ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 13:
ಬಸವ ನಾಡಿನ ಪ್ರತಿಷ್ಠಿತ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.
ವಿಜಯಪುರ ನಗರದ ಶಹಾಪುರ ಅಗಸಿಯ ನಿವಾಸಿ ಬಲರಾಮ ಕೃಷ್ಣ ಬಾಗಲಕೋಟ(30) ಫೆಬ್ರುವರಿ 9 ರಂದು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬಿ.ಎಲ್.ಡಿ.ಇ ಆಸ್ಪತ್ರೆಯ ತುರ್ತು ಚಿಕಿತ್ಸೆ ಘಟಕದಲ್ಲಿ ದಾಖಲಾಗಿದ್ದರು. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಯುವಕನ ಸಂಬಂಧಿಕರಿಗೆ ತಿಳಿಸಿದರು.
ಅಲ್ಲದೇ, ಅವರ ಸಹೋದರಿಯರಾದ ಶೃತಿ ಹಳ್ಳದಮನಿ, ರೂಪಾ, ಸಹೋದರ ಪರಶುರಾಮ ಕೃಷ್ಣ ಬಾಗಲಕೋಟ, ಮಾವಂದಿರಾದ ಕಾಶೀನಾಥ ಹಾಗೂ ಶ್ರವಣಕುಮಾರ ಅವರಿಗೆ ಅಂಗಾಂಗ ದಾನದ ಮಹತ್ವ ವಿವರಿಸಿದರು.
ಅಲ್ಲದೇ, ಮಾನವೀಯತೆ ಆಧಾರದ ಮೇಲೆ ಬಲರಾಮ ಬಾಗಲಕೋಟ ಅವರ ಅಂಗಾಂಗಗಳನ್ನು ದಾನ ಮಾಡುವುದರಿಂದ ಈ ಅಂಗಾಂಗಗಳು ಅಗತ್ಯವಿರುವ ರೋಗಿಗಳಿಗೆ ಕಸಿ ಮಾಡಲು ಸಹಕರಿಸಲು ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಕುಟುಂಬ ಸದಸ್ಯರು ಒಪ್ಪಿಗೆ ಸೂಚಿಸಿದರು.
ಆಗ ವಿಜಯಪುರ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಜೀವ ಸಾರ್ಥಕತೆ ಅಡಿಯಲ್ಲಿ ನೋಂದಣಿ ಮಾಡಿದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗೆ ಬಲರಾಮ ಕೃಷ್ಣ ಬಾಗಲಕೋಟ ಅವರ ಒಂದು ಕಿಡ್ನಿ ಕಸಿ ಮಾಡಲು ನಿರ್ಧರಿಸಿದರು. ಮತ್ತೊಂದು ಕಿಡ್ನಿಯನ್ನು ಕಲಬುರಗಿಯ ರೋಗಿಯೊಬ್ಬರಿಗೆ ಕಸಿ ಮಾಡಲು ಕಳುಹಿಸಿಕೊಡಲು ನಿರ್ಧರಿಸಲಾಯಿತು.
ಅದರಂತೆ ಗುರುವಾರ ಬಲರಾಮ ಕೃಷ್ಣ ಬಾಗಲಕೋಟ ಅವರ ಅಂಗಾಂಗಳನ್ನು ಕಸಿಗಾಗಿ ತೆಗೆಯಲಾಯಿತು. ಒಂದು ಕಿಡ್ನಿಯನ್ನು ವಿಜಯಪುರದಿಂದ ಕಲಬುರಗಿ ವರೆಗೆ ಝೀರೋ ಟ್ರಾಫಿಕ್ನಲ್ಲಿ ಕಳುಹಿಸಿ ಕೊಡಲಾಯಿತು. ಅಲ್ಲದೇ, ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಇಂದು ಶುಕ್ರವಾರ ಬೆಳಗಿನ ಜಾವದವರೆಗೆ ಶಸ್ತ್ರಚಿಕಿತ್ಸೆ ನಡೆಸಿ ರೋಗಿಗೆ ಮತ್ತೊಂದು ಕಿಡ್ನಿಯನ್ನು ಕಸಿ ಮಾಡಲಾಯಿತು.
ಅಂಗಾಂಗಗಳನ್ನು ಬೇರ್ಪಡಿಸಿದ ಬಳಿಕ ಬಲರಾಮ ಕೃಷ್ಣ ಬಾಗಲಕೋಟ ಅವರ ಸಹೋದರಿಯರಾದ ಶೃತಿ ಹಳ್ಳದಮನಿ, ರೂಪಾ, ಸಹೋದರ ಪರಶುರಾಮ ಕೃಷ್ಣ ಬಾಗಲಕೋಟ, ಮಾವಂದಿರಾದ ಕಾಶೀನಾಥ ಹಾಗೂ ಶ್ರವಣಕುಮಾರ ಅವರಿಗೆ ಪಾರ್ಥಿವ ಶರೀರವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ರಾಜ್ಯದಲ್ಲಿ ಪ್ರಸ್ತುತ ಮೂತ್ರಪಿಂಡ ಕಸಿಗಾಗಿ 579 ರೋಗಿಗಳು, ಯಕೃತ ಚಿಕಿತ್ಸೆಗಾಗಿ 50, ಹೃದಯ ಕಸಿ ಚಿಕಿತ್ಸೆಗಾಗಿ ನೂರಾರು ರೋಗಿಗಳು, ಶ್ವಾಸಕೋಶ ಕಸಿ ಚಿಕಿತ್ಸೆಗಾಗಿ 43 ರೋಗಿಗಳು ಇತರ ಸಂಯೋಜಿತ ಕಸಿಗಾಗಿ 50 ಜನ ಸೇರಿದಂತೆ ಒಟ್ಟು 5905 ರೋಗಿಗಳು ನಾನಾ ಅಂಗಾಂಗ ಕಸಿಗಾಗಿ ನಿರೀಕ್ಷೆಯಲ್ಲಿದ್ದಾರೆ. ಬಲರಾಮ ಕೃಷ್ಣ ಬಾಗಲಕೋಟ ಅವರ ಎರಡು ಕಿಡ್ನಿಗಳು ಮತ್ತು ಎರಡು ಕಣ್ಣಿನ ಕಾರ್ನಿಯಾಗಳನ್ನು ಸಂಗ್ರಹಿಸಲಾಗಿದೆ. ಅವುಗಳಲ್ಲಿ ಒಂದು ಕಿಡ್ನಿಯನ್ನು ಕಲಬುರಗಿಯ ರೋಗಿಗೆ ಮತ್ತು ಇನ್ನೊಂದು ಕಿಡ್ನಿಯನ್ನು ಬಿ.ಎಲ್.ಡಿ.ಇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಎರಡು ಕಾರ್ನಿಯಾಗಳನ್ನು ಅಗತ್ಯವಿರುವ ರೋಗಿಗಳಿಗೆ ಕಸಿ ಮಾಡಲಾಗುವುದು ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯೆ ಡಾ. ತೇಜಶ್ವಿನಿ ವಲ್ಲಭ ಮಾತನಾಡಿ, ಬಲರಾಮ ಬಾಗಲಕೋಟ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ನಾನಾ ಅಂಗಾಂಗಗಳ ವೈಫಲ್ಯಕ್ಕೆ ತುತ್ತಾಗಿರುವ ರೋಗಿಗಳ ಬಾಳಿಗೆ ವರದಾನವಾಗಿದ್ದಾರೆ. ಅಷ್ಟೇ ಅಲ್ಲ, ಅವರ ಕುಟುಂಬಸ್ಥರು ನೋವಿನಲ್ಲೂ ಅಂಗಾಂಗ ದಾನ ಮಾಡಲು ಒಪ್ಪುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ತುರ್ತು ಚಿಕಿತ್ಸೆ ಘಟಕದ ಆಡಳಿತಾಧಿಕಾರಿ ಡಾ. ಶರಣಪ್ಪ ಕಟ್ಟಿ, ಫಾರೆನಿಸಿಕ್ ಮೆಡಿಸಿನ್ ತಜ್ಞ ಡಾ. ಉದಯಕುಮಾರ ನುಚ್ಚಿ, ಡಾ. ಸಂತೋಷ ಗಲಗಲಿ, ಡಾ. ಉಮೇಶ, ಡಾ. ಸಂತೋಷ ಪಾಟೀಲ, ಡಾ. ಸಂದೀಪ ಪಾಟೀಲ, ಡಾ. ಬಸವರಾಜ ಸಜ್ಜನ, ಅಂಗಾಂಗ ದಾನ ಆಪ್ತ ಸಮಾಲೋಚಕ ಶಾಂತೇಶ ಸಲಗರೆ, ನರ್ಸಿಂಗ್ ಸಿಬ್ಬಂದಿ, ಬಾಗಲಕೋಟ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಡಾ. ಎಸ್. ಬಿ. ಪಾಟೀಲ ನೇತೃತ್ವದಲ್ಲಿ ಡಾ. ದಿಲೀಪ ಜವಳಿ, ಡಾ. ವಿನಯ ಕುಂದರಗಿ, ಡಾ. ಸಂತೋಷ ಪಾಟೀಲ, ಡಾ. ಸಂತೋಷ ಅಲಾಲಮಠ, ಡಾ. ಮಂಜು ಪ್ರಸಾದ ಮುಂತಾದವರು ಪಾಲ್ಗೊಂಡಿದ್ದರು.
ಆಸ್ಪತ್ರೆ ವೈದ್ಯರ ಕಾರ್ಯವನ್ನು ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಶಕ್ಷ ಎಂ. ಬಿ. ಪಾಟೀಲ, ಡೀಮ್ಡ್ ವಿವಿ ಕುಲಾಧಿಪತಿ ಬಿ. ಎಂ. ಪಾಟೀಲ, ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಅರುಣ ಇನಾಮದಾರ, ಕುಲಸಚಿವ ಡಾ. ಆರ್. ವಿ. ಕುಲಕರ್ಣಿ ಶ್ಲಾಘಿಸಿದ್ದಾರೆ. ಅಲ್ಲದೇ, ಬಾಗಲಕೋಟ ಅವರ ಕುಟುಂಬ ಸದಸ್ಶರಿಗೆ ಸಂತಾಪ ಸೂಚಿಸಿದರು.
ಬಿಎಲ್ ಡಿಇ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಯಶಸ್ವಿ


