ನಂಜನಗೂಡು ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 405ನೇ ಪಟ್ಟಾಭಿಷೇಕ ಮಹೋತ್ಸವ:ತಪಸ್ಸಿನಿಂದ ತೇಜಸ್ಸನ್ನು ಸಂಪಾದಿಸಿದವರು ಗುರುರಾಯರು-ಪಂಡಿತ ಗೋಪಿನಾಥಾಚಾರ್ಯ ಗಲಗಲಿ

ಸಪ್ತಸಾಗರ ವಾರ್ತೆ, ವಿಜಯಪುರ,ಫೆ. 19:
ಇಲ್ಲಿಯ ನಂಜನಗೂಡು ಶ್ರೀ ರಾಘ ವೇಂದ್ರ ಸ್ವಾಮಿಗಳವರ ಮಠದಲ್ಲಿ ಗುರುವಾರ ಶ್ರೀ ರಾಘವೇಂದ್ರ ಸ್ವಾಮಿಗಳ 405ನೇ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ದಿನೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ವೃಂದಾವನದ ನಿರ್ಮಾಲ್ಯ ವಿಸರ್ಜನ, ಬಳಿಕ ಪಂಚಾಮೃತ ಅಭಿಷೇಕ, ಅಷ್ಟೋತ್ತರ ನಡೆದವು. ನಂತರ ಮಠದ ಪ್ರಾಂಗಣದಲ್ಲಿ ರಾಯರ ಪಟ್ಟಾಭಿಷೇಕದ ಭಾವಚಿತ್ರದಿಂದೊಡಗೂಡಿ ಪುಷ್ಪಗಳಿಂದ ಅಲಂಕೃತ ಭವ್ಯ ರಥೋತ್ಸವ ನಡೆದು ಭಕ್ತ ವೃಂದದ ಭಕ್ತಿಗೀತೆಗಳ ಗಾಯನ ಶ್ರೀಮಠದ ತುಂಬೆಲ್ಲ ಮಾರ್ದನಿಸಿತು.
ಮುಂಜಾನೆಯಿಂದಲೇ ನಗರದ ವಿವಿಧ ಬಡಾವಣೆಗಳಿಂದ ಭಕ್ತರು ಶ್ರೀಮಠಕ್ಕೆ ಆಗಮಿಸಿ ವೃಂದಾವನದ ದರ್ಶನ ಪಡೆದು ಪುನೀತರಾಗುತ್ತಿದ್ದುದು ಕಂಡು ಬಂದಿತು.
ಹುಬ್ಬಳ್ಳಿಯ ಪ್ರವಚನಕಾರ ಪಂಡಿತ ಗೋಪಿನಾಥಾಚಾರ್ಯ ಗಲಗಲಿ ಪ್ರವಚನ ನೀಡಿ, “ಶ್ರೀ ರಾಘವೇಂದ್ರ ಗುರುಸಾರ್ವಭೌಮರು ತಪಸ್ಸಿನಿಂದ ಅದ್ಭುತವಾದ ತೇಜಸ್ಸನ್ನು ಸಂಪಾದನೆ ಮಾಡಿದವರು. ಅವರ ಕೀರ್ತಿ ದೇಶ ವಿದೇಶಗಳಲ್ಲಿ ಹರಡಿದೆ. ಅವರು ಮಾಡಿದ ಪವಾಡಗಳು ಇಂದಿಗೂ ಅನೇಕರ ಜೀವನದಲ್ಲಿ ನಡೆಯುತ್ತಲಿವೆ ಎಂದರು.
ಕೇವಲ ರಾಜಮಹಾರಾಜರಿಗೆ ಮಾಡುತ್ತಿದ್ದ ಪಟ್ಟಾಭಿಷೇಕ ಯತಿಗಳಾದ ಗುರುಸಾರ್ವಭೌಮರಿಗೆ ಮಾಡಿರುವದು. ಅವರು ಜ್ಞಾನ, ಭಕ್ತಿ, ವೈರಾಗ್ಯದ ದೈವಿ ಸಂಪತ್ತನ್ನು ಹೊಂದಿದ್ದರು ಎಂದು ವಿವರಿಸಿದರು.
ಇಡೀ ಆಧ್ಯಾತ್ಮಿಕ ಪ್ರಪಂಚವೇ ಪಶ್ನೋತ್ತರಗಳಿಂದ ತುಂಬಿದೆ ಎಂದು ಹೇಳಿದ ಅವರು, ಜ್ಞಾನ ಬೇಕು ಎನ್ನುವ ಹಂಬಲ ಇದ್ದವರು ಪ್ರಶ್ನೆ ಕೇಳಬೇಕು ಎಂದರು.
ಪಂಡಿತ ಮಧ್ವೇಶಾಚಾರ್ಯ ಜೋಶಿ(ಮುತ್ತಗಿ) ಗುರುಸಾರ್ವಭೌಮರ ಜೀವನ ಚರಿತ್ರೆ ಕುರಿತು ಉದ್ಭೋದಕ ಪ್ರವಚನ ನೀಡಿ ಗುರುಸಾರ್ವಭೌಮರು ಮಹಿಮೆ ಅಗಮ್ಯವಾದುದು. ಅವರು ಕಲ್ಪವೃಕ್ಷ ಕಾಮಧೇನು ಎಂಬುದು ಅನ್ವರ್ಥವಾಗಿದೆ ಎಂದರಲ್ಲದೇ ರಾಯರನ್ನು ಬಿಟ್ಟು ಯಾವುದೇ ಯತಿಗಳಿಗೆ ಪಟ್ಟಾಭಿಷೇಕ ನಡೆಯುತ್ತಿಲ್ಲ ಎಂದರು.
ಮಠದ ಅರ್ಚಕರಾದ ರವಿ ಆಚಾರ್ಯ ಹಾಗೂ ಶ್ರೀಧರಾಚಾರ್ಯರು ವೃಂದಾವನವನ್ನು ವಿವಿಧ ಬಗೆಯ ಫಲಪುಷ್ಪಗಳಿಂದ ಮಠದ ಪ್ರಾಂಗಣವನ್ನು ತಳಿರು ತೋರಣಗಳಲ್ಲದೇ ಬಾಳೆ ದಿಂಡುಗಳಿಂದ ಅಲಂಕರಿಸಿದ್ದು ಭಕ್ತರಲ್ಲಿ ಭಾವುಕತೆ ಮೆರೆಯಿತು.
ಕಾರ್ಯಕ್ರಮದಲ್ಲಿ ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ, ಪಂಡಿತ ಡಾ. ಕೃಷ್ಣಾಚಾರ್ಯ ಕಾಖಂಡಕಿ, ಪ್ರವಚನ ಸೇವಾಕರ್ತ ಆನಂದರಾವ ನಾಯಕ, ವಿಜಯಿಂದ್ರ ಜೋಶಿ, ಶ್ರೀಕೃಷ್ಣ ಪಡಗಾನೂರ, ಪ್ರಕಾಶ ಬಿಜಾಪುರ, ಅರುಣ ತೊರವಿ, ಗೋವಿಂದ ಸವದತ್ತಿ, ಭೀಮಣ್ಣ ಕುಲಕರ್ಣಿ, ಡಿ ಆರ್ ನಾಡಿಗ, ಬಿ.ಬಿ. ಕುಲಕರ್ಣಿ( ಮನಗೂಳಿ), ಶ್ರೀಧರ ಹರಿದಾಸ ವಾಡಕರ ಮುಂತಾದವರು ಭಾಗವಹಿಸಿದ್ದರು.

Share this