ಮನುಷ್ಯನಿಗೆ ಮುಪ್ಪು ಎಂಬುದು ಮರುಬಾಲ್ಯ ಇದ್ದಂತೆ: ಡಾ. ಎಚ್.ಕೆ. ಯಡಹಳ್ಳಿ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 16:
ಮನುಷ್ಯನ ಜೀವನದಲ್ಲಿ ಬಾಲ್ಯ, ಯೌವ್ವನ, ಮಧ್ಯ ವಯಸ್ಸು ಹಾಗೂ ಮುಪ್ಪು ಸಹಜವಾಗಿ ಬರುವಂತಹವುಗಳು.
ಬಾಲ್ಯವನ್ನು ಹಿರಿಯರ ಪ್ರೀತಿಯೊಂದಿಗೆ, ಯೌವನವನ್ನು ಹುಮ್ಮಸ್ಸಿನೊಂದಿಗೆ ,ಮಧ್ಯ ವಯಸ್ಸನ್ನು ಮಕ್ಕಳು ಹಾಗೂ ಬಂಧು ಬಾಂಧವರ ಜೊತೆಗೆ ಕಳೆಯುತ್ತೇವೆ. ಆದರೆ ಮುಪ್ಪಾವಸ್ಥೆಯಲ್ಲಿ ಮರೆವು, ದೈಹಿಕವಾದ ನ್ಯೂನ್ಯತೆಗಳ ಮಧ್ಯದಲ್ಲಿ ಬದುಕುತ್ತಾ ನಿರ್ಲಕ್ಷಕ್ಕೆ ಒಳಗಾಗುವುದನ್ನು ಕಾಣುತ್ತೇವೆ. ಇದರತ್ತ ನಮ್ಮ ಯುವ ಜನತೆ ಗಮನಿಸಿ, ತಮ್ಮ ಹಿರಿಯರನ್ನು ಪ್ರೀತಿಯ ಆರೈಕೆಯೊಂದಿಗೆ ನೋಡಿಕೊಳ್ಳಬೇಕು. ಏಕೆಂದರೆ ಮನುಷ್ಯನಿಗೆ ಮುಪ್ಪು ಎಂಬುದು ಮರು ಬಾಲ್ಯ ಇದ್ದಂತೆ ಎಂದು ಸಿಕ್ಯಾಬ್ ಪದವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಚ್ .ಕೆ .ಯಡಹಳ್ಳಿ ಇಂದಿಲ್ಲಿ ಅಭಿಪ್ರಾಯಪಟ್ಟರು .
ನಗರದ ಆಶ್ರಮ ರಸ್ತೆಯ ಐಶ್ವರ್ಯ ಬಡಾವಣೆಯ ವರದಾಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಂಡ 551ನೇ ಮಹಾಸತ್ಸಂಗ ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಮುಪ್ಪಾವಸ್ಥೆಯಲ್ಲಿ ಮರೆವು, ಕೈಕಾಲು ನಡುಗುವಿಕೆ, ಶ್ರವಣ ಹಾಗೂ ದೃಷ್ಟಿ ನ್ಯೂನ್ಯತೆ ವಯೋ ಸಹಜವಾಗಿ ಬರುತ್ತವೆ. ಈ ಕಾರಣ ಅವರಿಗೆ ಆಗಾಗ ಚಿಕಿತ್ಸೆ ಅಗತ್ಯವಾಗಿರುತ್ತದೆ. ಇದನ್ನು ಅವರ ಮಕ್ಕಳು ಬಾಂಧವರು ನಿರ್ವಹಿಸಿ ಹಿರಿಯರ ಬದುಕನ್ನು ಸುಂದರಗೊಳಿಸಲು ಕಲಿಯಬೇಕು ಎಂದರು.
ಹಿರಿಯರು ಕಿರಿಯರಿಂದ ಸೇವೆಯನ್ನು ಅಪೇಕ್ಷಿಸುತ್ತಾರೆ. ಅವರಿಗೆ ಒಂಟಿತನ ಕಾಡುತ್ತದೆ. ನಮ್ಮ ಪ್ರೀತಿಯ ಮಾತು, ಸಾಂತ್ವನದ ನುಡಿಗಳನ್ನು ಹೇಳುತ್ತಾ ಅವರ ಮುಪ್ಪಾವಸ್ಥೆಯನ್ನು ಹಾಗೂ ಒಂಟಿತನವನ್ನು ಮರೆ ಮಾಡಬೇಕೆಂದು ಸಲಹೆ ನೀಡುತ್ತಾ ಹಲವು ದೃಷ್ಟಾಂತಗಳನ್ನು ತಿಳಿಸಿದರು.
ಇನ್ನೋರ್ವ ಅತಿಥಿ ಧೃವ ಕುಲಕರ್ಣಿ ಅವರು ಮಾತನಾಡಿ, ಶಿವರಾತ್ರಿಯ ಮಹತ್ವವನ್ನು, ಆಚರಣೆಯ ಪದ್ಧತಿಗಳನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿವೃತ್ತ ಲೆಕ್ಕಾಧಿಕಾರಿ ಎಸ್.ಬಿ. ಭೂಯ್ಯಾರ ಅವರು ಮಾತನಾಡಿ, ಇಂದಿನ ಕಾಲದಲ್ಲಿ ಅನೇಕರು ಹಿರಿಯರನ್ನು ಕಡೆಗಣಿಸುತ್ತಿದ್ದಾರೆ. ಇದರಿಂದಾಗಿ ವೃದ್ಧಾಶ್ರಮಗಳು ತಲೆ ಎತ್ತುತ್ತಿವೆ. ಇದು ನಮ್ಮ ಸಂಸ್ಕೃತಿಯಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಭಕ್ತಿ ಸೇವೆಯನ್ನು ನೆರವೇರಿಸಿದ ಪ್ರಥಮ ದರ್ಜೆ ಗುತ್ತಿಗೆದಾರ ಹನುಮಂತ ಚಿಂಚಲಿ ಮಾತನಾಡಿ, ಹಿರಿಯರಿಗೆ ನಾವು ಆಸರೆಯಾಗಿ ನಡೆಯಬೇಕು. ಅವರ ಬೇಡಿಕೆಗಳನ್ನು ಪೂರೈಸಬೇಕು. ಅವರ ಆಶೀರ್ವಾದದ ಫಲದಿಂದ ನಾವು ಇಂದು ಬದುಕನ್ನು ನಡೆಸುತ್ತಿದ್ದೇವೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸಾಹಿತಿಗಳಾದ
ಡಾ. ಮಲ್ಲಿಕಾರ್ಜುನ ಮೇತ್ರಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು
ಹೇಳಿದರು.
ವಿಶ್ರಾಂತ ಪ್ರಾಚಾರ್ಯ ಎಂ.ಓ. ಶಿರೂರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಆರಂಭದಲ್ಲಿ ಪ್ರಾರ್ಥನಾ ಗೀತೆಯನ್ನು ಸುನೀತಾ ಬಿರಾದಾರ ಹಾಡಿದರು.
ಸಮಾರಂಭದಲ್ಲಿ ಮಾರುತಿ ದೇವಸ್ಥಾನದ ಅರ್ಚಕ ಮಲ್ಲಯ್ಯ ಸ್ವಾಮಿ ಹಿರೇಮಠ, ಮಾರುತಿ ಸೇವಾ ಸಮಿತಿ ಅಧ್ಯಕ್ಷ ಬಿ.ಎನ್. ಬಿರಾದಾರ, ಎಸ್.ಕೆ. ಬಿರಾದಾರ, ಎಂ .ಕೆ. ಬಿಸನಾಳ, ಚಂದ್ರಶೇಖರ ಸರಸಂಬಿ, ನಾನಾಗೌಡ ಪಾಟೀಲ, ವಿವೇಕ ಹುಂಡೆಕಾರ, ಬಿ.ವಿ. ಪಾಟೀಲ, ಜಿ .ಬಿ .ಪಟ್ನದ, ಬಸವರಾಜ ಕಣಬೂರ, ರಾಜಣ್ಣ ಜಕ್ಕೊಂಡಿ, ಮಧು ಕಲಾದಗಿ, ಅಶೋಕ ದೇಶಟ್ಟಿ, ಪಾಯಣ್ಣ ಪಡಸಲಗಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Share this