ಛಲ,ಬಲದಿಂದ ಶಿಕ್ಷಣ ಪಡೆದಾಗ ಬದುಕು ಸಾರ್ಥಕ: ಡಾ. ಮಲ್ಲಿಕಾರ್ಜುನ ಮೇತ್ರಿ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ.18: ಜೀವನದಲ್ಲಿ ಆತ್ಮ ಬಲವನ್ನು ಹೊಂದಿ, ಛಲ ಬಲದಿಂದ ಶಿಕ್ಷಣ ಪಡೆದು ಶ್ರೇಷ್ಠತೆ ಸಾಧಿಸಿದರೆ ಬದುಕು ಸಾರ್ಥಕವಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆಯಾಗಿ ಗಣಿತಶಾಸ್ತ್ರದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಭಾರತಿ ಗಂಗಾಧರ ಜೋಗೂರ ಅವರು ನಿಲ್ಲುತ್ತಾರೆ. ಆದರ್ಶಮಯ ದಾಂಪತ್ಯ ಹೊಂದಿದ ಇವರು ಮೂರು ಮಕ್ಕಳನ್ನು ಪಡೆದ ನಂತರ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪೂರೈಸಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವುದು ಮಹಿಳಾ ಸಂಕುಲಕ್ಕೆ ಮಾರ್ಗದರ್ಶನವಾಗಿದೆ ಎಂದು ಡಾ. ಮಲ್ಲಿಕಾರ್ಜುನ ಮೇತ್ರಿ ತಿಳಿಸಿದರು.
ನಗರದ ಅಥಣಿ ರಸ್ತೆಯ
ಸಾಯಿ ಗಾರ್ಡನ್ ದಲ್ಲಿ ಹಮ್ಮಿಕೊಂಡ ಗಂಗಾಧರ ಜೋಗೂರ ಹಾಗೂ ಪ್ರೊ.ಭಾರತಿ ಜೋಗೂರ ದಂಪತಿಗಳ ವಿವಾಹ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪ್ರೊ.ಭಾರತಿ ಹೊಕ್ರಾಣಿ ಅವರು ಬರೆದ ‘ಬಾಳು ಬಂಗಾರ’ ಕೃತಿಯನ್ನು ಪರಿಚಯಿಸುತ್ತ ಮಾತನಾಡುತ್ತಿದ್ದರು.
ವಿಜಯಪುರದ ಗಣ್ಯ ವ್ಯಾಪಾರಸ್ಥರ ಕುಟುಂಬದ ಸದಸ್ಯರಾದ
ಈ ದಂಪತಿಗಳ ಬದುಕಿನ ಕಥೆಯ ಹೆಜ್ಜೆಗಳು ಕೃತಿಯಲ್ಲಿ ನಿರೂಪಣೆಗೊಂಡಿವೆ. ಒಬ್ಬ ಮಹಿಳೆ ಮನಸ್ಸು ಮಾಡಿದರೆ ಏನೆಲ್ಲ ಸಾಧನೆ ಮಾಡಲು ಸಾಧ್ಯವಿದೆ, ಎಂಬುದನ್ನು ಈ ಕೃತಿ ತಿಳಿಸುತ್ತದೆ. ಜೋಗೂರ ಹಾಗೂ ಹೊಕ್ರಾಣಿ ಮನೆತನದ ಇತಿಹಾಸದೊಂದಿಗೆ ಲೇಖಕರ ಜೀವನದ ಕಥನವನ್ನು ಈ ಕೃತಿ ಒಳಗೊಂಡಿದೆ ಎಂದು ತಿಳಿಸಿದರು .
ಕಾರ್ಯಕ್ರಮದ ಸಾನ್ನಿಧ್ಯವನ್ನು ಸಿಂದಗಿಯ ಸಾರಂಗಮಠದ
ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಉತ್ತರಾಧಿಕಾರಿಗಳಾದ ಡಾ. ವಿಶ್ವ ಪ್ರಭುದೇವ ಶಿವಾಚಾರ್ಯರು, ವಿಜಯಪುರದ ಷಣ್ಮುಖಾರೂಢ ಮಠದ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ವಹಿಸಿದ್ದರು.
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಹಿರಿಯರಾದ ಡಾ.ಎಂ.ಎಂ. ಪಡಶೆಟ್ಟಿ ಅವರು ಮಾತನಾಡಿ, ಜೋಗೂರ ಮನೆತನದ ಹಿರಿಯರು ವ್ಯಾಪಾರಸ್ಥರಾಗಿದ್ದರು. ಶಿಕ್ಷಣ ಹಾಗೂ ಸಾಹಿತ್ಯ ಪ್ರೇಮಿಗಳಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ವೀರೇಶ
ವಾಲಿ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಸಿಂದಗಿಯ ಪ್ರೊ. ರವಿ ಗೋಲಾ ಕಾರ್ಯಕ್ರಮ ನಿರೂಪಿಸಿದರು .
ಸಾಕ್ಷ್ಯಚಿತ್ರ ನಿರ್ಮಾಣಕಾರ ಎಂ.ಬಿ. ಕಟ್ಟಿಮನಿಯವರು ವಂದಿಸಿದರು.
ಅದ್ದೂರಿಯಾಗಿ ನಡೆದ ಈ ಸಮಾರಂಭದಲ್ಲಿ ನಗರದ ಗಣ್ಯರು, ಪ್ರಮುಖ ವ್ಯಾಪಾರಸ್ಥರು, ಬಂಧು ಬಾಂಧವರು, ಸಾಹಿತಿಗಳು, ಕಲಾವಿದರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Share this