ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 15:
ನಾಡಿನ ಅಭಿವೃದ್ಧಿಗೆ ಮಠಮಾನ್ಯಗಳೂ ಅಪಾರ ಕೊಡುಗೆ ನೀಡುತ್ತಿವೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ರವಿವಾರ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಶ್ರೀ ಮುಕ್ತಂಕಾರೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪವಾಡಗಳ ಮೂಲಕ ಹೆಸರಾಗಿದ್ದ ಮುಕ್ತಂಕಾರರ ಆಶೀರ್ವಾದದಿಂದ ಇಲ್ಲಿ ಸಮೃದ್ಧಿ ನೆಲೆಸಿದೆ. ಶ್ರದ್ಧೆ ಭಕ್ತಿಯಿಂದ ಕಾರ್ಯಕ್ರಮದಲ್ಲಿ ಸಮಸ್ತ ಗ್ರಾಮಸ್ಥರು ಪಾಲ್ಗೊಂಡಿದ್ದಾರೆ. ನಾನೂ ಭಾಗಿಯಾಗಿದ್ದು ಸಂತಸ ತಂದಿದೆ. ದೇಶದ ಪರಂಪರೆ, ಸಂಸ್ಕೃತಿಗೆ ಮಠಗಳ ಕೊಡುಗೆ ಅಪಾರ. ಮಠಗಳು ಧರ್ಮ ಜಾಗೃತಿ, ದಾಸೋಹ, ಶಿಕ್ಷಣ ಸೇವೆಯ ಮೂಲಕ ಅಪಾರ ಕೊಡುಗೆ ನೀಡುತ್ತಿವೆ. ಆದ್ದರಿಂದ ಮಠಗಳ ಬಗ್ಗೆ ನಮ್ಮಲ್ಲಿ ಇಂದಿಗೂ ಭಕ್ತಿ ಮತ್ತು ಶ್ರದ್ಧೆ ಉಳಿದಿದೆ. ಮಠಮಾನ್ಯಗಳು ಸನ್ಮಾರ್ಗ ತೋರುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿವೆ. ಮುಕ್ತಂಕಾರರ ಆಶೀರ್ವಾದದಿಂದ ಎಲ್ಲೆಡೆ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿ, ರೈತರಿಗೆ ಉತ್ತಮ ಬೆಳೆ, ಬೆಳೆಗೆ ಉತ್ತಮ ಬೆಲೆ ಸಿಗುವಂತಾಗಲಿ. ಅವರ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ. ನಮ್ಮ ತಂದೆಯವರ ಕಾಲದಿಂದಲೂ ನಾವು ಕೂಡ ಮಠದ ಭಕ್ತರಾಗಿದ್ದೇವೆ ಎಂದು ಅವರು ಹೇಳಿದರು.
ವಿಧಾನ ಪರಿಷತ ಶಾಸಕ ಹನಮಂತ ನಿರಾಣಿ ಮಾತನಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮಠಗಳು ಕೊಡುಗೆ ನೀಡಿವೆ. ಹಿರಿಯರು ಪ್ರಾರಂಭಿಸಿದ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಸಚಿವ ಎಂ. ಬಿ. ಪಾಟೀಲ ಅವರು ಈ ಭಾಗದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ನಮ್ಮ ಕುಟುಂಬಕ್ಕೂ ಕೋಟ್ಯಾಳ ಗ್ರಾಮಕ್ಕೆ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು.
ಮನಗೂಳಿ ಸಂಸ್ಥಾನ ಹಿರೇಮಠದ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಸರ್ವರೊಂದಿಗೆ ಸಾಮರಸ್ಯದಿಂದ ಬದುಕಬೇಕು. ದಾನಧರ್ಮ ಮಾಡಬೇಕು. ಸಚಿವ ಎಂ. ಬಿ. ಪಾಟೀಲರು ಮಠಗಳ ಬಗ್ಗೆ ಅಪಾರ ಭಕ್ತಿ ಹೊಂದಿದ್ದಾರೆ. ಜಲಸಂಪನ್ಮೂಲರಾಗಿ ನೀರಾವರಿ ರೈತರ ಬದುಕು ಹಸನಾಗಿಸಿದ್ದಾರೆ. ಅವರ ಮೇಲೆ ಪ್ರೀತಿ, ವಿಶ್ವಾಸ ಇಡಬೇಕು. ಅವರ ಕೆಲಸ ಕಾರ್ಯಗಳಿಗೆ ಬೆಂಬಲ ನೀಡಬೇಕು. ಮಕ್ಕಳಿಗೆ ಶಿಕ್ಣದ ಜೊತೆಗೆ ಸಂಸ್ಕಾರ ನೀಡಬೇಕು. ಜಾತಿಭೇದ ಮಾಡದೇ ಪ್ರೀತಿಯಿಂದ ಬದುಕಬೇಕು ಎಂದು ಹೇಳಿದರು.
ಸಾಲೋಟಗಿಯ ಶ್ರೀ ಸಂಗಮೇಶ್ವರ ಸ್ವಾಮೀಜಿ ಮಾತನಾಡಿ, ಅಹಂಕಾರದಿಂದ ಮುಕ್ತರಾದವರು ಮುಕ್ತಂಕಾರರು. ಭಕ್ತರೆಲ್ಲರೂ ಸೇರಿ ಅವರದೇ ರೀತಿಯಲ್ಲಿ ಸೇವೆ ಮಾಡುವ ಮೂಲಕ ದೇವರ ಪ್ರೀತಿಗೆ ಪ್ರಾಪ್ತರಾಗಿದ್ದಾರೆ. ಸಚಿವ ಎಂ. ಬಿ. ಪಾಟೀಲ ಅವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳಿಗೆ ತಕ್ಕ ಶಿಷ್ಯರಾಗಿದ್ದಾರೆ. ಸ್ವಾಮೀಜಿಗಳು ಹೇಳಿದಂತೆ ನೀರಾವರಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೋಟ್ಯಾಳ ಮುಕ್ತಂಕಾರ ಮಠದ ಶ್ರೀ ಕಾಶೀನಾಥ ಅಪ್ಪನವರು, ತಿಕೋಟಾ ಹಿರೇಮಠದ ಶ್ರೀ ಶಿವಬಸವ ಶಿವಾಚಾರ್ಯರು, ವಿರಕ್ತಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಕೊಲ್ಹಾರದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಪಟ್ಟದ ದೇವರು, ದೇವರ ಹಿಪ್ಪರಗಿಯ ಶ್ರೀ ಅವೂಗೇಶ್ವರ ತಪೋಧ್ಯಾಮ ಪರದೇಶಿ ಮಠದ ಶ್ರೀ ಶಿವಯೋಗಿ ಮಹಾಸ್ವಾಮಿಗಳು, ಕೋಟ್ಯಾಳದ ಶ್ರೀ ಮಹೇಶ ಮಳಯ್ಯ ಹಿರೇಮಠ, ಶಿವಾನಂದ ಹಿರೇಮಠ, ಮುಖಂಡರಾದ ಭೀಮನಗೌಡ ಪಾಟೀಲ, ಡಾ. ಗಜಾನನ ಮಹಿಶಾಳೆ, ನೀಲಕಂಠ ಅಳ್ಳೊಳ್ಳಿ, ಪರಗೊಂಡ ರಾಮತೀರ್ಥ, ಬಾಬು ಗದ್ಯಾಳ, ರಾವಸಾಬ ಹೊಸಮನಿ, ಮಲ್ಲನಗೌಡ ಪಾಟೀಲ ಸೇರಿದಂತೆ ನಾನಾ ಮುಖಂಡರು, ಹಿರಿಯರು, ಮಹಿಳೆಯರು, ಯುವಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
ನಾಡಿನ ಅಭಿವೃದ್ಧಿಗೆ ಮಠ ಮಾನ್ಯಗಳ ಪಾತ್ರ ಅನನ್ಯ


