ್ನು ರಚಿಸಿ ಅಧಿಕಾರಿಗಳಿಗೆ ಕಾರ್ಯ ಹಂಚಿಕೆ ಮಾಡಬೇಕು. ಸಮಾವೇಶದಲ್ಲಿ ಐದೂ ಗ್ಯಾರಂಟಿ ಯೋಜನೆಗಳ ಪ್ರತ್ಯೇಕ ಮಾಹಿತಿ ಮಳಿಗೆಗಳನ್ನು ತೆರೆದು ಗ್ಯಾರಂಟಿ ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ, ವೇದಿಕೆ ವ್ಯವಸ್ಥೆ, ಫಲಾನುಭವಿಗಳ ಚರ್ಚೆ, ಊಟೋಪಹಾರದ ವ್ಯವಸ್ಥೆ ಸೇರಿದಂತೆ ಕಾರ್ಯಕ್ರಮವು ಯಾವುದೇ ಲೋಪದೋಷಗಳಿಲ್ಲದಂತೆ ಅತ್ಯಂತ ಅಚ್ಚುಕಟ್ಟಾಗಿ ನಡೆಸಬೇಕೆಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಇಲಿಯಾಸ ಬೋರಾಮಣಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಸೌಲಭ್ಯ ಎಲ್ಲ ಅರ್ಹ ಫಲಾನುಭವಿಗಳಿಗೆ ಒದಗಿಸಬೇಕು. ಈ ಸೌಲಭ್ಯಗಳಿಂದ ಅರ್ಹ ಫಲಾನುಭವಿಗಳು ವಂಚಿತರಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಪಂಚಗ್ಯಾರAಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಜನವರಿ ವರೆಗೆ 17,99,34,366 ಮಹಿಳೆಯರು ಪ್ರಯಾಣಿಸಿದ್ದು, 607.93 ಕೋಟಿ ರೂ.ವೆಚ್ಚವಾಗಿದೆ. ಗೃಹ ಜ್ಯೋತಿ ಯೋಜನೆಯಡಿ ಜನವರಿ ಅಂತ್ಯಕ್ಕೆ 4,46,616 ಒಟ್ಟು ಫಲಾನುಭವಿಗಳಿದ್ದು ಈ ಯೋಜನೆಯಡಿ 538.15 ಕೋಟಿ ರೂ.ಜಮೆಯಾಗಿದೆ. ವಿಶೇಷವಾಗಿ ಯುವಜನರಿಗೆ ಆತ್ಮಸ್ಥೆರ್ಯ ತುಂಬಿ ಪ್ರೊತ್ಸಾಹ ಒದಗಿಸಲು ಪದವೀಧರ-ಡಿಪ್ಲೋಮಾ ಪದವೀಧರರಿಗೆ ಯುವ ನಿಧಿ ಯೋಜನೆ ಜಾರಿಗೊಳಿಸಿದೆ.ಈ ಯೋಜನೆಯಡಿ ಪದವಿ ಹಾಗೂ ಡಿಪ್ಲೋಮಾ ವಿಧ್ಯಾಭ್ಯಾಸ ಪೂರ್ಣಗೊಳಿಸಿ ಉದ್ಯೋಗದ ಹುಡುಕಾಟದಲ್ಲಿ ತೊಡಗುವ ಯುವ ಜನರಿಗೆ ನಿರುದ್ಯೋಗ ಭತ್ಯೆಯ ಭದ್ರತೆ ಒದಗಿಸುವ ಯೋಜನೆ ಇದಾಗಿದ್ದು, ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3 ಸಾವಿರ ರೂ. ಹಾಗೂ ಡಿಪ್ಲೊಮಾ ಪಾಸಾದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 1500 ರೂ. ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ. ಜಿಲ್ಲೆಯಲ್ಲಿ 2025ರ ಡಿಸೆಂಬರ್ ವರೆಗೆ ಒಟ್ಟು 17,467 ಯುವನಿಧಿ ಫಲಾನುಭವಿಗಳಾಗಿದ್ದು, ಇವರಿಗೆ 51,78,01,500 ರೂ.ಗಳನ್ನು ನೇರ ವರ್ಗಾವಣೆ (ಡಿ.ಬಿ.ಟಿ) ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಯುವನಿಧಿ ಯೋಜನೆ ವಿಜಯಪುರ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ನಿರುದ್ಯೋಗಿ ಯುವಕರಿಗೆ ಆಶಾಕಿರಣವಾಗಿ ಪರಿಣಮಿಸಿದ್ದು, ಜಿಲ್ಲೆಯು ಯುವನಿಧಿ ಯೋಜನೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನದಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಹೊನ್ನಮಲ್ಲ ಸಾರವಾಡ,ಸುಂದರಪಾಲ್ ರಾಠೋಡ, ನಬಿಲಾಲ ನಾಯ್ಕೋಡಿ, ಆನಂದ ಜಾಧವ, ಮಹಾದೇವಿ ಗೋಕಾಕ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಜಿ.ಪಂ. ಉಪಕಾರ್ಯದರ್ಶಿ ಪ್ರಕಾಶ ವಡ್ಡರ, ತಾಲೂಕು ಸಮಿತಿಯ ಅಧ್ಯಕ್ಷರು, ಜಿಲ್ಲಾ ಹಾಗೂ ತಾಲೂಕು ಸಮಿತಿ ಸದಸ್ಯರು, ಗ್ಯಾರಂಟಿ ಯೋಜನೆ ಸಂಬಂಧಿತ ಅಧಿಕಾರಿ ವಿನಯಕುಮಾರ ಪಾಟೀಲ, ಸಿದ್ದಪ್ಪ ಬಿಂಜಗೇರಿ, ಕೆ.ಕೆ.ಚವ್ಹಾಣ, ಮಹೇಶ ಮಾಳವಾಡೇಕರ, ನಾರಾಯಣಪ್ಪ ಕುರುಬರ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share this