ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 18:
ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಅಮೃತ ಯೋಜನೆಯಡಿ ಜಿ.ಐ.ಎಸ್ ಆಧಾರಿತ ಮಹಾ ಯೋಜನೆ-2041-(ಪ-3),ಸರಕಾರದ ಆದೇಶದಂತೆ ತಾತ್ಕಾಲಿಕ ಅನುಮೋದನೆಯಾಗಿದೆ.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 13(1) ರಂತೆ ಸಾರ್ವಜನಿಕರಿಂದ ಸಲಹೆ-ಸೂಚನೆ ಹಾಗೂ ಆಕ್ಷೇಪಣೆಗಳ ಸಲ್ಲಿಸುವ ಹಿನ್ನೆಲೆಯಲ್ಲಿ 16-01-2026 ರಂದು ಪ್ರಾಧಿಕಾರದ ಕಚೇರಿ, ಪತ್ರಿಕೆಗಳಲ್ಲಿ, ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆ ಹೊರಡಿಸಲಾಗಿದೆ.
ಈ ಕುರಿತಾಗಿ ನಗರದ ವೃತ್ತಿಪರ ಅಭಿಯಂತರರು, ವಾಸ್ತು ಶಿಲ್ಪಿಗಳು, ಕ್ರೇಡಾಯ್ ಹಾಗೂ ಇತರೆ ಸಂಸ್ಥೆಗಳೊಂದಿಗೆ ಪೂರ್ವಭಾವಿ ಸಭೆಯು ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಎಸ್ ಸಂಬಣ್ಣಿ ಅವರ ಅಧ್ಯಕ್ಷತೆಯಲ್ಲಿ ಫೆ.16ರಂದು ಪ್ರಾಧಿಕಾರದ ಕಚೇರಿಯಲ್ಲಿ ನಡೆಯಿತು.
ತಾತ್ಕಾಲಿಕ ಮಹಾ ಯೋಜನೆಯ ವಲಯ ನಿಯಮಾವಳಿಯಲ್ಲಿ ವಿವಿಧ ವಲಯದಲ್ಲಿನ ಬೆಳವಣಿಗೆಗಳ ಹಾಗೂ ವಿಶೇಷ ಸಂದರ್ಭಗಳ ಅವಕಾಶಗಳು, ನಡುಜಾಗೆಗಳು, ಕಟ್ಟಡಗಳ ಆವೃತ್ತಿಗಳು ಹಾಗೂ ಎತ್ತರ ಮತ್ತು ಕಟ್ಟಡಗಳ ಎತ್ತರಕ್ಕೆ ತಕ್ಕಂತೆ ರಸ್ತೆ ಅಗಲ, ಮುಖ್ಯ ರಸ್ತೆಗಳು,ಕಟ್ಟಡ ರೇಖೆಗಳು, ವಾಹನ ನಿಲುಗಡೆ ಸೌಲಭ್ಯಗಳು ಆಯಾ ವಲಯದ ಕಟ್ಟಡ ಬೆಳವಣಿಗೆ ಮತ್ತು ಅಂತಹ ಕಟ್ಟಡಗಳಿಗೆ ನಿಗಧಿಪಡಿಸಿದ ನಿಯಮಗಳ ಕುರಿತು ಸಲಹೆ ಸೂಚನೆಗಳನ್ನು ನೀಡುವಂತೆ ಪ್ರಾಧಿಕಾರದ ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.
ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ ಅವರು ಮಹಾಯೋಜನೆ ಕುರಿತು ಮಾಹಿತಿ ನೀಡಿದರು. ನಗರ ಯೋಜನಾಧಿಕಾರಿ ಸುಬ್ರಮಣ್ಯ ವಡ್ಡರ ಅವರು ನಿಯಮಾವಳಿ ಕುರಿತು ತಾಂತ್ರಿಕ ಮಾಹಿತಿ ನೀಡಿದರು. ಸಭೆಯಲ್ಲಿ ಪ್ರಾಧಿಕಾರದ ಅಧಿಕಾರಿ,ಸಿಬ್ಬಂದಿ ಉಪಸ್ಥಿತರಿದ್ದರೆಂದು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
Editor
Rudrappa B Asangi
Editor
Managing Editor
Chetan Asangi
Managing Editor


