ರಾಜ್ಯದಲ್ಲಿ ದಲಿತ ವ್ಯಕ್ತಿ ಸಿಎಂ ಆಗಬೇಕೆಂಬ ಧ್ವನಿ ನಿರಂತರವಾಗಿ ಎತ್ತುತ್ತೇನೆ- ಸಂಸದ ಜಿಗಜಿಣಗಿ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 14:
ರಾಜ್ಯದಲ್ಲಿ ದಲಿತ ಸಮಾಜಕ್ಕೆ ಸೇರಿದ ವ್ಯಕ್ತಿ ಸಿಎಂ ಆಗಬೇಕು ಎಂಬ ವಿಚಾರದ ಬಗ್ಗೆ ನಾನು ಕೊನೆಯವರೆಗೂ ಧ್ವನಿ ಎತ್ತುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ವಿಜಯೇಂದ್ರ ಸೇರಿದಂತೆ ಯಾರೇ ಸಿಎಂ ಆದರೂ ನನಗೆ ಅಸಮಾಧಾನವಿಲ್ಲ.
ಆದರೆ ದಲಿತರು ಸಿಎಂ ಆಗಬೇಕೆಂಬ ಧ್ವನಿಯನ್ನು ಕೊನೆಯವರೆಗೂ ಎತ್ತುತ್ತೇನೆ ಎಂದರು.
ನಾನೇ ಸಿಎಂ ಆಗಬೇಕೆಂಬುದಿಲ್ಲ. ಯಾರೇ ದಲಿತ ನಾಯಕ ಸಿಎಂ ಆಗಲಿ ಎಂಬುದು ನನ್ನ ಆಸೆ. ದಲಿತರನ್ನು ಸಿಎಂ ಮಾಡುತ್ತಾರೋ ಇಲ್ಲವೋ ಎಂಬುದು ಪಕ್ಷಕ್ಕೆ ಬಿಟ್ಟಿದ್ದು. ಇತರೆ ರಾಜ್ಯಗಳಲ್ಲಿ ದಲಿತ ಸಮುದಾಯದವರು ಸಿಎಂ ಆಗಿದ್ದಾರೆ. ಹಾಗೇ ರಾಜ್ಯದಲ್ಲೂ ದಲಿತ ವ್ಯಕ್ತಿ ಸಿಎಂ ಆಗಲಿ ಎಂದರು.
ದೇವರು ನನಗೆ ಜೀವನದಲ್ಲಿ ಎಲ್ಲವೂ ಕೊಟ್ಟಿದ್ದಾನೆ. ಯಾರ ಬಳಿಯೂ ಕೈಯೊಡ್ಡದೇ ಲಕ್ಷಾಂತರ ಹಣ ಆಸ್ತಿ ಕೊಟ್ಟಿದ್ದಾನೆ. ನಾನು ಕೇಂದ್ರದಲ್ಲಿ ಸಚಿವನಾಗಿದ್ದೇನೆ. ರಾಜ್ಯದಲ್ಲಿ 19 ವರ್ಷ ಮಂತ್ರಿಯಾಗಿದ್ದೇನೆ. 45 ವರ್ಷ ಕಾಲ ರಾಜಕಾರಣ ಮಾಡಿದ್ದೇನೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬೇರೆ ಬೇರೆ ಪಕ್ಷಗಳಿಂದ ಮೂರು ಬಾರಿ ಸಂಸದನಾಗಿದ್ದೇನೆ ಎಂದು ಹೇಳಿದರು.
ನಾನು ವೈಯುಕ್ತಿಕವಾಗಿ ಏನೂ ಬೇಡಲ್ಲ. ಸಮಾಜಕ್ಕಾಗಿ ಕೇಳುತ್ತೇನೆ. ಸಿಎಂ ಮಾಡುವುದು, ಬಿಡುವುದು ನಮ್ಮ ಪಕ್ಷದವರಿಗೆ ಬಿಟ್ಟಿದ್ದು. ನಾನು ನನ್ನ ಅಭಿಪ್ರಾಯ ಮಾತ್ರ ಹೇಳುತ್ತೇನೆ ಎಂದರು.

Share this