ಬಿಜೆಪಿ ಜತೆಗೆ ಜೆಡಿಎಸ್ ವಿಲೀನ ಸಾಧ್ಯವಿಲ್ಲ: ನಿಖಿಲ್

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 16: ನಮ್ಮ ಶಕ್ತಿ ಬಿಜೆಪಿಗೆ ಧಾರೆ ಎರೆದಿದ್ದೇವೆ. ಬಿಜೆಪಿ ಶಕ್ತಿ ನಮಗೆ ಧಾರೆ ಎರೆದಿದ್ದಾರೆ. ಭ್ರಷ್ಟ ಕಾಂಗ್ರೆಸ್ ವಿರುದ್ಧ ಒಗ್ಗಟ್ಟಾಗಿ ಹೋರಾಡುತ್ತಿದ್ದೇವೆ. ಹೀಗಾಗಿ ಎರಡು ಪಕ್ಷ ವಿಲೀನ ಆಗುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಮೈತ್ರಿಯ ವಿಮಾನ ಹತ್ತಿದ್ದೇವೆ. ಅದು ಟರ್ಬ್ಯೂಲೆನ್ಸ್ ಆಗುವುದು ಸಹಜ. ಮಧ್ಯದಲ್ಲಿ ಕೆಲವು ಪ್ರಯಾಣಿಕರು ಇಳಿಯುವಂತೆ ಹೇಳಿದರೆ ಅದು ಸಾಧ್ಯವಾಗದು. ಇನ್ನೂ ಜೆಡಿಎಸ್ ಸೈದ್ಧಾಂತಿಕವಾಗಿ ರಾಜಿಯಾಗಿಲ್ಲ. ಸೆಕ್ಯೂಲರಿಸಂ ನಮ್ಮ ಹೃದಯಲ್ಲಿದೆ ಎಂದರು.
ಕೆಲವೊಂದು ಅಸಮಾಧಾನ ಬರಬಹುದು
ಅದನ್ನು ವರಿಷ್ಠರು ಸಮಾಧಾನ ಮಾಡುತ್ತಾರೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದ್ದರೂ ಸಹ ಅದನ್ನು ಅವರು ಸರಿ ಪಡಿಸುತ್ತಾರೆ ಎಂದರು. ಸೈದ್ಧಾಂತಿಕವಾಗಿ ನಾವು ಎಂದೂ ಬದಲಾಗಿಲ್ಲ, ಬಿಜೆಪಿ ಜೊತೆ ಕೈ ಜೋಡಿಸಿದ ಮಾತ್ರಕ್ಕೆ ಸೆಕ್ಯೂಲರಿಸಂ ಕೈ ಬಿಟ್ಟಿಲ್ಲ ಎಂದರು.
ಸಿದ್ಧರಾಮಯ್ಯ ಅವರನ್ನು ದೇವೆಗೌಡರು ಅಂದು ಉಪ ಮುಖ್ಯಮಂತ್ರಿ ಮಾಡದೇ ಹೋಗಿದ್ದರೆ ಅವರು ಇಂದು ಮುಖ್ಯಮಂತ್ರಿಯಾಗಿರಲು ಸಾಧ್ಯವಾಗುತ್ತಿರಲಿಲ್ಲ. ಸರ್ವ ಜನಾಂಗಕ್ಕೂ ರಾಜಕೀಯ ಶಕ್ತಿ ತುಂಬಿದ್ದು ಜೆಡಿಎಸ್ ಎಂದರು.
ರಾಜ್ಯದಲ್ಲಿರುವ ಹಾಲಿ ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದಲ್ಲಿರುವ ಶೇ.30 ರಷ್ಟು ಸಚಿವರೆಲ್ಲರೂ ಜನತಾ ದಳದ ಪ್ರಾಡೆಕ್ಟ್ಗಳೇ, ಜನತಾ ದಳ ನಾಯಕರನ್ನು ರೂಪಿಸುವ ಕಾರ್ಖಾನೆ, ಜೆಡಿಎಸ್ ಇನ್ನೂ ಸಶಕ್ತವಾಗಿದೆ, ಸಧೃಡವಾಗಿದೆ. ಕಾರ್ಯಕರ್ತರಲ್ಲಿಯೂ ಪಕ್ಷದ ಬಗ್ಗೆ ಅಚಲವಾದ ವಿಶ್ವಾಸವಿದೆ.
ಹಳೇ ಮೈಸೂರು ಪ್ರಾಂತ್ಯದಲ್ಲಿ ನಮ್ಮ ಪ್ರಾಬಲ್ಯವಿದೆ. ಮಧ್ಯ ಕರ್ನಾಟಕ, ಕಿತ್ತೂರ ಕರ್ನಾಟಕದಲ್ಲಿಯೂ ಜೆಡಿಎಸ್ ಶಕ್ತಿ ಪ್ರಬಲವಾಗಿದೆ. ಜೆಡಿಎಸ್ ಹಳೆ ಮೈಸೂರು ಪ್ರಾಂತ್ಯದ ಪಾರ್ಟಿ ಎಂಬುದು ತಪ್ಪು ಕಲ್ಪನೆ ಎಂದರು.
9 ಸಾವಿರ ಕಿ.ಮೀ. ರಾಜ್ಯ ಪ್ರವಾಸ ಮಾಡಿರುವೆ. 54ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರ ಸಂಚರಿಸಿದ್ದೇನೆ. ಶಾಸಕನಾಗಬೇಕು. ಸಂಸದನಾಗಬೇಕು ಎಂಬ ಯಾವ ಗುರಿ ಇಲ್ಲ. ಪಕ್ಷ ಸಂಘಟನೆಯೇ ನನ್ನ ಗುರಿ ಎಂದರು.

ಸಾಲವೇ ಸರ್ಕಾರದ ಸಾಧನೆ
ಆಡಳಿತಾರೂಢ ಸರ್ಕಾರ ಸಾಲದ ಹೊರೆಯನ್ನು ಜನಸಾಮಾನ್ಯರಿಗೆ ಹೊರೆಸುತ್ತಿದ್ದು, ಪ್ರತಿ ವರ್ಷ ಒಂದೂವರೆ ಲಕ್ಷ ಕೋಟಿ ರೂ. ಅಂದರೆ ದಿನಕ್ಕೆ 300 ಕೋಟಿ ರೂ. ಸಾಲ ಮಾಡುತ್ತಿದೆ. ಪ್ರತಿ ನಿತ್ಯ ಕುರ್ಚಿ ಕಚ್ಚಾಟ, ಶಾಸಕರ ಬಲದೊಂದಿಗೆ ಶಕ್ತಿ ಪ್ರದರ್ಶನದಲ್ಲಿಯೇ ಸರ್ಕಾರ ಕಾಲಹರಣ ಮಾಡುತ್ತಿದ್ದು, ಜನರ ಬೆವರಿನ ರೂಪದ ತೆರಿಗೆ ಹಣ ಪೋಲಾಗುತ್ತಿದೆ. ಸಾಲವನ್ನು ಹೊರೆಸಿದ್ದೇ ಸರ್ಕಾರದ ದೊಡ್ಡ ಕೊಡುಗೆ ಹಾಗೂ ಸಾಧನೆ ಎಂದು ನಿಖಿಲ್ ಹೇಳಿದರು.

ಫೆ..೨೭ ರಂದು ಕಿತ್ತೂರ ಕರ್ನಾಟಕ ಜಿಲ್ಲೆಗಳ ಸಮಾವೇಶ
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿಯೇ ಜೆಡಿಎಸ್ ಪಕ್ಷ 25 ವಸಂತಗಳನ್ನು ಪೂರ್ಣಗೊಳಿಸಿರುವುದು ಗಮನಾರ್ಹ ದಾಖಲೆಯೇ. ಹೀಗಾಗಿ ಪಕ್ಷದ ಬೆಳ್ಳಿ ಮಹೋತ್ಸವವನ್ನು ಎಲ್ಲೆಡೆ ಆಚರಣೆ ಮಾಡುವುದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೆಗೌಡ ಅವರ ಸದಾಶಯವಾಗಿದೆ. ಈ ಸದಾಶಯದ ಭಾಗವಾಗಿ ಎಲ್ಲ ಕಡೆ ಸಮಾವೇಶ, ಕಾರ್ಯಕರ್ತರ ಸಭೆ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳನ್ನು ಸಂಘಟಿಸಲಾಗುತ್ತಿದೆ. ಇದರ ಭಾಗವಾಗಿ ವಿಜಯಪುರದಲ್ಲಿ ಇದೇ ಫೆ.27 ರಂದು ಕಿತ್ತೂರ ಕರ್ನಾಟಕ ವಿಭಾಗದ ಜೆಡಿಎಸ್ ಬೃಹತ್ ಸಮಾವೇಶ ಸಂಘಟಿಸಲಾಗಿದ್ದು, ಸಿಂದಗಿ ಬೈಪಾಸ್ ಬಳಿ ಬೃಹತ್ ಮೈದಾನದಲ್ಲಿ ಈ ಬೃಹತ್ ಸಮಾವೇಶ ನಡೆಯಲಿದ್ದು, ಸಕಲ ಸಿದ್ಧತೆಗಳನ್ನು ಭರದಿಂದ ಕೈಗೊಳ್ಳಲಾಗುತ್ತಿದೆ ಎಂದರು.
1 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಹಲವಾರು ಮಾಜಿ ಸಚಿವರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಮಾಜಿ ಸಚಿವ ವೆಂಕಟರಾವ ನಾಡಗೌಡ, ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ಡಾ.ದೇವಾನಂದ ಚವ್ಹಾಣ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಮುಖಂಡರಾದ ಅಪ್ಪುಗೌಡ ಪಾಟೀಲ ಮನಗೂಳಿ, ಎಸ್.ವಿ. ಪಾಟೀಲ ಸಿಂದಗಿ, ಬಿ.ಡಿ. ಪಾಟೀಲ ಹಂಜಗಿ, ಹನುಮಂತಪ್ಪ ಮಾವಿನಮರದ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share this