ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 19:
ಛತ್ರಪತಿ ಶಿವಾಜಿ ಮಹಾರಾಜರ ಧರ್ಮನಿಷ್ಠೆ, ನೀತಿ, ಆಡಳಿತ, ತ್ಯಾಗ, ಹಿಂದವಿ ಸ್ವರಾಜ್ಯದ ಪರಿಕಲ್ಪನೆ ಮತ್ತು ಧೈರ್ಯಕ್ಕೆ ತಾಯಿ ಜೀಜಾಬಾಯಿಯವರ ಸಂಸ್ಕಾರಗಳೇ ಕಾರಣ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿದರು
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಶಿವಾಜಿ ಮಹಾರಾಜರ ಆಡಳಿತವು ಪ್ರಜಾಹಿತ ಮತ್ತು ನ್ಯಾಯಬದ್ಧತೆಯ ಮೇಲೆ ನಿಂತಿದ್ದು, ಅದರ ಕೇಂದ್ರವಾಗಿ ರಾಯಗಢ ಕೋಟೆ ಮಹತ್ವ ಪಡೆದಿತ್ತು, ಅಷ್ಟೇ ಅಲ್ಲದೇ ವಿದೇಶಿ ದಬ್ಬಾಳಿಕೆಯನ್ನು ಎದುರಿಸಲು ಶಿವಾಜಿ ಮಹಾರಾಜರು ತೋರಿದ ತ್ಯಾಗ ಮತ್ತು ಧೈರ್ಯ ಇಂದಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಛತ್ರಪತಿ ಶಿವಾಜಿಯವರ ಧೈರ್ಯ, ಸಾಹಸ, ಯುದ್ಧನೀತಿ ಹಾಗೂ ಆಡಳಿತಾತ್ಮಕ ಕಾರ್ಯವೈಖರಿಯನ್ನು ಸ್ಮರಿಸಿ, ವಿದ್ಯಾರ್ಥಿನಿಯರು ಈ ಮೌಲ್ಯಗಳನ್ನು ಅಳವಡಿಸಿಕೊಂಡು ಮುಂದಿನ ಜೀವನದಲ್ಲಿ ನಿಷ್ಠೆಯಿಂದ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ್, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಅಧಿಕಾರಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿನಿಯರು ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದ ಸಂಯೋಜಕ ಪ್ರೊ.ನಾಮದೇವಗೌಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share this